ತಂದೆ, ತಾಯಿಯೇ ಜಗದ್ಗುರು ಎಂದು ಭಾವಿಸಿ ಜೀವಿಸಬೇಕು

| Published : Jun 10 2024, 12:32 AM IST

ತಂದೆ, ತಾಯಿಯೇ ಜಗದ್ಗುರು ಎಂದು ಭಾವಿಸಿ ಜೀವಿಸಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಹಳೆಯ ವಿದ್ಯಾರ್ಥಿಗಳು ತಂದೆ ತಾಯಿಯೇ ಜಗದ್ಗುರುಗಳೆಂದು ಭಾವಿಸಿ, ಪೂಜಿಸಬೇಕು. ಗೌರವದಿಂದ ನಡೆದುಕೊಂಡು ಬದುಕಬೇಕು ಎಂದು ಶರಣ ಪುಟ್ಟಪ್ಪ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಕೆ.ಸಿರಸಾಚಾರ್ ಅಭಿಪ್ರಾಯಪಟ್ಟಿದ್ದಾರೆ.

- ನಿವೃತ್ತ ಶಿಕ್ಷಕ ಕೆ.ಸಿರಸಾಚಾರ್‌ ಸಲಹೆ । ಕುಂಬಳೂರಿನಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ - - -

ಕನ್ನಡಪ್ರಭ ವಾರ್ತೆ, ಮಲೇಬೆನ್ನೂರು

ಹಳೆಯ ವಿದ್ಯಾರ್ಥಿಗಳು ತಂದೆ ತಾಯಿಯೇ ಜಗದ್ಗುರುಗಳೆಂದು ಭಾವಿಸಿ, ಪೂಜಿಸಬೇಕು. ಗೌರವದಿಂದ ನಡೆದುಕೊಂಡು ಬದುಕಬೇಕು ಎಂದು ಶರಣ ಪುಟ್ಟಪ್ಪ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಕೆ.ಸಿರಸಾಚಾರ್ ಅಭಿಪ್ರಾಯಪಟ್ಟರು.

ಇಲ್ಲಿಗೆ ಸಮೀಪದ ಕುಂಬಳೂರಿನ ಬಸವ ಗುರುಕುಲದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ೪೦ ವರ್ಷಗಳ ತಮ್ಮ ಸೇವಾ ಅನುಭವ ಹಂಚಿಕೊಂಡರು.

ನಾನು ಕಂಡ ಗುರುಕುಲದಲ್ಲಿ ಕಟ್ಟೆ ಮೇಲೆ ಸಿಮೆಂಟ್ ಚೀಲದ ಮೇಲೆ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುತ್ತಿತ್ತು. ಊಟದ ನಂತರ ಮಕ್ಕಳನ್ನು ಅರ್ಧ ಗಂಟೆ ನಿದ್ರೆಗೆ ಬಿಡಲಾಗುತ್ತಿತ್ತು. ಎರಡು ಕೊಠಡಿಗಳಿಗೆ ಕಿಟಕಿ, ಬಾಗಿಲು ಬಡಿದು ಗೋಡೆಗೆ ಸುಣ್ಣ ಹಚ್ಚಿ, ಮಕ್ಕಳಿಗಾಗಿ ಸೇವೆ ಮಾಡಿದ್ದು ಖುಷಿ ತಂದಿದೆ ಎಂದರು.

ಈಗ ನಾನು ಕಾಣುತ್ತಿರುವ ಗುರುಕುಲದಲ್ಲಿ ಹತ್ತಾರು ಕೊಠಡಿಗಳು, ಆಂಗ್ಲ ಮಾಧ್ಯಮ ತರಗತಿಯೂ ನಡೆದಿದೆ. ನನ್ನ ಕನಸಿನ ಗುರುಕುಲದಲ್ಲಿ ಹಠವಾದಿ ಶಿವಾನಂದ ಗುರೂಜಿ ಅವರಿಂದ ಹಣದ ಮಹತ್ವ, ಕಾಲದ ಮಹಿಮೆಯನ್ನು ಕಲಿತಿದ್ದೇನೆ. ಪೋಷಕರೇ ದೇವರೆಂದು ತಿಳಿದಿದ್ದೇನೆ, ಹಿರಿಯ ವಿದ್ಯಾರ್ಥಿಗಳು ಗ್ರಂಥಾಲಯ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ನಿವೃತ್ತ ಶಿಕ್ಷಕ ಮಂಜುನಾಥ್ ಮಾತನಾಡಿ, ದ್ರೋಣಾಚಾರ್ಯರ ಅವಧಿಯಲ್ಲಿಯೂ ಜಾತಿಯ ವ್ಯವಸ್ಥೆ ತಾಂಡವವಾಡುತ್ತಿತ್ತು. ಅನಂತರ ಬಸವಣ್ಣನವರ ಕಾಲದಲ್ಲಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಸಮಾನಾಗಿ ದೊಕುವಂತಾಯಿತು. ಶಿಷ್ಯ ವಿದ್ಯಾರ್ಥಿಗಳೇ ಸಮಾಜವನ್ನು ಮುನ್ನಡೆಸುವವರಾಗಿ ಗುರುಗಳಿಗೆ ಆದರ್ಶಪ್ರಾಯರಾಗಿದ್ದಾರೆ ಎಂದರು.

ನಿವೃತ್ತ ಉಪಾಧ್ಯಾಯರಾದ ಮಂಜುನಾಥಾಚಾರಿ, ಎ.ಬಿ.ಹನುಮಂತಪ್ಪ, ಜಯಮ್ಮ, ದಂಡಿ ತಿಪ್ಪೇಸ್ವಾಮಿ, ಹಳೇ ವಿದ್ಯಾರ್ಥಿಗಳಾದ ಪ್ರಕಾಶ್, ಕೆ.ಮಂಜುನಾಥ್, ಭೂಮಿಕಾ, ರೇಖಾ, ಶ್ವೇತಾ, ಗೋವಿಂದ್, ನಿರಂಜನ್, ಬಾಬು, ಚೈತ್ರಾ ಮತ್ತಿತರರು ಅನಿಸಿಕೆ ಹಂಚಿಕೊಂಡರು. ನೂರಾರು ವಿದ್ಯಾರ್ಥಿಗಳು, ಪೋಷಕರು ಜಮಾಯಿಸಿ ೬೦ಕ್ಕೂ ಹೆಚ್ಚು ಶಿಕ್ಷಕರನ್ನು ಗೌರವಿಸಿದರು.

- - - -ಚಿತ್ರ-೧: ಕುಂಬಳೂರಿನ ಬಸವ ಗುರುಕುಲದಲ್ಲಿ ಭಾನುವಾರ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.