ಎರ್ರಿತಾತನವರ ನಿಜವಾದ ಭಕ್ತರಾಗಬೇಕಾದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು

ಬಳ್ಳಾರಿ: ಬಳ್ಳಾರಿ ಜಿಲ್ಲೆ ಶರಣರು, ಸಂತರು, ಮಹಾತ್ಮರು ಹಾಗೂ ಅವಧೂತರ ಪವಿತ್ರ ಪರಂಪರೆ ಹೊಂದಿರುವ ಪುಣ್ಯಭೂಮಿಯಾಗಿದೆ. ಈ ನೆಲದಲ್ಲಿ ತಮ್ಮ ಆಧ್ಯಾತ್ಮಿಕ ಚಿಂತನೆ, ತಪಸ್ಸು ಹಾಗೂ ಅನುಭಾವದ ಮೂಲಕ ಭಕ್ತರ ಬದುಕಿಗೆ ಬೆಳಕಾದ ಮಹಾಯೋಗಿಗಳಲ್ಲಿ ಚೇಳ್ಳಗುರ್ಕಿಯ ಶ್ರೀ ಎರ್ರಿತಾತನವರು ಪ್ರಮುಖರು. ಅವರ ಜೀವನ, ಸಾಧನೆ ಮತ್ತು ಮಹಿಮೆ ಭಕ್ತಿಗೀತೆಗಳ ಮೂಲಕ ಜನಮಾನಸಕ್ಕೆ ತಲುಪಿಸುವ ಕಾರ್ಯ ಶ್ಲಾಘನೀಯ ಎಂದು ಸಂಡೂರು ತಾಲೂಕು ಯಶ್ವಂತನಗರ ವಿರಕ್ತಮಠದ ಡಾ. ಸಿದ್ಧರಾಮ ಸ್ವಾಮೀಜಿ ಹೇಳಿದರು.ನಗರದ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ (ಬಿಪಿಎಸ್ಸಿ) ಶರಣ ಸಭಾಂಗಣದಲ್ಲಿ ಸಾವಿತ್ರಮ್ಮ ಪ್ರಕಾಶನದಿಂದ ಹಿರಿಯ ಪತ್ರಕರ್ತ ಕೆ.ಎಂ. ಮಂಜುನಾಥ ಡಿ.ಕಗ್ಗಲ್ಲು ರಚಿಸಿರುವ ಶಿವಾಂಶಸಂಭೂತ ಶ್ರೀ ಎರ್ರಿತಾತ ಭಕ್ತಿಗೀತೆಗಳ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಚೇಳ್ಳಗುರ್ಕಿಯ ಎರ್ರಿತಾತನವರು ಭಕ್ತರ ಉದ್ಧಾರಕ್ಕಾಗಿ ಈ ಭಾಗಕ್ಕೆ ಆಗಮಿಸಿ, ತಮ್ಮ ಆಧ್ಯಾತ್ಮಿಕ ಶಕ್ತಿ ಹಾಗೂ ಅನುಗ್ರಹದಿಂದ ಭಕ್ತ ಸಮುದಾಯವನ್ನು ಪುನೀತಗೊಳಿಸಿದ್ದಾರೆ. ಇಂತಹ ಮಹಾನ್ ಅವಧೂತರ ಕುರಿತು ಭಕ್ತಿಗೀತೆ ರಚಿಸುವ ಮೂಲಕ ಲೇಖಕ ಕೆ.ಎಂ.ಮಂಜುನಾಥ ಡಿ.ಕಗ್ಗಲ್ಲು ಅವರು ಎರ್ರಿತಾತನವರ ಕೃಪೆಗೆ ಪಾತ್ರರಾಗಿದ್ದಾರೆ. ಭಕ್ತಿಗೀತೆಗಳು ಕೇವಲ ಹಾಡುಗಳಾಗದೆ, ಭಕ್ತರ ಮನಸ್ಸಿನಲ್ಲಿ ಭಕ್ತಿ, ಶ್ರದ್ಧೆ ಹಾಗೂ ಆಧ್ಯಾತ್ಮಿಕ ಅರಿವನ್ನು ಮೂಡಿಸುವ ಮಾಧ್ಯಮಗಳಾಗಬೇಕು ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆಧ್ಯಾತ್ಮ ಚಿಂತಕ ಚಂದ್ರಶೇಖರಗೌಡ ಮಸೀದಿಪುರ, ಇಚ್ಛಾಶಕ್ತಿ, ಕ್ರಿಯಾಶಕ್ತಿ ಮತ್ತು ಜ್ಞಾನಶಕ್ತಿಗಳು ಸಮನ್ವಯಗೊಂಡಾಗ ಮಾತ್ರ ಮಹತ್ವದ ಸಂಕಲ್ಪಗಳು ಸಾಕಾರಗೊಳ್ಳಲು ಸಾಧ್ಯ. ಸಾವಿತ್ರಮ್ಮ ಪ್ರಕಾಶನದ ಯಲ್ಲನಗೌಡ ಶಂಕರಬಂಡೆ ತಮ್ಮ ತಾಯಿಯ ಹೆಸರಿನಲ್ಲಿ ಪ್ರಕಾಶನ ಆರಂಭಿಸುವ ಮೂಲಕ ಸಾಹಿತ್ಯ ಮತ್ತು ಸತ್ಸಂಗದ ಸೇವೆಗೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ತಾಯಿಯ ನೆನಪನ್ನು ಸಾರ್ಥಕಗೊಳಿಸುವುದರ ಜತೆಗೆ ಸಮಾಜಕ್ಕೆ ಆಧ್ಯಾತ್ಮಿಕ ಸಾಹಿತ್ಯ ಪರಿಚಯಿಸುವ ಸತ್ಕಾರ್ಯ ಇದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎರ್ರಿತಾತನವರ ನಿಜವಾದ ಭಕ್ತರಾಗಬೇಕಾದರೆ ಆತ್ಮಸಾಕ್ಷಿಗೆ ಅನುಗುಣವಾಗಿ ಬದುಕಬೇಕು. ನಮ್ಮ ನಡೆ ಮತ್ತು ನುಡಿಯಲ್ಲಿ ಏಕತೆ ಇರಬೇಕು. ಹೊರಗೊಂದು, ಒಳಗೊಂದು ವ್ಯಕ್ತಿತ್ವ ಹೊಂದಿರುವವರು ನಿಜವಾದ ಭಕ್ತರಾಗಲು ಸಾಧ್ಯವಿಲ್ಲ. ಮಾಡುವ ಕಾಯಕದಲ್ಲಿ ಪ್ರಾಮಾಣಿಕತೆ, ಬದುಕಿನಲ್ಲಿ ಶುದ್ಧತೆ ಮತ್ತು ನಡವಳಿಕೆಯಲ್ಲಿ ಸತ್ಯನಿಷ್ಠೆ ಇದ್ದಾಗ ಮಾತ್ರ ಮಹಾಯೋಗಿಗಳ ತತ್ವಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯ. ನಮ್ಮ ಭಾಗದಲ್ಲಿ ಮಹಾಯೋಗಿಗಳು, ಸಂತರು ಹಾಗೂ ಅವಧೂತರು ನಡೆದಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದೇ ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಶ್ರೀಮಂತಿಕೆಗೆ ಸಾಕ್ಷಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣ ಮಾತನಾಡಿ, ಕೆ.ಎಂ.ಮಂಜುನಾಥ ಡಿ.ಕಗ್ಗಲ್ಲು ರಚಿಸಿರುವ ಭಕ್ತಿಗೀತೆಗಳು ಭಕ್ತರ ಮನಸ್ಸಿನಲ್ಲಿ ಭಕ್ತಿಭಾವವನ್ನು ಉದ್ದೀಪನಗೊಳಿಸುವಂತಿವೆ. ಈ ಗೀತೆಗಳನ್ನು ಭಜನಾ ಮಂಡಳಿಗಳು ತಮ್ಮ ಭಜನಾ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಹಾಡುವಂತಾಗಬೇಕು. ನಾಡಿನ ಖ್ಯಾತ ಗಾಯಕರಿಂದ ರಾಗ ಸಂಯೋಜನೆ ಮಾಡಿಸಿ, ಸಂಗೀತ ರೂಪದಲ್ಲಿ ಜನರಿಗೆ ತಲುಪಿಸುವ ಪ್ರಯತ್ನ ನಡೆಯಬೇಕು. ಆಗ ಎರ್ರಿತಾತನವರ ಮಹಿಮೆ ಮನೆಮನೆಗೂ ತಲುಪುವುದರ ಜತೆಗೆ ಭಕ್ತಿಗೀತೆಗಳು ಸದಾ ಜನರ ನಾಲಿಗೆಯಲ್ಲಿ ಗುನುಗುವಂತಾಗುತ್ತವೆ ಎಂದು ಆಶಿಸಿದರು.

ನಿವೃತ್ತ ಶಿಕ್ಷಕ ಕೆ.ಎಂ.ಸಿದ್ಧಲಿಂಗಯ್ಯ ಮಾತನಾಡಿ, ತಾಯಿ ಸಾವಿತ್ರಮ್ಮ ಅವರ ಹೆಸರಿನಲ್ಲಿ ಯಲ್ಲನಗೌಡ ಶಂಕರಬಂಡೆ ಅವರು ಪ್ರಕಾಶನ ಆರಂಭಿಸಿರುವುದು ಹೆಮ್ಮೆಯ ಸಂಗತಿ. ತಾಯಿ ಎಂದರೆ ಕೇವಲ ಜನ್ಮ ನೀಡಿದವರಲ್ಲ; ಮಕ್ಕಳ ಬದುಕಿಗೆ ಸಂಸ್ಕಾರ, ಮೌಲ್ಯ ಮತ್ತು ಮಾನವೀಯತೆಯ ಬೀಜ ಬಿತ್ತುವ ಮಹಾನ್ ಶಕ್ತಿ. ಸಾವಿತ್ರಮ್ಮ ಅವರು ಅನೇಕ ಕಷ್ಟಕಾರ್ಪಣ್ಯಗಳ ನಡುವೆಯೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಿದವರು. ಅವರ ಹೆಸರಿನಲ್ಲಿ ಸಾಹಿತ್ಯ ಸೇವೆ ನಡೆಯುತ್ತಿರುವುದು ತಾಯಿಗೆ ಸಲ್ಲಿಸಿದ ಗೌರವವಾಗಿದೆ ಎಂದರು.

ಬಿಪಿಎಸ್ಸಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಎಸ್.ಜೆ.ವಿ.ಮಹಿಪಾಲ್ ಅವರು ಚೇಳ್ಳಗುರ್ಕಿ ಶ್ರೀ ಎರ್ರಿತಾತನವರ ಮಹಿಮೆ, ಆಧ್ಯಾತ್ಮಿಕ ಸಾಧನೆ ಹಾಗೂ ಭಕ್ತರ ಬದುಕಿನಲ್ಲಿ ಅವರಿಗಿರುವ ಮಹತ್ವ ಸ್ಮರಿಸಿದರು.

ಹಿರಿಯ ಪತ್ರಕರ್ತ ಶಶಿಧರ ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕೃತಿಯ ಆಶಯ ಮತ್ತು ರಚನೆಯ ಹಿನ್ನೆಲೆ ಪರಿಚಯಿಸಿದರು. ಕೃತಿಯ ಲೇಖಕ ಕೆ.ಎಂ. ಮಂಜುನಾಥ ಡಿ.ಕಗ್ಗಲ್ಲು ಅವರು ಲೇಖಕರ ನುಡಿಗಳನ್ನಾಡಿ, ಎರ್ರಿತಾತನವರ ಮೇಲಿನ ಭಕ್ತಿ ಮತ್ತು ಶ್ರದ್ಧೆಯೇ ಈ ಭಕ್ತಿಗೀತೆಗಳ ರಚನೆಗೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.

ಚೇಳ್ಳಗುರ್ಕಿ ಶ್ರೀ ಎರ್ರಿಸ್ವಾಮಿ ಜೀವಸಮಾಧಿ ಟ್ರಸ್ಟ್ ಅಧ್ಯಕ್ಷ ಎಚ್. ಬಾಳನಗೌಡ, ಶ್ರೀ ಎರ್ರಿಸ್ವಾಮಿ ದಾಸೋಹ ಸೇವಾ ಸಂಘದ ಅಧ್ಯಕ್ಷ ಜೆ. ದೊಡ್ಡಬಸವನಗೌಡ ಉಪಸ್ಥಿತರಿದ್ದರು. ಸಾವಿತ್ರಮ್ಮ ಪ್ರಕಾಶನದ ಯಲ್ಲನಗೌಡ ಶಂಕರಬಂಡೆ ಹಾಗೂ ರಾಮು ಎಮ್ಮಿಗನೂರು ಕಾರ್ಯಕ್ರಮ ನಿರ್ವಹಿಸಿದರು. ಬೆಳಗಲ್ಲು ಹನುಮಂತು, ಬೆಳಗಲ್ಲು ರೇಖಾ, ಪುಟ್ಟರಾಜ ಡಿ.ಕಗ್ಗಲ್ಲು ಹಾಗೂ ವೀರ ಪಂಚಾಕ್ಷರಿ ಅವರು ಭಕ್ತಿಗೀತೆ ಹಾಡಿ ಸಮರ್ಪಿಸಿದರು.