ಈರುಳ್ಳಿ ಬೀಜ ವಿಫಲ, ಕಣ್ಣೀರಿಡುತ್ತಿರುವ ರೈತರು

| Published : Sep 30 2024, 01:24 AM IST

ಸಾರಾಂಶ

ಬೇಳೂರು ಸೇರಿದಂತೆ ತಾಲೂಕಿನಾದ್ಯಂತ ಕೇಸರಿ ಕಂಪನಿ ಈರುಳ್ಳಿ ಬೀಜ ಬಿತ್ತನೆ ಮಾಡಿದ ರೈತರು ಈಗ ಕಣ್ಣೀರಿಡುತ್ತಿದ್ದಾರೆ. ಬೆಳೆ ಬೆಳೆದು ನಿಂತಿದ್ದರೂ ಈರುಳ್ಳಿ ಆಗಿದ್ದು ಅಷ್ಟಕ್ಕಷ್ಟೆ.

- ಹಾಕಿದ ಅಷ್ಟು ರೈತರ ಬೆಳೆ ವಿಫಲ

- ಬೆಳೆದು ನಿಂತರೂ ಈರುಳ್ಳಿ ಆಗಿದ್ದು ಮಾತ್ರ ಅಷ್ಟಕ್ಕಷ್ಟೆ

- ನ್ಯಾಯಾಲಯದ ಮೊರೆ ಹೋಗಲು ತೀರ್ಮಾನ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಬೇಳೂರು ಸೇರಿದಂತೆ ತಾಲೂಕಿನಾದ್ಯಂತ ಕೇಸರಿ ಕಂಪನಿ ಈರುಳ್ಳಿ ಬೀಜ ಬಿತ್ತನೆ ಮಾಡಿದ ರೈತರು ಈಗ ಕಣ್ಣೀರಿಡುತ್ತಿದ್ದಾರೆ. ಬೆಳೆ ಬೆಳೆದು ನಿಂತಿದ್ದರೂ ಈರುಳ್ಳಿ ಆಗಿದ್ದು ಅಷ್ಟಕ್ಕಷ್ಟೆ.

ಹೌದು, ಕೇಸರಿ ಕಂಪನಿಯ ಈರುಳ್ಳಿ ಬೀಜವನ್ನು ಹಾಕಿದ ಕೊಪ್ಪಳ ತಾಲೂಕಿನ ಬೇಳೂರು ಗ್ರಾಮದ 32ಕ್ಕೂ ಹೆಚ್ಚು ರೈತರು ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಳುವರಿ ತೀರಾ ಕಡಿಮೆ ಬಂದಿದೆ.

ಈ ವರ್ಷ ಭರ್ಜರಿ ದರ ಇರುವುದರಿಂದ ಈರುಳ್ಳಿ ಬೆಳೆ ಲಾಭ ಮಾಡಿಕೊಳ್ಳಬೇಕು ಎಂದು ಕೊಂಚ ಹೆಚ್ಚೇ ಖರ್ಚು ಮಾಡಿದ್ದಾರೆ. ಆದರೂ ಅದು ಫಲವೇ ನೀಡಿಲ್ಲ. ಹತ್ತಾರು ಬಾರಿ ಕ್ರಿಮಿನಾಶಕ ಸಿಂಪಡಣೆ ಮಾಡಿದರೂ ಪರಿಣಾಮಕಾರಿಯಾಗಿಲ್ಲ.

ಒಂದಲ್ಲ, ಎರಡಲ್ಲ, ಬೇಳೂರು ಗ್ರಾಮದಲ್ಲಿಯೇ ಸುಮಾರು 32 ರೈತರು ಕೇಸರಿ ಕಂಪನಿಯ ಬೀಜ ಹಾಕಿದ್ದಾರೆ. ಆದರೆ, ಅವರೆಲ್ಲರೂ ಬೆಳೆಯೂ ಹೀಗೆ ಆಗಿದ್ದು, ತೀವ್ರ ಚಿಂತೆಗೀಡಾಗಿದ್ದಾರೆ.

ಗ್ಯಾನಪ್ಪ ಬೇಳೂರು ಅವರ ನಾಲ್ಕು ಎಕರೆ ಹೊಲದಲ್ಲಿ ಬೆಳೆದ ಈರುಳ್ಳಿ ಫಲ ಕೊಡುವ ವೇಳೆಯಲ್ಲಿ ಸುತ್ತರಿದುಕೊಂಡು ನೆಲಕ್ಕೆ ಬೀಳುತ್ತಿದೆ. ಈರುಳ್ಳಿ ಆಗಿದ್ದರೂ ಅಷ್ಟಕ್ಕಷ್ಟೆ ಆಗಿದೆ. ಅದು ಮಾರುಕಟ್ಟೆಯಲ್ಲಿ ಬೆಲೆ ಸಿಗದ, ಚಿಕ್ಕಗಡ್ಡೆಗಳಾಗಿವೆ. ಭಾರಿ ಪ್ರಮಾಣದ ಹಾನಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.ಕೋರ್ಟ್ ಮೊರೆ:

ರೈತರು ಈಗಾಗಲೇ ಕಂಪನಿಯ ಪ್ರತಿನಿಧಿಗಳಿಗೆ ಮೌಖಿಕ ದೂರು ನೀಡಿದ್ದಾರೆ. ಕಂಪನಿಯವರು ಇವತ್ತು ಬರುತ್ತೇವೆ, ನಾಳೆ ಬರುತ್ತೇವೆ ಎಂದು ದಿನ ದೂಡುತ್ತಲೇ ಇದ್ದಾರೆ. ಇದರಿಂದ ರೈತರು ಈಗ ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ರೈತರು ಬೆಳೆದ ಬೆಳೆಗೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ಗ್ರಾಹಕರ ನ್ಯಾಯಾಲಯದಲ್ಲಿ ಹೋರಾಟ ಮಾಡಲು ತೀರ್ಮಾನಿಸಿದ್ದಾರೆ.

ಕೇವಲ ಒಬ್ಬರ ಹೊಲದಲ್ಲಿ ಸಮಸ್ಯೆಯಾಗಿದ್ದರೆ ಕಂಪನಿಯವರು ಏನಾದರೂ ಕಾರಣ ಹೇಳಬಹುದಿತ್ತು. ಆದರೆ, ಕೇಸರಿ ಕಂಪನಿಯ ಬೀಜ ಹಾಕಿದ ಬಹುತೇಕ ರೈತರು ಇದೇ ಸಮಸ್ಯೆ ಎದುರಿಸುತ್ತಿರುವುದರಿಂದ ನ್ಯಾಯಾಲಯದಲ್ಲಿ ಹೋರಾಟ ಮಾಡಲು ತೀರ್ಮಾನ ಮಾಡಿದ್ದಾರೆ.

ಹಾಕಿದ ಬೆಳೆ ಬಹುತೇಕ ಹಾನಿಯಾಗಿದೆ. ಇದರಿಂದ ನಮಗೆ ತುಂಬಾ ಹಾನಿಯಾಗಿದ್ದು, ಕಂಪನಿಯವರು ನಷ್ಟಕ್ಕೆ ಪರಿಹಾರ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯದ ಮೆಟ್ಟಿಲು ಏರಲು ತೀರ್ಮಾನ ಮಾಡಿದ್ದೇವೆ ಎನ್ನುತ್ತಾರೆ ರೈತ ಗ್ಯಾನಪ್ಪ ಬೇಳೂರು.