ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಹದೇಶ್ವರಬೆಟ್ಟ ಸಮೀಪದ ದಟ್ಟಕಾನನದ ನಡುವೆ ಇರುವ ನಾಗಮಲೆ ಕ್ಷೇತ್ರಕ್ಕೆ ಚಾರಣಕ್ಕೆ ತೆರಳುವ ಮಾದಪ್ಪನ ಭಕ್ತರಿಗೆ ಆನ್‌ಲೈನ್ ಬುಕಿಂಗ್ ನಂತರವಷ್ಟೆ ತೆರಳಲು ಸರ್ಕಾರ ಆದೇಶವನ್ನು ಮಾಡಿದೆ.ಮಲೆಮಹದೇಶ್ವರ ವನ್ಯಜೀವಿ ವಿಭಾಗ ಮತ್ತು ಕಾವೇರಿ ವನ್ಯಜೀವಿ ವಿಭಾಗದ ಅರಣ್ಯದ ತಪ್ಪಲಿನಲ್ಲಿರುವ ನಾಗಮಲೆ ಕ್ಷೇತ್ರದಲ್ಲಿ ಕಲ್ಲಿನ ಲಿಂಗದ ರೂಪದಲ್ಲಿ ಶ್ರೀಮಹದೇಶ್ವರ ಸ್ವಾಮಿ ನೆಲೆಸಿದ್ದು ಈ ಪವಿತ್ರ ಸ್ಥಳಕ್ಕೆ ತೆರಳಲು ಮಹದೇಶ್ವರ ಬೆಟ್ಟದಿಂದ ಸುಮಾರು 14 ಕಿ.ಮೀ ಅಂತರವಿದೆ. ದಟ್ಟ ಅರಣ್ಯದ ಮಧ್ಯದಲ್ಲಿರುವ ಈ ಪವಿತ್ರ ಸ್ಥಳಕ್ಕೆ ರಾಜ್ಯದ ನಾನಾ ಕಡೆಯಿಂದ ಪ್ರತಿ ವರ್ಷ ಸಾವಿರಾರು ಸಂಖ್ಯೆಯ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಈ ಮಾರ್ಗವು ದಟ್ಟವಾದ ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ, ಚಿರತೆ, ಕರಡಿ ಮುಂತಾದ ವನ್ಯಪ್ರಾಣಿಗಳ ಚಲನವಲನ ಕಂಡುಬರುತ್ತಿರುವುರಿಂದ ಅರಣ್ಯ ಇಲಾಖೆಯು ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪಾಲಾರ್ ವನ್ಯಜೀವಿ ವಲಯ ವ್ಯಾಪ್ತಿಗೆ ಬರುವ ತುಳಸಿಕೆರೆ ಪರಿಸರ ಅಭಿವೃದ್ಧಿ ಸಮಿತಿಯ ವತಿಯಿಂದ 2018-19 ರಲ್ಲಿ ಸ್ಥಳೀಯ ವಾಹನಗಳಲ್ಲಿ ಭಕ್ತಾದಿಗಳನ್ನು ಇಂಡಿಗನತ್ತ ಗ್ರಾಮಕ್ಕೆ ಹೋಗುವವರೆಗೂ ಪ್ರವೇಶ ಶುಲ್ಕ ಸಂಗ್ರಹಿಸಿ ಬಿಡಲಾಗುತಿತ್ತು. ನಂತರ ಅಲ್ಲಿಂದ ಭಕ್ತಾಧಿಗಳು ಕಾಲ್ನಡಿಗೆಯಲ್ಲಿ ಹೋಗಿ ಸ್ವಾಮಿಯ ದರ್ಶನ ಪಡೆದು ವಾಪಸ್ ಆಗುತ್ತಿದ್ದರು. ಆದರೆ, ಅರಣ್ಯ ಹಾಗೂ ವನ್ಯಜೀವಿಗಳ ಹಿತದೃಷ್ಟಿಯಿಂದ ಕಳೆದ ವರ್ಷ ಸರ್ಕಾರ ಚಾರಣಕ್ಕೆ ತೆರಳದಂತೆ ತಾತ್ಕಾಲಿಕ ತಡೆವೊಡ್ಡಿತ್ತು. ಪ್ರಸ್ತುತ ಆನ್‌ಲೈನ್ ಬುಕಿಂಗ್ ನಂತರವಷ್ಟೆ ನಾಗಮಲೆ ಕ್ಷೇತ್ರಕ್ಕೆ ತೆರಳಲು ಭಕ್ತರಿಗೆ ಅವಕಾಶ ಕಲ್ಪಿಸಿದೆ.
ಹಳೆಯೂರು ಗೇಟ್‌ನಿಂದ ಚಾರಣ ಪ್ರಾರಂಭ:ಭಕ್ತಾದಿಗಳು 24 ಗಂಟೆಗಳಲ್ಲಿ ಸಹ ಸ್ವಾಮಿಯ ದರ್ಶನ ಪಡೆದು ರಾತ್ರಿ ವೇಳೆಯಲ್ಲಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಕಾಡು ಪ್ರಾಣಿಗಳು ದಾಳಿ ನಡೆಸಿರುವ ಘಟನೆಗಳು ಹಿಂದೆ ನಡೆದಿರುವುದರಿಂದ ಹಾಗೂ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಅರಣ್ಯ ಇಲಾಖೆಗೆ ಕಷ್ಟಕರವಾಗಿ ಪರಿಣಮಿಸಿರುತ್ತದೆ. ಈ ಮಾರ್ಗದಲ್ಲಿ ಭಕ್ತಾದಿಗಳನ್ನು ಕರೆದೊಯ್ಯುವ ವಾಹನಗಳ ವಿಮೆ, ಫಿಟ್‌ನೆಸ್ ಇಲ್ಲದೇ ವಾಹನಗಳು ಸಂಚರಿಸುತ್ತಿದ್ದರಿಂದ ನಿಯಮ ಮೀರಿ ಭಕ್ತಾದಿಗಳನ್ನು ವಾಹನಗಳಲ್ಲಿ ಹೆಚ್ಚಾಗಿ ಕರದೊಯುತ್ತಿದ್ದರಿಂದ ದಿ.5.2.2024 ರಂದು ಸದರಿ ವಾಹನಗಳ ಸಂಚಾರ ನಿಲ್ಲಿಸಿ ಅರಣ್ಯ ಸಚಿವರ ಆದೇಶದ ಮೇರೆಗೆ ಆನ್‌ಲೈನ್ ಮುಖಾಂತರ ನಾಗಮಲೆಗೆ ಭಕ್ತಾದಿಗಳು ತೆರಳಲು ಅವಕಾಶ ಕಲ್ಪಿಸಿಕೊಡಬೇಕೆಂದು ಸೂಚಿಸಿದ ಮೇರೆಗೆ ಭಕ್ತಾದಿಗಳು ನಾಗಮಲೆಗೆ ತೆರಳಲು ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿತ್ತು. ಪ್ರಸ್ತುತ ಸರ್ಕಾರದ ಆದೇಶದ ಅನ್ವಯ ಎಲ್ಲಾ ಚಾರಣ ಸ್ಥಳಗಳಿಗೆ ವ್ಯವಸ್ಥಿತ ಮತ್ತು ಚಾರಣಿಕರಿಗೆ ಮತ್ತು ಪರಿಸರ ಸಂರಕ್ಷಣೆಯ ಹಿತ ದೃಷ್ಟಿಯಿಂದ ಅರಣ್ಯ ಇಲಾಖೆ ವೆಬ್ ಸೈಟ್‌ನಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಗಮಲೆ ಪುಣ್ಯ ಕ್ಷೇತ್ರಕ್ಕೆ ಆನ್‌ಲೈನ್ ಮೂಲಕ ಕಾಯ್ದಿರಿಸಿ ಕಾಲುನಡಿಗೆಯ ಮುಖಾಂತರ ಹಳೆಯೂರು ಗೇಟ್‌ನಿಂದ ಹೋಗಬಹುದಾಗಿದೆ.ಬುಕ್ಕಿಂಗ್ ವಿವರ:ಕಾಲ್ನಡಿಗೆಯಲ್ಲಿ ಚಾರಣ ಕೈಗೊಳ್ಳುವ ಭಕ್ತಾದಿಗಳು ಕರ್ನಾಟಕ ಅರಣ್ಯ ಇಲಾಖೆಯ ವೆಬ್‌ಸೈಟ್ www.aranyavihaara.karnataka.gov.in ನಲ್ಲಿ ದಿನಾಂಕ ನಮೂದಿಸಿ ಸ್ಲಾಟ್‌ನ್ನು ಆಯ್ಕೆ ಮಾಡಿಕೊಳ್ಳಬಹುದು. ಭಕ್ತಾದಿಗಳಿಗೆ/ಚಾರಣಿಕರಿಗೆ ಬೆಳ್ಳಗೆ 6 ರಿಂದ 10 ಗಂಟೆಯ ಸ್ಲಾಟ್‌ನ್ನು ಬುಕ್ಕಿಂಗ್ ಅವಕಾಶನೀಡಿದ್ದು, ಚಾರಣ ಪಥವು ಒಟ್ಟು ದೂರ 14 ಕಿ.ಮೀ ಗಳಿದ್ದು ಹಳೆಯೂರು ಗೇಟ್ ಪ್ರಾರಂಭಿಸಿ ನಾಗಮಲೆ ತಲುಪಿ ಮತ್ತು ವಾಪಾಸ್ ಹಳೆಯೂರು ಗೇಟ್‌ನಲ್ಲಿ ಚಾರಣ ಮುಕ್ತಾಯಗೊಳ್ಳುತ್ತದೆ ಚಾರಣಿಕರ ಜೊತೆಗೆ ಅರಣ್ಯ ಇಲಾಖೆಯ ಗೈಡ್ ಒಬ್ಬರು ಜೊತೆ ಇದ್ದು ಮಾಹಿತಿ ಒದಗಿಸಿರುತ್ತಾರೆ.ಅರಣ್ಯ ಇಲಾಖೆಯು ಪ್ರಾಯೋಗಿಕವಾಗಿ ಒಂದು ದಿನಕ್ಕೆ 200 ಜನರಿಗೆ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಜನರಿಗೆ ಅವಕಾಶ ಮಾಡಿಕೊಡಲಾಗುವುದು ಹಾಗೂ ಚಾರಣಕ್ಕೆ ಬರುವ ಭಕ್ತಾದಿಗಳು ಅರಣ್ಯ ಸಚಿವರ ನಿರ್ದೇಶನದ ಮೇರೆಗೆ ಏಕಬಳಕೆಯ ಪ್ಲಾಸ್ಟಿಕ್‌ನ್ನು ವನ್ಯಧಾಮದಲ್ಲಿ ನಿಷೇಧಿಸಲಾಗಿದ್ದು ಹಾಗೂ ಭಕ್ತಾದಿಗಳು ಅರಣ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ತಿಳಿಸಿದೆ.
ಭಕ್ತಾದಿಗಳಿಗೆ/ಚಾರಣಿಕರಿಗೆ ನೋಂದಾಯಿಸಿಕೊಳ್ಳಲು ಯಾವುದೇ ತೊಡಕು ಉಂಟಾದರೆ ವಲಯ ಅರಣ್ಯಾಧಿಕಾರಿ ಮಹದೇಶ್ವರಬೆಟ್ಟ ವನ್ಯಜೀವಿ ವಲಯ ಕಚೇರಿ, ಮಹದೇಶ್ವರಬೆಟ್ಟ 9481995510, ಉಪ ವಲಯ ಅರಣ್ಯಾಧಿಕಾರಿ ಮಹದೇಶ್ವರಬೆಟ್ಟ 9481995527, ವಲಯ ಅರಣ್ಯಾಧಿಕಾರಿ ಪಾಲಾರ್ 9481995512, ಉಪ ವಲಯ ಅರಣ್ಯಾಧಿಕಾರಿ ಪಾಲಾರ್ 9481995531, ಗಸ್ತು ಅರಣ್ಯ ಪಾಲಕರು, ಇಂಡಿಗನತ್ತ ಗಸ್ತು 9481995597 ಸಂಪರ್ಕಿಸುವಂತೆ ಕೋರಲಾಗಿದೆ.