ಮಾನವ ಕಳ್ಳಸಾಗಾಣಿಕೆ ಹಾಗೂ ಬಾಲ್ಯ ವಿವಾಹ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಈಗ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ. ಸಮಾಜಘಾತುಕರು ನಾನಾ ರೀತಿಯಲ್ಲಿ ಆಮಿಷ ಒಡ್ತಾರೆ, ನಿಮಗೆ ಒಳ್ಳೆಯದು ಯಾವುದು ಅಥವಾ ಕೆಟ್ಟದ್ದು ಯಾವುದು ಎಂದು ಯೋಚನೆ ಮಾಡುವ ಶಕ್ತಿ ಇಲ್ಲದ ಕಾರಣ ಆಮಿಷಕ್ಕೆ ಬಲಿಯಾಗುತ್ತೀರಿ.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ನಮ್ಮ ದೇಶದಲ್ಲಿ ಮಾನವ ಕಳ್ಳ ಸಾಗಾಣಿಕೆ ಮತ್ತು ಬಾಲ್ಯವಿವಾಹ ನಿಷೇಧ ಕುರಿತು ಕಾನೂನು ಜಾರಿಗೆ ಬಂದಿದೆ. ನಮಗೆ ಕಾನೂನಿನ ಅರಿವಿದ್ದರೆ ಮಾತ್ರ ನಾವು ಮಾನವ ಕಳ್ಳಸಾಗಾಣಿಕೆ ಮತ್ತು ಬಾಲ್ಯವಿವಾಹದಂತಹ ಪಿಡುಗನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಆದ್ದರಿಂದ ಕಲಿಕೆಗೆ ಹೆಚ್ಚು ಆದ್ಯತೆ ನೀಡಿ, ಕಾನೂನಿನ ಅರಿವು ಪಡೆದು ಸುಶಿಕ್ಷಿತರಾಗಿ, ಯಾವುದೇ ಪಿಡುಗು ಅಥವಾ ಆಮಿಷಕ್ಕೆ ಒಳಗಾಗದೇ ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಯೋಗೇಂದ್ರ ಶೆಟ್ಟಿ ಸಲಹೆ ನೀಡಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಶಿಕ್ಷಣ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಮಾನವ ಕಳ್ಳಸಾಗಾಣಿಕೆ ಮತ್ತು ಬಾಲ್ಯವಿವಾಹ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಅದಷ್ಟೇ ಅಲ್ಲದೆ, ನೀವು ಈ ದೇಶದ ಸಂಪತ್ತು. ಆ ಸಂಪತ್ತು ಸಣ್ಣ ವಯಸ್ಸಿನಲ್ಲಿ ನಶಿಸಿಹೋದರೆ ನಮ್ಮ ದೇಶದ ಪ್ರಗತಿ ಸಾಧ್ಯವಾಗುವುದಿಲ್ಲ. ೧೪ ವರ್ಷದ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲೇಬೇಕು. ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಬಾಲ್ಯವಿವಾಹದಿಂದ ಹೆಣ್ಣುಮಕ್ಕಳಿಗೆ ಸರಿಯಾದ ಶಿಕ್ಷಣ ಕೂಡ ಸಿಗುವುದಿಲ್ಲ. ಅದೇ ರೀತಿ ಅವರಿಗೆ ದೈಹಿಕವಾಗಿಯೂ ತುಂಬಾ ಪರಿಣಾಮ ಬೀರುತ್ತದೆ ಜತೆಗೆ ಮಾನಸಿಕ ಒತ್ತಡ ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಉತ್ತಮ ಶಿಕ್ಷಣ ಪಡೆದು, ನೀವೆಲ್ಲರೂ ಕಾನೂನು ಅರಿವಿನಿಂದ ಜಾಗೃತಿ ಮೂಡಿಸಿಕೊಳ್ಳಬೇಕು, ಮಾನವ ಕಳ್ಳಸಾಗಾಣಿಕೆ ಹಾಗೂ ಬಾಲ್ಯವಿವಾಹ ನಿರ್ಮೂಲನೆ ಮಾಡಲಿಕ್ಕೆ ನಿಮ್ಮಗಳ ಜ್ಞಾನ, ಕಾನೂನಿನ ಅರಿವು ಪಡೆದು ಕೆಟ್ಟ ಪಿಡುಗನ್ನು ಹೋಗಾಲಾಡಿಸಲು ಕೈಜೋಡಿಸುವಂತೆ ಕರೆಕೊಟ್ಟರು.
ಮಾನವ ಕಳ್ಳಸಾಗಾಣಿಕೆ ಹಾಗೂ ಬಾಲ್ಯ ವಿವಾಹ ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜಕ್ಕೆ ದೊಡ್ಡ ಪಿಡುಗಾಗಿದೆ. ಈಗ ಎಲ್ಲರೂ ಮೊಬೈಲ್ ಬಳಕೆ ಮಾಡುತ್ತಾರೆ. ಸಮಾಜಘಾತುಕರು ನಾನಾ ರೀತಿಯಲ್ಲಿ ಆಮಿಷ ಒಡ್ತಾರೆ, ನಿಮಗೆ ಒಳ್ಳೆಯದು ಯಾವುದು ಅಥವಾ ಕೆಟ್ಟದ್ದು ಯಾವುದು ಎಂದು ಯೋಚನೆ ಮಾಡುವ ಶಕ್ತಿ ಇಲ್ಲದ ಕಾರಣ ಆಮಿಷಕ್ಕೆ ಬಲಿಯಾಗುತ್ತೀರಿ. ಯಾವುದೋ ಒಂದು ಆಸೆ ಅಥವಾ ಆಮಿಷ ಒಡ್ಡಿ, ಬೇರೆ ಊರುಗಳಿಗೆ ಸಾಗಾಟ ಮಾಡಿ, ಮಾನವ ಕಳ್ಳಸಾಗಾಣಿಕೆ ಮಾಡಲಾಗುತ್ತದೆ ಮತ್ತು ಈ ಜಗತ್ತಿನಲ್ಲಿ ಇದೊಂದು ದೊಡ್ಡ ಪಿಡುಗಾಗಿದೆ. ಆದ್ದರಿಂದ ಮುಖ್ಯವಾಗಿ ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಇದ್ದಾಗ ಮಾತ್ರ ಸಾಮಾಜಿಕವಾಗಿ ನಿಮ್ಮನ್ನು ಸಬಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದರು.ಹಾಸನದ ಸಖಿ ಒನ್ ಸ್ಟಾಪ್ ಸೆಂಟರ್‌ನ ವಕೀಲರಾದ ಬಿಂದೇಶ್ವರಿ ಕೆ.ಎಸ್. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಗತ್ಯ ಮಾಹಿತಿ, ಸಲಹೆ ಹಾಗೂ ಸೂಚನೆ ನೀಡುವ ಜತೆಗೆ ಸುದೀರ್ಘವಾಗಿ ಮಾತನಾಡಿದರು. ತಾಲೂಕು ವಕೀಲರ ಸಂಘ ಅಧ್ಯಕ್ಷ ಶಿವಕುಮಾರ್ ಎಂ.ವಿ., ಪ್ರಭಾರಿ ಉಪ ಪ್ರಾಂಶುಪಾಲ ಶಿವಣ್ಣ ಎಂ. ಮಾತನಾಡಿದರು. ವಿದ್ಯಾರ್ಥಿನಿ ಶ್ವೇತ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕ ಪಾಲಾಕ್ಷ ಎನ್. ಸ್ವಾಗತಿಸಿದರು ಹಾಗೂ ರವಿಶಂಕರ್ ಮೂರ್ತಿ ನಿರೂಪಿಸಿ, ವಂದಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಮೇಲ್ವಿಚಾರಕರಾದ ಹುಸೇನ್ ಬಿ.ಪದಿಬಂಧು, ಶಿಕ್ಷಕರಾದ ಸುಜಾತ, ಅಲಿ, ಚಂದ್ರಶೇಖರ್, ಶಿಲ್ಪ, ಉಷಾ, ಲತಾ, ಗೀತಾ, ಸುಮನ್, ಇತರರು ಇದ್ದರು.