ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ತಿಂಗಳ ಬಳಿಕ ಮೇಲುಕೋಟೆ ಕ್ಷೇತ್ರದ ಶಾಸಕರ ಕಚೇರಿಗೆ ವಿದ್ಯುತ್ ಸಂಪರ್ಕವಂತೂ ಸಿಕ್ಕಿತು. ಆದರೆ, ಸಂಪರ್ಕ ಕಲ್ಪಿಸುವಾಗ ಅಧಿಕಾರಿಗಳು ಶಾಸಕರ ಪ್ರಭಾವಕ್ಕೆ ಮಣಿದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೇವಲ ಶಾಸಕರ ಕಚೇರಿಗೆ ಮಾತ್ರ ವಿದ್ಯುತ್ ಸಂಪರ್ಕ ಕೊಟ್ಟು ಅದೇ ಕಟ್ಟಡದಲ್ಲಿರುವ ಜನಸೇವಾ ಕೇಂದ್ರ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಕತ್ತಲಲ್ಲಿ ಮುಳುಗಿಸಿರುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.‘ಶಾಸಕ ದರ್ಶನ್ ಕಚೇರಿಗೆ ತಿಂಗಳಿಂದ ಪವರ್ ಕಟ್..!’ ಎಂಬ ಶೀರ್ಷಿಕೆಯಡಿ ಡಿ.18ರ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ತರಾತುರಿಯಲ್ಲಿ ಶಾಸಕರ ಕಚೇರಿಗೆ ಸೀಮಿತವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ. ಕಟ್ಟಡ ಸಂಕೀರ್ಣದಲ್ಲಿರುವುದು ಒಂದೇ ಮೀಟರ್. ಕಚೇರಿಗೆ ಮಾತ್ರ ಸಂಪರ್ಕ ಕಲ್ಪಿಸಿರುವುದನ್ನು ನೋಡಿದರೆ ಅಧಿಕಾರಿಗಳು ಶಾಸಕರ ಪ್ರಭಾವಕ್ಕೆ ಮಣಿದು ಸಂಪರ್ಕ ಕಲ್ಪಿಸಿರುವಂತೆ ಕಂಡುಬರುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕಚೇರಿ ಸಂಕೀರ್ಣದ ವಿದ್ಯುತ್ ಮೀಟರ್ ಸೆಂಟ್ರಲ್ ಪೊಲೀಸ್ ಠಾಣೆ ಹೆಸರಿನಲ್ಲೇ ಇದೆ. ಅದನ್ನು ತಾಲೂಕು ಕಚೇರಿ ಹೆಸರಿಗೆ ಬದಲಾಯಿಸಿಕೊಡುವಂತೆ ಅರ್ಜಿ ಸಲ್ಲಿಸಲಾಗಿದೆ. ಈ ಬದಲಾವಣೆ ಪ್ರಕ್ರಿಯೆಗೆ ಒಂದು ವಾರ ಕಾಲ ಸಮಯ ತಗೆದುಕೊಳ್ಳಲಿದ್ದು, ಇದರ ನಡುವೆಯೂ ವಿದ್ಯುತ್ ಬಿಲ್ ಪಾವತಿ ಮಾಡದಿದ್ದರೂ ತಾತ್ಕಾಲಿಕವಾಗಿ ಶಾಸಕರ ಕಚೇರಿಗೆ ತೊಂದರೆಯಾಗದಂತೆ ವಿದ್ಯುತ್ ಸೌಲಭ್ಯ ಕಲ್ಪಿಸಿರಬಹುದೆಂದು ಹೇಳಲಾಗುತ್ತಿದೆ.ಒಮ್ಮೆ ಪೂರ್ತಾ ವಿದ್ಯುತ್ ಬಿಲ್ ಪಾವತಿಸಿದ್ದರೆ ಜನಸೇವಾ ಕೇಂದ್ರ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೂ ವಿದ್ಯುತ್ ಸೌಲಭ್ಯ ಕಲ್ಪಿಸಬೇಕಿತ್ತು. ಜನರಿಗೆ ಉಪಯುಕ್ತ ಸೇವೆಯನ್ನು ಒದಗಿಸುತ್ತಿರುವ ಜನಸೇವಾ ಕೇಂದ್ರಕ್ಕೆ ಹಾಗೂ ಹಿರಿಯರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸದೇ ಕತ್ತಲಲ್ಲಿ ಮುಳಗುವಂತೆ ಮಾಡಿದೆ. ಇದು ಅಧಿಕಾರಿಗಳ ತಾರತಮ್ಯದ ಜೊತೆಗೆ ಜನವಿರೋಧಿ ನಡೆಯೂ ಆಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.