ಪೇಪರ್‌ನಲ್ಲಿ ಮಾತ್ರ ಚಡಚಣ ಏತ ನೀರಾವರಿ ಪೂರ್ಣ

| Published : Oct 04 2025, 01:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಸುಮಾರು ₹ 500 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯೂ ಸಂಪೂರ್ಣ ಹಳ್ಳ ಹಿಡಿದಿದೆ. ಕೆಲಸ ಮಾಡದೇ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್‌ ಸೇರಿ ಯೋಜನೆಯನ್ನು ಪೇಪರ್‌ನಲ್ಲಿ ಪೂರ್ಣಗೊಳಿಸಿ, ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿ ಹಣ ಲೂಟಿ ಮಾಡಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಜಮೀನುಗಳಿಗೆ ನೀರು ಹರಿಸದಿದ್ದಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಸಂಸಸ ರಮೇಶ ಜಿಗಜಣಗಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಡಚಣ

ಸುಮಾರು ₹ 500 ಕೋಟಿ ವೆಚ್ಚದಲ್ಲಿ ಪ್ರಾರಂಭವಾದ ಚಡಚಣ ಏತ ನೀರಾವರಿ ಯೋಜನೆಯೂ ಸಂಪೂರ್ಣ ಹಳ್ಳ ಹಿಡಿದಿದೆ. ಕೆಲಸ ಮಾಡದೇ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಕಾಂಟ್ರ್ಯಾಕ್ಟರ್‌ ಸೇರಿ ಯೋಜನೆಯನ್ನು ಪೇಪರ್‌ನಲ್ಲಿ ಪೂರ್ಣಗೊಳಿಸಿ, ಸರ್ಕಾರಕ್ಕೆ ತಪ್ಪು ಮಾಹಿತಿ ಸಲ್ಲಿಸಿ ಹಣ ಲೂಟಿ ಮಾಡಿದ್ದಾರೆ. ಕೂಡಲೇ ಸರ್ಕಾರ ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಜಮೀನುಗಳಿಗೆ ನೀರು ಹರಿಸದಿದ್ದಲ್ಲಿ ರೈತರೊಂದಿಗೆ ಸೇರಿ ಉಗ್ರ ಹೋರಾಟ ಮಾಡುವುದಾಗಿ ಸಂಸಸ ರಮೇಶ ಜಿಗಜಣಗಿ ಎಚ್ಚರಿಕೆ ನೀಡಿದ್ದಾರೆ. ಚಡಚಣದ ಮರಡಿಯ ಮೇಲೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಆಶಾಕಿರಣವಾದ ಚಡಚಣ ಏತ ನೀರಾವರಿ ಯೋಜನೆಯಿಂದ ಸುಮಾರ 22,751 ಎಕರೆ ರೈತರ ಕೃಷಿ ಜಮೀನುಗಳಿಗೆ ನೀರು ಬಂದು ಬದುಕು ಸುಂದರವಾಗುವ ಕನಸು ಕನಸಾಗಿಯೇ ಉಳಿಯುವಂತೆ ಮಾಡಿದ್ದಾರೆ. ಈ ಭಾಗದ ಜನಪ್ರತಿನಿಧಿಗಳೊಂದಿಗೆ ಸೇರಿಕೊಂಡ ಅಧಿಕಾರಿಗಳು ಪೇಪರ್‌ದಲ್ಲಿ ಮಾತ್ರ ಈ ಯೋಜನೆಯನ್ನು ಪೂರ್ಣಗೊಳಿಸಿ ಸಮಗ್ರ ನೀರಾವರಿಯಾಗಿದೆ ಎಂದು ತೋರಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಅಲ್ಲದೇ, ಇಲ್ಲಿಯವರೆಗೆ ರೈತ ಫಲಾನುಭವಿಗಳ ಹೊಲಕ್ಕೆ ಒಂದು ತೊಟ್ಟು ನೀರು ಕೂಡ ಬಂದಿಲ್ಲ. ಕೆಲವಡೆ ಪೈಪ್‌ಗಳು ಒಡೆದು ಹೋಗಿವೆ. ಒಂದೊಂದು ಕಡೆ ಪೈಪ್‌ ಕೂಡಾ ಹಾಕಿಲ್ಲ. ಇಂತಹ ಲೂಟಿ ಹೊಡೆಯುವ ಯೋಜನೆಯಿಂದ ಜನ ಬೇಸತ್ತು ಹೋಗಿದ್ದಾರೆ. ಈ ವಿಷಯವಾಗಿ ಮುಖ್ಯ ಮಂತ್ರಿಗಳಿಗೆ, ಉಪ ಮುಖ್ಯಮಂತ್ರಿಗಳಿಗೆ ಮತ್ತು ಉನ್ನತ ಅಧಿಕಾರಿಗಳಿಗೆ ಪತ್ರವನ್ನು ಬರೆದಿದ್ದೇನೆ. ತಕ್ಷಣ ಅವರು ಈ ಯೋಜನೆಯ ಮಾಹಿತಿಯನ್ನು ತರಿಸಿಕೊಂಡು ಸಮಸ್ಯೆ ಬಗೆಹರಿಸಬೇಕು. ಒಂದು ವೇಳೆ ಸರ್ಕಾರ ಸ್ಪಂದಿಸದಿದ್ದರೆ ಚಡಚಣ ತಹಸೀಲ್ದಾರ್‌ ಕಚೇರಿಯ ಮುಂಭಾಗದಲ್ಲಿ ಟೆಂಟ್‌ ಹಾಕಿಕೊಂಡು ಏಳು ಗ್ರಾಮಗಳ ರೈತರನ್ನು ಸೇರಿಸಿಕೊಂಡು ಪಕ್ಷಾತೀತವಾಗಿ ದೊಡ್ಡ ಮಟ್ಟದಲ್ಲಿ ಹೋರಾಟ ಪ್ರಾರಂಭ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು. ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಲ್ಲಿ ಚಡಚಣ ಮತ್ತು ಸುತ್ತಮುತ್ತಲಿನ ಗ್ರಾಮಗಳು ಸೇರಿಸಬೇಕಾಗಿವೆ ಇದೇ ವೇಳೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಜಿಪಂ ಮಾಜಿ ಸದಸ್ಯ ಭೀಮು ಬಿರಾದಾರ, ಮಂಡಲ ಅಧ್ಯಕ್ಷ ಸಿ.ಎಸ್.ಪಾಟೀಲ, ಸಂಜೀವ ಐಹೊಳ್ಳಿ, ಶಿವಾನಂದ ಮಖಣಾಪೂರ, ಎ.ಆರ್.ಕುಲಕರ್ಣಿ, ಸೋಮು ಅವಜಿ, ಮಹಾದೇವ ಯಂಕಂಚಿ, ರಾಜು ಕೋಳಿ, ಶ್ರೀಶೈಲ ಅಂಜುಟಗಿ ಸೇರಿದಂತೆ ಚಡಚಣ ಭಾಗದ ರೈತರು ಮತ್ತು ಸಾರ್ವಜನಿಕರು ಹಾಜರಿದ್ದರು.