ಸಾರಾಂಶ
ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಿರಿಯ ತುಳು ನಾಟಕ, ಚಲನಚಿತ್ರ ನಟ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ ವಿಶ್ವಪ್ರಭಾ ಪುರಸ್ಕಾರನವನ್ನು 1 ಲಕ್ಷ ರು. ನಗದು ಸಹಿತ ನೀಡಿ ಗೌರವಿಸಲಾಯಿತು. ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ಸಮಾರಂಭ ಸಂಪನ್ನಗೊಂಡಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಭಾನುವಾರ ಹಿರಿಯ ತುಳು ನಾಟಕ, ಚಲನಚಿತ್ರ ನಟ ನವೀನ್ ಡಿ. ಪಡೀಲ್ ಅವರಿಗೆ 2025ನೇ ಸಾಲಿನ ವಿಶ್ವಪ್ರಭಾ ಪುರಸ್ಕಾರನವನ್ನು 1 ಲಕ್ಷ ರು. ನಗದು ಸಹಿತ ನೀಡಿ ಗೌರವಿಸಲಾಯಿತು. ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ವತಿಯಿಂದ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರ ಹಾಗೂ ಪ್ರಭಾವತಿ ಶೆಣೈ ಮತ್ತು ಉಡುಪಿ ವಿಶ್ವನಾಥ್ ಶೆಣೈ ಪ್ರಾಯೋಜಕತ್ವದಲ್ಲಿ ಸಮಾರಂಭ ಸಂಪನ್ನಗೊಂಡಿತು.ಪ್ರಶಸ್ತಿ ಸ್ವೀಕರಿಸಿದ ನವೀನ್ ಪಡೀಲ್ ಮಾತನಾಡಿ, ಅಪಾರ ಕಷ್ಟ-ನಷ್ಟ, ದುಃಖ-ದುಗುಡ ಅನುಭವಿಸಿದವ ಮಾತ್ರ ಉತ್ತಮ ಕಲಾವಿದನಾಗಬಲ್ಲ. ನಾನಿಂದು ಯಶಸ್ವಿ ಕಲಾವಿದನಾಗಲು ಅಭಿಮಾನಿಗಳ ಪ್ರೋತ್ಸಾಹ, ಸಹಕಾರವೇ ಕಾರಣ ಎಂದರು.
ವಿಶ್ವಪ್ರಭಾ ಎಂದರೆ ಪ್ರಪಂಚಕ್ಕೆ ಬೆಳಕು ನೀಡುವುದು ಎಂದರ್ಥ. ಸೂರ್ಯದೇವನು ಹೇಗೆ ಸಮಸ್ತ ವಿಶ್ವಕ್ಕೆ ಬೆಳಕು ನೀಡುತ್ತಾನೆಯೋ ಅದರಂತೆ ಇಂತಹ ಪ್ರಶಸ್ತಿಗಳು ಕಲಾವಿದರ ಬಾಳಿಗೆ ಬೆಳಕು ನೀಡುತ್ತವೆ ಎಂದರು.ಪ್ರಶಸ್ತಿ ಪ್ರದಾನ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಾಟಕಗಳ ವೀಕ್ಷಣೆಯಿಂದ, ಅಲ್ಲಿನ ಧನಾತ್ಮಕ ಹಾಗೂ ಹಾಸ್ಯ ದೃಶ್ಯಗಳಿಂದ ಮನಸ್ಸಿನ ಒತ್ತಡ ನಿವಾರಣೆಯಾಗಲು ಸಾಧ್ಯ ಎಂದರು.
ಮಂಗಳೂರಿನ ಸಾಹಿತಿ ಶಶಿರಾಜ್ ಕಾವೂರು ಅಭಿನಂದನಾ ಮಾತುಗಳನ್ನಾಡಿ, 10ನೇ ತರಗತಿಯಲ್ಲಿದ್ದಾಗಲೇ ಬಣ್ಣ ಹಚ್ಚಿ ರಂಗಭೂಮಿಗೆ ಬಂದ ನವೀನ್, 40 ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ. ಅವರು 25-30ರ ಪ್ರಾಯದಲ್ಲಿದ್ದಾಗ ವೃದ್ಧನ ಪಾತ್ರವನ್ನೇ ನಿರ್ವಹಿಸಿದ್ದರು. 40-45ರ ಪ್ರಾಯದ ಬಳಿಕ ನಾಯಕನ ಪಾತ್ರ ಮಾಡತೊಡಗಿದರು. ಹೀಗೆ ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ಅಭಿನಯಿಸಬಲ್ಲ ಪರಿಪೂರ್ಣ ಹಾಗೂ ನೈಪುಣ್ಯತೆಯ ಕಲಾವಿದರಾಗಿದ್ದಾರೆ ಎಂದರು.ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಪ್ರತಿಷ್ಠಾನದ ಅಧ್ಯಕ್ಷ ಪ್ರೊ.ಶಂಕರ್, ಉಪಾಧ್ಯಕ್ಷ ಮಧುಸೂದನ್ ಹೇರೂರು, ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ವಿಶ್ವನಾಥ್ ಶೆಣೈ, ಪ್ರಭಾವತಿ ಶೆಣೈ, ಜನಾರ್ದನ್ ಕೊಡವೂರ್, ರಾಘವೇಂದ್ರ ಪ್ರಭು ಕರ್ವಾಲ್, ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಇದ್ದರು.
ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್.ಪಿ. ಸ್ವಾಗತಿಸಿದರು. ಪುರಸ್ಕಾರದ ಸಂಚಾಲಕ ನಾಗರಾಜ್ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ನಿರ್ವಹಿಸಿದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಡಿ ವಂದಿಸಿದರು.