ರೈತರು ಒಂದು ಎಕರೆಯಲ್ಲಿ ಮೆಕ್ಕೆಜೋಳವನ್ನು ಬೆಳೆಯಲು ಉತ್ಪಾದನಾ ವೆಚ್ಚ 20,000 ರಿಂದ 25000 ಖರ್ಚಾಗಲಿದೆ. ಒಂದು ಎಕರೆಯಲ್ಲಿ 30 ಕ್ವಿಂಟಲ್ ವರೆಗೂ ಬೆಳೆಯಬಹುದು. ಪ್ರಸ್ತುತ 1,500 ರೂಪಾಯಿ ಕ್ವಿಟಾಲ್ ಗೆ ಕೊಡುತ್ತಿದ್ದಾರೆ. ಈ ಅನ್ಯಾಯವನ್ನು ಸರ್ಕಾರ ಸರಿಪಡಿಸಬೇಕು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಮೆಕ್ಕೆ ಜೋಳ ಖರೀದಿ ಕೇಂದ್ರ ಆರಂಭಿಸುವಂತೆ ಆಗ್ರಹಿಸಿ ಚುಕ್ಕಿ ನಂಜುಂಡಸ್ವಾಮಿ ಬಣದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ವತಿಯಿಂದ ನಗರ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರವಿಲ್ಲದೆ ರೈತರು ಪರದಾಟ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಕೂಡಲೆ ತಾಲೂಕುಗೆ ಒಂದೊಂದು ಮೆಕ್ಕೆಜೋಳ ಖರೀದಿ ಕೇಂದ್ರವನ್ನು ತೆರೆದು ಪ್ರತಿ ರೈತರಿಂದ ಐವತ್ತು ಕ್ವಿಂಟಲ್ ಮೆಕ್ಕೆಜೋಳ ಖರೀದಿಸಬೇಕು ಎಂದು ಒತ್ತಾಯಿಸಿದರು.
ಜೋಳದ ದರ ಹೆಚ್ಚಿಸಲು ಒತ್ತಾಯರೈತರು ಒಂದು ಎಕರೆಯಲ್ಲಿ ಮೆಕ್ಕೆಜೋಳವನ್ನು ಬೆಳೆಯಲು ಉತ್ಪಾದನಾ ವೆಚ್ಚ 20,000 ರಿಂದ 25000 ಖರ್ಚಾಗಲಿದೆ. ಒಂದು ಎಕರೆಯಲ್ಲಿ 30 ಕ್ವಿಂಟಲ್ ವರೆಗೂ ಬೆಳೆಯಬಹುದು. ಪ್ರಸ್ತುತ 1,500 ರೂಪಾಯಿ ಕ್ವಿಟಾಲ್ ಗೆ ಕೊಡುತ್ತಿದ್ದಾರೆ. ಈ ಅನ್ಯಾಯವನ್ನು ಖಂಡಿಸಿ ಕಳೆದು ತಿಂಗಳು ರೈತ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನೆಗೆ ಮಣಿದ ಸರ್ಕಾರ ಕೆಎಂಎಫ್ ಹಾಲು ಉತ್ಪಾದಕ ಸಹಕಾರ ಸಂಘಗಳ ಮೂಲಕ ಪ್ರತಿ ರೈತನಿಂದ 25 ಕ್ವಿಂಟಲ್ ಖರೀದಿಸಲು ಸುತ್ತೋಲೆ ಹೊರಡಿಸಿದೆ. ಇದನ್ನು ಮಾರ್ಪಡಿಸಿ ಪರಿಷ್ಕೃತ ಆದೇಶದಲ್ಲಿ 20 ಕ್ವಿಂಟಲ್ ಗೆ ಇಳಿಸಲಾಗಿದೆ. ಹೋರಾಟ ಮುಂದುವರಿಸಿದ ಕಾರಣಕ್ಕಾಗಿ ರಾಜ್ಯ ಸರ್ಕಾರ ನವೆಂಬರ್ 7 ರಂದು 50 ಕ್ವಿಂಟಲ್ ಖರೀದಿಸುವಂತೆ ಕೆಎಂಎಫ್ ಗೆ ಸೂಚನೆ ನೀಡಿದೆ ಎಂದರು.50 ಕ್ವಿಂಟಲ್ ಖರೀದಿಗೆ ಆಗ್ರಹ
ಈ ಸಂಬಂಧ ಕೆಎಂಎಫ್ ಅಧಿಕಾರಿಗಳನ್ನು ರೈತ ಸಂಘದ ಪ್ರತಿನಿಧಿಗಳು ವಿಚಾರಿಸಲಾಗಿ ನಮಗೆ ಕೇವಲ 20 ಕ್ವಿಂಟಲ್ ಖರೀದಿಗೆ ಅವಕಾಶ ನೀಡಿದ್ದಾರೆ ನಿಮ್ಮ ಹೇಳಿಕೆಯಂತೆ 50 ಕ್ವಿಂಟಲ್ ಖರೀದಿ ಸಂಬಂಧ ಆದೇಶವಾಗಿಲ್ಲ. ಕೆಎಂಎಫ್‌ಗೆ ಜೋಳ ಕೊಡುವ ರೈತರು ರಾಜನಕುಂಟೆ ಖರೀದಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ ಕೊಡಬೇಕು ಎಂದು ಹೇಳುತ್ತಿದ್ದಾರೆ. ನಮ್ಮ ಒತ್ತಾಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ಅಲ್ಲಿಯೇ ಜೋಳವನ್ನು ಸರಬರಾಜು ಮಾಡುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಮಾತನಾಡಿ, ಮೆಕ್ಕೆಜೋಳ ಬೆಳೆದ ರೈತರ ನೆರವಿಗೆ ಜಿಲ್ಲಾಡಳಿತ ಬರಬೇಕು. ರಾಜ್ಯ ಸರ್ಕಾರ ಆದೇಶ ಮಾಡಿರುವಂತೆ ಪ್ರತಿ ರೈತರಿಂದ ಐವತ್ತು ಕ್ವಿಂಟಲ್ ಮೆಕ್ಕೆಜೋಳವನ್ನು ಖರೀದಿ ಮಾಡಲೇಬೇಕು. ರೈತರಿದ್ದಲ್ಲಿಯೇ ಬಂದು ಖರೀದಿಸಲು ಕ್ರಮ ವಹಿಸಬೇಕು . ತಾಲೂಕಿಗೆ ಒಂದೊಂದು ಖರೀದಿ ಕೇಂದ್ರ ತೆರೆದು ರೈತರಿಗೆ ನೆರವಾಗಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ರವರಿಗೆ ಸಂಘದ ಮುಖಂಡರು ಮನವಿ ಪತ್ರ ನೀಡಿ ರೈತರ ನೆರವಿಗೆ ಬರಬೇಕೆಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಎಂ.ಆರ್.ಲಕ್ಷ್ಮಿ ನಾರಾಯಣ್, ಲೋಕೇಶಗೌಡ, ರಾಜಣ್ಣ, ಎಚ್,ಎನ್.ಕದೀರೇಗೌಡ, ಬೀಮಣ್ಣ, ಮುನೇಗೌಡ, ನವೀನ್ ಕುಮಾರ್, ವೈಪಿ,ಪ್ರದೀಪ್ ಕುಮಾರ್, ಸಂತೇಕಲ್ಲಹಳ್ಳಿ ದಿವಾಕರ್,ಚೆಂದನ್,ಮಂಜುನಾದ್, ಡಿವಿ,ನಾರಾಯಣಸ್ವಾಮಿ, ಯಣ್ಣಂಗೂರು ಈರಪ್ಪ,ನಡುಪಿನಾಯಕನಹಳ್ಳಿ ವಾಸುದೇವ ಮೂರ್ತಿ, ಚೊಕ್ಕಂಡಹಳ್ಳಿ ದೇವರಾಜ್, ಮತ್ತಿತರರು ಇದ್ದರು.