ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾದಂತೆ ತೆರೆದ ಬಾವಿಗಳ ಸಂಖ್ಯೆ ಕಡಿಮೆಯಾಗತೊಡಗಿವೆ.
ವಿ.ಎಂ. ನಾಗಭೂಷಣ
ಸಂಡೂರು: ಗ್ರಾಮೀಣ ಜನರ ಜಲ ಸಂಸ್ಕೃತಿಯ ಪರಿಣಾಮ ರೂಪುಗೊಂಡಿದ್ದ ಹಾಗೂ ಗ್ರಾಮೀಣ ಭಾಗದ ಸ್ವಿಮ್ಮಿಂಗ್ ಫೂಲ್‌ನಂತಿದ್ದ ತೆರೆದ ಬಾವಿಗಳು ಕೊಳವೆಬಾವಿಗಳ ಸಂಖ್ಯೆ ಹೆಚ್ಚಾದಂತೆ ಕಣ್ಮರೆಯಾಗುತ್ತಿವೆ.ಕೆಲ ದಶಕಗಳ ಹಿಂದೆ ನೀರಾವರಿಗಾಗಿ ಹೊಲಗಳಲ್ಲಿ, ದೈನಂದಿನ ಬಳಕೆಗಾಗಿ ಮನೆಗಳ ಬಳಿ ಅಥವಾ ಓಣಿಯಲ್ಲಿ, ದೇವಸ್ಥಾನಗಳ ಮುಂದೆ ಕಲ್ಯಾಣಿಗಳ ರೂಪದಲ್ಲಿ ನಿರ್ಮಿಸಲಾಗಿದ್ದ ತೆರೆದ ಬಾವಿಗಳನ್ನು ಕಾಣಬಹುದಾಗಿತ್ತು. ಇವುಗಳು ಗ್ರಾಮೀಣ ಭಾಗದಲ್ಲಿನ ಜನತೆಗೆ ಸ್ವಿಮ್ಮಿಂಗ್ ಪೂಲ್‌ನಂತಿದ್ದವು.
ಕೊಳವೆ ಬಾವಿಗಳ ಸಂಖ್ಯೆ ಹೆಚ್ಚಾದಂತೆ ತೆರೆದ ಬಾವಿಗಳ ಸಂಖ್ಯೆ ಕಡಿಮೆಯಾಗತೊಡಗಿವೆ. ಕೆಲವು ತೆರೆದ ಬಾವಿಗಳು ತ್ಯಾಜ್ಯದಿಂದ ತುಂಬಿಕೊಂಡು, ಕೊನೆಗೆ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಕೆಲವು ಬಾವಿಗಳಲ್ಲಿ ನೀರಿನ ಸೆಲೆ ಕಡಿಮೆಯಾದ ಕಾರಣ, ಅವುಗಳನ್ನು ಜನರೇ ಮುಚ್ಚಿ ಹಾಕಿದ್ದಾರೆ. ಮನೆಮನೆಗೆ ನಲ್ಲಿಗಳು ಬಂದಮೇಲೆ ಊರುಗಳಲ್ಲಿದ್ದ ತೆರೆದ ಬಾವಿಗಳು ನೇಪಥ್ಯಕ್ಕೆ ಸರಿದಿವೆ. ಅವುಗಳನ್ನು ಕೇವಲ ಗಂಗೆ ಪೂಜೆಗಾಗಿ ಬಳಸುತ್ತಿದ್ದಾರೆ. ಕೆಲವು ತೆರೆದ ಬಾವಿಗಳಲ್ಲಿ ಯಾರಾದರು ಬಿದ್ದಾರೆಂಬ ಮುನ್ನೆಚ್ಚರಿಕೆಯೊಂದಿಗೆ, ಜನರೇ ಅವುಗಳ ಮೇಲೆ ಕಬ್ಬಿಣದ ಜಾಲರಿ ಹಾಕಿ ಮುಚ್ಚಿದ್ದಾರೆ.ಕಲ್ಯಾಣಿಗಳ ರೂಪ:
ತೆರೆದ ಬಾವಿಗಳು ವಿವಿಧ ಕಾರಣಗಳಿಂದಾಗಿ ನೇಪಥ್ಯಕ್ಕೆ ಸರಿದಿದ್ದರೂ ಕೆಲವೆಡೆ ಅವುಗಳು ಇನ್ನೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ. ಅವುಗಳಲ್ಲಿ ಹೆಚ್ಚಿನವು ದೇವಸ್ಥಾನದ ಮುಂದಿನ ಕಲ್ಯಾಣಿಗಳು.ಪಟ್ಟಣದ ಪುರಸಭೆ ವ್ಯಾಪ್ತಿಯ ಧರ್ಮಾಪುರದಲ್ಲಿರುವ ಕಲ್ಯಾಣಿ (ದೇವಸ್ಥಾನದ ಮುಂದಿನ ಬಾವಿ) ಹೂಳು ತುಂಬಿ ಅವಸಾನದ ಅಂಚಿಗೆ ತಲುಪಿದೆ. ಕೆಲ ವರ್ಷಗಳ ಹಿಂದೆ ವಿವಿಧ ಮಠಾಧೀಶರು, ಯುವ ಬ್ರಿಗೇಡ್ ಕಾರ್ಯಕರ್ತರು ಶ್ರಮದಾನ ಮಾಡಿ, ಬಾವಿಯಲ್ಲಿನ ಹೂಳನ್ನು ತೆರವುಗೊಳಿಸಿದ್ದರು. ನಂತರದಲ್ಲಿ ಎಸ್‌ಕೆಎಂಇ ಕಂಪನಿಯವರು ಈ ಕಲ್ಯಾಣಿಯನ್ನು ದುರಸ್ತಿ ಮಾಡಿ, ಅದರ ಸುತ್ತ ತಂತಿ ಬೇಲಿ ಹಾಕಿದ್ದರಿಂದ ಅದು ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಂಡು ಅಲ್ಲಿನ ಜನತೆಗೆ ಹಲವು ರೀತಿಯಲ್ಲಿ ಅನುಕೂಲಕರವಾಗಿ ಪರಿಣಮಿಸಿದೆ. ಬೇಸಿಗೆಯಲ್ಲಿ ಚಿಣ್ಣರು, ಯುವಕರು ಇಲ್ಲಿನ ಕಲ್ಯಾಣಿಯಲ್ಲಿ ಈಜುವುದನ್ನು ಕಾಣಬಹುದಾಗಿದೆ.
ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವ ಬಹುಪಯೋಗಿ ತೆರೆದ ಬಾವಿಗಳನ್ನು ಸಂರಕ್ಷಿಸುವ ಅಗತ್ಯವಿದೆನಮ್ಮೂರಿನಲ್ಲಿಯೂ ಈ ಹಿಂದೆ ಗಂಡೆಪ್ಪರ ಬಾವಿ ಇತ್ತು. ನಾವು ಈಜು ಕಲಿತಿದ್ದು ಅಲ್ಲಿಯೇ. ಆದರೆ, ಈಗ ಆ ಬಾವಿ ಮುಚ್ಚಿ ಹೋಗಿದೆ ಎನ್ನುತ್ತಾರೆ ತಾರಾನಗರ ಕುಮಾರಸ್ವಾಮಿ ಮೇಟಿ.
ಸಂಡೂರಿನಲ್ಲಿಯೂ ಹಲವು ದೊಡ್ಡ ಬಾವಿಗಳಿದ್ದವು. ಬಹುತೇಕ ಬಾವಿಗಳು ಇಂದು ಮುಚ್ಚಿಕೊಂಡು ಹೋಗಿವೆ ಎನ್ನುತ್ತಾರೆ ಸಂಡೂರು ಶಂಕರರಾವ್ ಪೋಳ್.