ಲೋಕಸಭೆ ಚುನಾವಣೆಗೆ ನಾಳೆಯೇ ಬಹಿರಂಗ ಪ್ರಚಾರ ಅಂತ್ಯ

| Published : Apr 23 2024, 12:49 AM IST

ಲೋಕಸಭೆ ಚುನಾವಣೆಗೆ ನಾಳೆಯೇ ಬಹಿರಂಗ ಪ್ರಚಾರ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆಗೆ ಇದೇ ಏ.26ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಇದೇ ಏ.26ರಂದು ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯಗೊಳ್ಳುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯಗೊಳಿಸಬೇಕು ಎಂದು ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಲೋಕಸಭಾ ಸಂಬಂಧ ಚುನಾವಣಾ ವಿಷಯಗಳ ಕುರಿತು ಅಭ್ಯರ್ಥಿ ಹಾಗೂ ಏಜೆಂಟರೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಏ.24ರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಮುಕ್ತಾಯಗೊಳಿಸಬೇಕು. ಆದರೆ ಅಭ್ಯರ್ಥಿಗಳು ಮಾತ್ರ ಮನೆ ಮನೆ ಪ್ರಚಾರ ಮಾಡಬಹುದಾಗಿದೆ. ಮತಯಾಚನೆ ವೇಳೆ 10 ಜನಕ್ಕಿಂತ ಹೆಚ್ಚಿನ ಜನರು ಇರುವಂತಿಲ್ಲ ಎಂದು ಹೇಳಿದರು.

ಮತದಾರರ ಒಲೈಕೆಗಾಗಿ ಮತದಾನದ ಹಿಂದಿನ ದಿನ ಉಚಿತ ಉಡುಗೊರೆ, ಹಣ ಹಂಚಿಕೆ, ಆಮಿಷ ಒಡ್ಡುವುದು ಸೇರಿದಂತೆ ಮತದಾರರಿಗೆ ಮತಗಟ್ಟೆಗಳಿಗೆ ಕರೆದುಕೊಂಡು ಬರಲು ಮತ್ತು ಹೋಗಲು ವಾಹನ ವ್ಯವಸ್ಥೆ, ತಿಂಡಿ, ಊಟದ ವ್ಯವಸ್ಥೆ ಮಾಡತಕ್ಕದ್ದಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಮತದಾನ ಕೇಂದ್ರದ 200 ಮೀಟರ್ ವ್ಯಾಪ್ತಿಯ ನಂತರ ಚಿಕ್ಕದಾಗಿ ಹೆಲ್ಪ್ ಡೆಸ್ಕ್ ತೆರೆಯಲು ಅವಕಾಶವಿದೆ. ಇದಕ್ಕೆ ಸಂಬಂಧಪಟ್ಟ ಎಆರ್‌ಒ ಅನುಮತಿ ನೀಡಲಿದ್ದು, ಅನುಮತಿ ಪಡೆದು ಹೆಲ್ಪ್ ಡೆಸ್ಕ್ ತೆರೆಯಬೇಕು. ಒಬ್ಬ ಅಭ್ಯರ್ಥಿ ಅಥವಾ ಅಭ್ಯರ್ಥಿ ಪರವಾಗಿರುವ ಏಜೆಂಟ್ ಅವರು ಮೂರು ವಾಹನಗಳ ಬಳಸುವುದಕ್ಕೆ ಮಾತ್ರ ಅವಕಾಶವಿದೆ. ಈ ಮೂರು ವಾಹನಗಳಿಗೆ ಕಡ್ಡಾಯವಾಗಿ ಅನುಮತಿಯನ್ನು ಮೊದಲೇ ಪಡೆದಿರಬೇಕು. ಒಂದು ವಾಹನದಲ್ಲಿ ವಾಹನ ಚಾಲಕರು ಸೇರಿದಂತೆ 4 ಜನರಿಗಿಂತ ಹೆಚ್ಚು ಜನರು ಇರುವಂತಿಲ್ಲ ಎಂದು ಹೇಳಿದರು. ಆಯಾ ಕ್ಷೇತ್ರದ ಮತದಾರರನ್ನು ಹೊರತುಪಡಿಸಿ, ಉಳಿದವರು ಕಡ್ಡಾಯವಾಗಿ ಕ್ಷೇತ್ರ ಬಿಟ್ಟುಹೋಗಬೇಕು. ಕ್ಷೇತ್ರದ ಮತದಾರರಲ್ಲದವರು ಯಾವುದೇ ಲಾಡ್ಜ್, ಹೋಟೆಲ್, ಕಲ್ಯಾಣ ಮಂಟಪ, ಮನೆ ಸೇರಿದಂತೆ ಇತರೆ ಕಡೆ ವಾಸ್ತವ್ಯ ಮಾಡಿದಲ್ಲಿ ಅಂತಹವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ ಎಂದು ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಮತದಾನದ ದಿನದಂದು ಮತದಾನಕ್ಕಿಂತ ಮುಂಚಿತವಾಗಿ (90 ನಿಮಿಷ ಮುಂಚೆ) ಅಣಕು ಮತದಾನ ಪ್ರಕ್ರಿಯೆಯ ನಡೆಯಲಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಪರವಾಗಿರುವ ಏಜೆಂಟರು ಹಾಜರಿರಬೇಕು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಹಾಗೂ ಏಜೆಂಟರು ಇದ್ದರು.

ಅಂಚೆ ಮತದಾನಕ್ಕೆ 25 ಕಡೆಯ ದಿನ: ಬೇರೆ ಲೋಕಸಭಾ ಕ್ಷೇತ್ರದ ಮತದಾರರಾಗಿದ್ದು, ಚಿತ್ರದುರ್ಗ ಲೋಕಸಭಾ ಕ್ಷೇತ್ರ ಚುನಾವಣೆ ಕಾರ್ಯದಲ್ಲಿ ನಿರತವಾಗಿರುವ ನೌಕರರಿಗೆ, ಮತಚಲಾಯಿಸಲು ಅನುಕೂಲವಾಗುವಂತೆ ವಿಧಾನಸಭಾ ಕ್ಷೇತ್ರವಾರು ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಅಂಚೆ ಮತದಾನ ಸೇವಾಕೇಂದ್ರ ತರೆದು ಏ.22ರವರೆಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು.

ಇದುವರೆಗೂ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಮತ ಚಲಾಯಿಸಲು ಸಾಧ್ಯವಾಗದಿರುವ ನೌಕರರು ಚಿತ್ರದುರ್ಗ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಮತದಾನ ಸೇವಾ ಕೇಂದ್ರದಲ್ಲಿ ಏ.25ರಂದು ಮತ ಚಲಾಯಿಸಲು ಕಡೆಯ ಅವಕಾಶ ನೀಡಲಾಗಿದೆ.

.