ಗುಂಡೊಳ್ಳಿ ಗ್ರಾಮದಲ್ಲಿ ಕೆಡಿಸಿಸಿ ಬ್ಯಾಂಕ್‌ನ 55ನೇ ಶಾಖೆ ಆರಂಭ

| Published : Jun 21 2024, 01:06 AM IST

ಸಾರಾಂಶ

ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಉನ್ನತಿಗೆ ಕೈಜೋಡಿಸಬೇಕೆಂದರು.

ಹಳಿಯಾಳ: ಸದಾ ರೈತರ ನೆರವಿಗೆ ಧಾವಿಸುವ ಜಿಲ್ಲೆಯ ಕೆಡಿಸಿಸಿ ಬ್ಯಾಂಕ್ ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿ ರೈತರ ಶ್ರೇಯೋಭಿವೃದ್ಧಿಗೆ ಬದ್ಧವಾಗಿದ್ದು, ಆ ಮೂಲಕ ರೈತರ ಪಾಲಿಗೆ ಕಾಮಧೇನುವಾಗಿ ಪರಿಣಮಿಸಿದೆ ಎಂದು ಕೆಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಎಸ್.ಎಲ್‌. ಘೋಟ್ನೇಕರ ತಿಳಿಸಿದರು.

ಗುರುವಾರ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ನೂತನವಾಗಿ ಆರಂಭವಾಗಿರುವ ಕೆಡಿಸಿಸಿ ಬ್ಯಾಂಕಿನ 55ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಬ್ಯಾಂಕ್ ಉನ್ನತಿಗೆ ಕೈಜೋಡಿಸಬೇಕೆಂದರು. ಕೆಡಿಸಿಸಿ ಬ್ಯಾಂಕ್ ಸಾಲ ನೀಡುವ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಗೃಹ, ವಾಹನ, ಜಮೀನು, ಶೈಕ್ಷಣಿಕ ಸಾಲವನ್ನು ಇನ್ನಿತರ ಆರ್ಥಿಕ ಸೇವೆಗಳನ್ನು ಒದಗಿಸುತ್ತಿದೆ. ಬ್ಯಾಂಕ್ ನೀಡುವ ಈ ಆರ್ಥಿಕ ಸವಲತ್ತುಗಳ ಸದುಪಯೋಗವನ್ನು ಪಡೆಯಿರಿ ಎಂದರು.

ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನದಾಸ ನಾಯಕ ಮಾತನಾಡಿ, ಶತಮಾನ ಕಂಡ ಜಿಲ್ಲೆಯ ಏಕೈಕ್ ಸಹಕಾರಿ ಬ್ಯಾಂಕ್ ನಮ್ಮದಾಗಿದೆ ಎಂದರು. ಬ್ಯಾಂಕ್ ನೀಡಿದ ಸೇವೆಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ ಎಂದರು.

ಬ್ಯಾಂಕ್ ವ್ಯವಸ್ಥಾಪಕ, ನಿರ್ದೇಶಕ ಶ್ರೀಕಾಂತ ಭಟ್ ಮಾತನಾಡಿ, ಗ್ರಾಮೀಣ ಭಾಗದ ರೈತರಿಗೆ ಮತ್ತು ಸಾರ್ವಜನಿಕರಿಗೆ ಆರ್ಥಿಕ ಸೌಲಭ್ಯಗಳು ದೊರೆಯಲೆಂಬ ಉದ್ದೇಶದಿಂದ ಗುಂಡೊಳ್ಳಿ ಗ್ರಾಮದಲ್ಲಿ ಶಾಖೆಯನ್ನು ಪ್ರಾರಂಭಿಸಲಾಗಿದೆ ಎಂದರು.

ಬ್ಯಾಂಕಿನ ನಿರ್ದೇಶಕ ಮಂಡಳಿ ಸದಸ್ಯರಾದ ಜೋಯಿಡಾ ತಾಲೂಕಿನ ಕೃಷ್ಣ ದೇಸಾಯಿ, ಬ್ಯಾಂಕ್ ಅಧಿಕಾರಿ ಎಸ್.ಎಂ. ಹೆಗಡೆ, ಗುಂಡೊಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಗೋಕುಲ ಪಾಕ್ರಿ, ಬ್ಯಾಂಕ್ ವ್ಯವಸ್ಥಾಪಕ ಶಶಿಕಾಂತ ಬೆಳಗಾಂವಕರ, ಸಹಕಾರಿ ಸಂಘದ ನಿರ್ದೇಶಕರು, ಗ್ರಾಮದ ಹಿರಿಯರು ಇದ್ದರು.