ಕಂಟ್ರಿ ಪಿಸ್ತೂಲ್‌ ವಿರುದ್ಧ ಖಾಕಿ ಕಾರ್ಯಾಚರಣೆ

| Published : Feb 19 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿಜಯಪುರ ಜಿಲ್ಲೆಯಲ್ಲಿ ನಕಲಿ ಪಿಸ್ತೂಲ್ ವಿರುದ್ಧ ಕಾರ್ಯಾಚರಣೆಗಿಳಿದಿರುವ ಪೊಲೀಸರು ೧೦ ಕಂಟ್ರಿ ಮೇಡ್‌ ಪಿಸ್ತೂಲ್, ೨೪ ಜೀವಂತ ಗುಂಡುಗಳನ್ನು ಜಪ್ತು ಮಾಡಿಕೊಳ್ಳುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ವಿಜಯಪುರ ಜಿಲ್ಲೆಯಲ್ಲಿ ನಕಲಿ ಪಿಸ್ತೂಲ್ ವಿರುದ್ಧ ಕಾರ್ಯಾಚರಣೆಗಿಳಿದಿರುವ ಪೊಲೀಸರು ೧೦ ಕಂಟ್ರಿ ಮೇಡ್‌ ಪಿಸ್ತೂಲ್, ೨೪ ಜೀವಂತ ಗುಂಡುಗಳನ್ನು ಜಪ್ತು ಮಾಡಿಕೊಳ್ಳುವ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೦ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕೊಲೆ ಪ್ರಕರಣದ ಆರೋಪಿಯ ಬಂಧನಕ್ಕೆ ಶೋಧ ನಡೆಸಲಾಗಿತ್ತು. ಬಳಿಕ ಆತ ಇತರರಿಗೂ ಪೂರೈಸಿದ ಕಂಟ್ರಿ ಪಿಸ್ತೂಲ್ ಮಾಹಿತಿ ಆಧರಿಸಿ ದಾಳಿ ನಡೆಸಿದ್ದು, ಆಗ ಈ ಕಂಟ್ರಿ ಮೇಡ್‌ ಪಿಸ್ತೂಲ್‌ಗಳು ಪತ್ತೆಯಾಗಿವೆ. ಮೊನ್ನೆ ಅರಕೇರಿಯಲ್ಲಿ ಸತೀಶ ಪ್ರೇಮಸಿಂಗ್‌ ರಾಠೋಡ ಎಂಬುವರ ಮೇಲೆ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಆರೋಪಿಗಳನ್ನು ಬಂಧಿಸಲಾಗಿತ್ತು. ಅಲ್ಲದೇ, ಪ್ರಕರಣ 5ನೇ ಆರೋಪಿಯಾಗಿರುವ ಸಾಗರ ಉರ್ಫ್ ಸುರೇಶ ರಾಠೋಡ ಪ್ರಕರಣದ ಪ್ರಥಮ ಆರೋಪಿ ರಮೇಶ ಲಮಾಣಿಗೆ ಕೊಲೆ ಮಾಡಲು ಅಕ್ರಮ ಪಿಸ್ತೂಲ್ ಪೂರೈಸಿದ್ದ. ಈ ಹಿನ್ನೆಲೆಯಲ್ಲಿ ಕೃತ್ಯದ ಜಾಡು ಹಿಡಿದು ಶೋಧ ನಡೆಸಿದಾಗ ಸಾಗರ್‌ ಯಾರ್‍ಯಾರಿಗೆ ಕಂಟ್ರಿ ಪಿಸ್ತೂಲ್ ಪೂರೈಸಿದ್ದಾನೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದರು.

ಎಎಸ್‌ಪಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಗಿರಿಮಲ್ಲ ತಳಕಟ್ಟಿ, ಬಸವರಾಜ ಯಲಿಗಾರ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳಾದ ಜಗದೀಶ ಎಚ್.ಎಸ್, ಬಲ್ಲಪ್ಪ ನಂದಗಾವಿ, ರಾಯಗೊಂಡ ಜಾನರ, ಮಲ್ಲಯ್ಯ ಮಠಪತಿ, ನಾನಾಗೌಡ ಪಾಟೀಲ, ಗುರುಶಾಂತ ದಾಶ್ಯಾಳ, ಪರಶುರಾಮ ಮನಗೂಳಿ, ವಿನೋದ ದೊಡಮನಿ, ಎನ್.ಎ.ಉಪ್ಪಾರ, ಶ್ರೀಕಾಂತ ಕಾಂಬಳೆ, ಆರೀಫ್ ಮುಶಾಪುರಿ, ದೇವರಾಜ ಉಳ್ಳಾಗಡ್ಡಿ, ಸೀತಾರಾಮ ಲಮಾಣಿ, ಬಿ.ಎಂ.ಸಂಗಾಪುರ, ಬಿ.ಎ.ತಿಪ್ಪರೆಡ್ಡಿ ಹಾಗೂ ಸಿಬ್ಬಂದಿಗಳಾದ ಎಂ.ಎನ್.ಮುಜಾವರ, ಬಿ.ವಿ.ಪವಾರ, ಎಚ್.ಡಿ.ಗೊಳಸಂಗಿ, ಎಲ್.ಎಸ್.ಹಿರೇಗೌಡರ, ಎ.ಎ.ಪಟ್ಟಣಶೆಟ್ಟಿ, ಆರ್.ವೈ.ದಳವಾಯಿ, ಎ.ಎಸ್.ಬಿರಾದಾರ, ಆರ್.ಪಿ.ಗಡೆದ, ಎಸ್.ಎಚ್.ನಾಯಕ, ಎಸ್.ಬಿ.ರಾಠೋಡ, ಕೆ.ಎಸ್.ಬಿರಾದಾರ, ಎಸ್.ಪಿ.ಲಮಾಣಿ ಅವರನ್ನೊಳಗೊಂಡ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ಎಸ್‌ಪಿಗಳಾದ ರಾಮನಗೌಡ ಹಟ್ಟಿ, ಶಂಕರ ಮಾರಿಹಾಳ, ಡಿವೈಎಸ್ಪಿಗಳಾದ ಗಿರಿಮಲ್ಲ ತಳಕಟ್ಟಿ, ಬಸವರಾಜ ಯಲಿಗಾರ ಹಾಗೂ ಸಿಬ್ಬಂದಿ ಮುಂತಾದವರು ಇದ್ದರು.---------------

ಬಾಕ್ಸ್‌

ಯಾರ್‍ಯಾರಿಂದ ಪಿಸ್ತೂಲ್‌ ಜಪ್ತಿ..?

ಹಂಚನಾಳ ತಾಂಡಾದ ನಿವಾಸಿ ಪ್ರಕಾಶ ರಾಠೋಡ ಎಂಬಾತನನ್ನು ಬಂಧಿಸಿ ಆತನಿಂದ ಒಂದು ಪಿಸ್ತೂಲ್, ೩ ಜೀವಂತ ಗುಂಡು, ಅರಕೇರಿಯ ನಿವಾಸಿ ಅಶೋಕ ಪಾಂಡ್ರೆಯಿಂದ ೧ ಕಂಟ್ರಿ ಪಿಸ್ತೂಲ್, ೨ ಸಜೀವ ಗುಂಡು, ಸೊಲ್ಲಾಪೂರ ಮೂಲದ ಸುಜಿತ ಸುಭಾಸ ರಾಠೋಡನಿಂದ ಒಂದು ಪಿಸ್ತೂಲ್, ಒಂದು ಜೀವಂತ ಗುಂಡು, ವಿಜಯಪುರ ಸಾಯಿ ಪಾರ್ಕ್ ನಿವಾಸಿ ಸುಖದೇವ ಉರ್ಫ್ ಸುಖಿ ರಾಠೋಡನಿಂದ ಒಂದು ಪಿಸ್ತೂಲ್ ಹಾಗೂ ಒಂದು ಜೀವಂತ ಗುಂಡು, ಪ್ರಕಾಶ ರಾಠೋಡನಿಂದ ಒಂದು ಪಿಸ್ತೂಲ್ ಹಾಗೂ ಜೀವಂತ ಗುಂಡು, ಗಣೇಶ ಶಿವರಾಮ ಶೆಟ್ಟಿಯಿಂದ ಒಂದು ಪಿಸ್ತೂಲ್, ನಾಲ್ಕು ಜೀವಂತ ಗುಂಡು, ಚನ್ನಪ್ಪ ನಾಗನೂರ ಎಂಬಾತನಿಂದ ಒಂದು ಪಿಸ್ತೂಲ್, ನಾಲ್ಕು ಜೀವಂತ ಗುಂಡು, ಸಂತೋಷ ರಾಠೋಡನಿಂದ ಒಂದು ಪಿಸ್ತೂಲ್, ನಾಲ್ಕು ಜೀವಂತ ಗುಂಡು ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜನಾರ್ಧನ ಪವಾರನಿಂದ ಒಂದು ಪಿಸ್ತೂಲ್, ಸಾಗರ ಉರ್ಫ್ ಸುರೇಶ ರಾಠೋಡನಿಂದ ಒಂದು ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದರು.