ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್‌ ರಾಡಾರ್‌ ಗನ್‌ ಕಾರ್ಯಾಚರಣೆ

| Published : Sep 03 2024, 01:41 AM IST

ವಾಹನಗಳ ವೇಗ ನಿಯಂತ್ರಣಕ್ಕೆ ಸ್ಪೀಡ್‌ ರಾಡಾರ್‌ ಗನ್‌ ಕಾರ್ಯಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ಅತಿ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಿದ್ದು, ವಾಹನಗಳ ವೇಗ ತಗ್ಗಿಸಲು ಇದೀಗ ಟ್ರಾಫಿಕ್‌ ಪೊಲೀಸರು ಮತ್ತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಪೀಡ್‌ ರಾಡಾರ್‌ ಗನ್‌ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಧಾರವಾಡ: ಅತಿ ವೇಗದ ಚಾಲನೆಯಿಂದ ಅಪಘಾತಗಳು ಹೆಚ್ಚುತ್ತಿದ್ದು, ವಾಹನಗಳ ವೇಗ ತಗ್ಗಿಸಲು ಇದೀಗ ಟ್ರಾಫಿಕ್‌ ಪೊಲೀಸರು ಮತ್ತೆ ಹು-ಧಾ ಅವಳಿ ನಗರದ ಪ್ರಮುಖ ರಸ್ತೆಗಳಲ್ಲಿ ಸ್ಪೀಡ್‌ ರಾಡಾರ್‌ ಗನ್‌ ಮೂಲಕ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಬೈಕ್‌, ಕಾರು ಸೇರಿದಂತೆ ಇತರ ವಾಹನಗಳ ಇನ್ಸೂರೆನ್ಸ್‌, ಪರವಾನಗಿ ಇತರ ದಾಖಲೆಗಳಿಗಾಗಿ ವಾಹನಗಳಿಗೆ ಕೈ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರು, ನಿಗದಿತ ವೇಗದ ಮಿತಿ ಮೀರಿದರೂ ದಂಡದ ಪ್ರಯೋಗದ ಮೂಲಕ ವಾಹಗಳ ವೇಗ ನಿಯಂತ್ರಿಸುತ್ತಿದ್ದಾರೆ. ಈ ಮೊದಲು ಕ್ಯಾಮೆರಾ ಮೂಲಕ ಕಾರ್ಯಾಚರಣೆ ಮಾಡಲಾಗುತ್ತಿತ್ತು. ತದನಂತರ ಈ ಕಾರ್ಯಾಚಾರಣೆ ನಿಲ್ಲಿಸಲಾಗಿತ್ತು. ಇದೀಗ ರಸ್ತೆಗಳಲ್ಲಿ ವಾಹನಗಳ ವೇಗ ಪರಿಶೀಲಿಸಲು ಸಂಚಾರ ಠಾಣೆಗಳಿಗೆ ಆಧುನಿಕ ತಂತ್ರಜ್ಞಾನವುಳ್ಳ ಸ್ಪೀಡ್ ರಾಡಾರ್ ಗನ್ ನೀಡಿದ್ದು, ಅತಿವೇಗದ ವಾಹನಗಳ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ನಿಯಮ ಮೀರಿದರೆ ದಂಡ ವಿಧಿಸುತ್ತಿದ್ದಾರೆ.

ಮೂರು ಕಡೆ ಕಾರ್ಯಾಚರಣೆ: ರಾಜ್ಯಾದ್ಯಂತ ಈ ಕ್ರಮ ನಡೆಯುತ್ತಿದ್ದು, ಹುಬ್ಬಳ್ಳಿ ಉತ್ತರ, ದಕ್ಷಿಣ ಸಂಚಾರ ಪೊಲೀಸ್ ಠಾಣೆ ಮತ್ತು ಧಾರವಾಡ ಸಂಚಾರ ಪೊಲೀಸ್ ಠಾಣೆಗೆ ಮೂರು ವೇಗವನ್ನು ಪತ್ತೆ ಹಚ್ಚುವ ಅತ್ಯಾಧುನಿಕ ಸ್ಪೀಡ್‌ ರಾಡಾರ್‌ ಗನ್‌ ನೀಡಲಾಗಿದೆ. ಸದ್ಯ ಹೆದ್ದಾರಿಗಳಲ್ಲಿ ಗಂಟೆಗೆ 130 ಕಿಮೀ ವೇಗದ ಮಿತಿ ಇದೆ. ಅವಳಿ ನಗರಗಳ ಮಿತಿಯಲ್ಲಿ ಕೇವಲ 40 ಕಿಮೀ ಇದೆ. ನಗರದ ಹೊರವಲಯದ ತಾರಿಹಾಳ ರಸ್ತೆ, ಹುಬ್ಬಳ್ಳಿಯ ಗಬ್ಬೂರು ರಸ್ತೆ, ಧಾರವಾಡದ ಕೃಷಿ ವಿವಿಯ ಹಳೇ ಪಿಬಿ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಇದೀಗ ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ.

₹ 1000 ದಂಡ: ಹುಬ್ಬಳ್ಳಿ-ಧಾರವಾಡದಲ್ಲಿ ಮೂರು ಸ್ಪೀಡ್ ರಾಡಾರ್ ಗನ್‌ಗಳಿದ್ದು, ಪೊಲೀಸರು ನಿಯಮಿತವಾಗಿ ರಸ್ತೆಗಳಲ್ಲಿ ವಾಹನಗಳನ್ನು ಈ ಯಂತ್ರದ ಮೂಲಕ ಪರಿಶೀಲಿಸುತ್ತಾರೆ. ವೇಗವಾಗಿ ಬರುವ ವಾಹನಗಳನ್ನು ನಂಬರ್‌ ಪ್ಲೇಟ್‌ ಸಮೇತ ಈ ಯಂತ್ರ ಗುರುತಿಸಿ ವೇಗವನ್ನು ಸೆರೆಹಿಡಿದು ದಾಖಲಿಸಿಕೊಳ್ಳುತ್ತದೆ. ಅಂತಹ ವಾಹನಗಳ ಮೇಲೆ ಪ್ರಕರಣ ದಾಖಲಿಸಿ, ಅತಿವೇಗಕ್ಕೆ ₹ 1000 ದಂಡ ವಸೂಲಿ ಮಾಡಲಾಗುತ್ತಿದೆ. ಕಳೆದ ಒಂದೂವರೆ ತಿಂಗಳಲ್ಲಿ ಉತ್ತರ, ದಕ್ಷಿಣ ಮತ್ತು ಧಾರವಾಡ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 1,154 ಪ್ರಕರಣ ವರದಿಯಾಗಿದ್ದು, ಸಂಚಾರ ನಿಯಮ ಉಲ್ಲಂಘನೆಯಿಂದ ₹ 11.53 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ಸಹಾಯಕ ಪೊಲೀಸ್ ಆಯುಕ್ತ (ಸಂಚಾರ) ವಿನೋದ ಮುಕ್ತೇದಾರ ಮಾಹಿತಿ ನೀಡಿದರು.

ಟ್ರಾಫಿಕ್ ಪೊಲೀಸರ ಈ ಕ್ರಮದಿಂದ ಅವಳಿ ನಗರದ ಕೆಲವು ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದರೆ, ಇನ್ನು ಕೆಲವರು ವಿರೋಧಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕೆಲವು ವಾಹನ ಚಾಲಕರು ವಿಪರೀತ ವೇಗದಲ್ಲಿ ಚಲಾಯಿಸುತ್ತಾರೆ. ಅಂತಹವರಿಗೆ ಇಂತಹ ದಂಡದ ಕ್ರಮ ಉಪಯುಕ್ತ ಎಂಬ ಅಭಿಪ್ರಾಯಗಳು ವ್ಯಕ್ತವಾದರೆ, ವಿಶಾಲ, ಅಗಲವಾದ ರಸ್ತೆಯಲ್ಲಿ ವೇಗದ ಮಿತಿ ಬೇಡ. ಕೆಲಸ-ಕಾರ್ಯಗಳ ನಿಮಿತ್ತ ಆಕಸ್ಮಿಕವಾಗಿ ವೇಗವಾಗಿ ಹೋಗುತ್ತಿದ್ದರೂ ಅವರಿಗೆ ದಂಡ ಏತಕ್ಕೆ ಎಂಬ ಅಭಿಪ್ರಾಯಗಳೂ ಇವೆ. ಪರ-ವಿರೋಧ ಮಧ್ಯೆ ಟ್ರಾಫಿಕ್‌ ಪೊಲೀಸರು ಮಾತ್ರ ಸರ್ಕಾರದ ಆದೇಶದಂತೆ ನಿಯಮ ಮೀರಿದ ವಾಹನ ಚಾಲಕರಿಗೆ ದಂಡದ ಬಿಸಿ ಮುಟ್ಟಿಸುತ್ತಿದ್ದಾರೆ.