ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಪ್ರೇಮಿಗಳ ದಿನಾಚರಣೆ ನಿಮಿತ್ತ ಭಿಕ್ಷಾಟನೆಯಲ್ಲಿ ತೊಡಗಿದ್ದ 72 ಮಕ್ಕಳನ್ನು ಸಿಸಿಬಿ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಎನ್‌ಜಿಓ ಸಂಸ್ಥೆಗಳು ಜಂಟಿಯಾಗಿ ವಿಶೇಷ ಕಾರ್ಯಾಚರಣೆ ನಡೆಸಿ ಶನಿವಾರ ರಕ್ಷಣೆ ಮಾಡಿದ್ದಾರೆ.

ಈ ದಾಳಿ ವೇಳೆ 44 ಗಂಡು ಮಕ್ಕಳು ಹಾಗೂ 28 ಹೆಣ್ಣು ಮಕ್ಕಳು ಪತ್ತೆಯಾಗಿದ್ದು, ಇವರನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಲಾಗಿದೆ. ಈ ಮಕ್ಕಳ ಪೋಷಕರನ್ನು ಪತ್ತೆ ಹಚ್ಚುವ ಕಾರ್ಯಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಕೆಲ ಪ್ರಮುಖ ಜಂಕ್ಷನ್‌ಗಳು ಹಾಗೂ ರಸ್ತೆಗಳು ಸೇರಿ ಜನಸಂದಣಿ ಪ್ರದೇಶಗಳಲ್ಲಿ ಅಪ್ರಾಪ್ತ ಮಕ್ಕಳನ್ನು ಬಳಸಿಕೊಂಡು ಭಿಕ್ಷಾಟನೆ ನಡೆಸುತ್ತಿರುವ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಪ್ರೇಮಿಗಳ ದಿನಾಚರಣೆ ಅಂಗವಾಗಿ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳ ರಕ್ಷಣೆಗೆ ವಿಶೇಷ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಯಿತು. ಅಂತೆಯೇ ಸಮಾಜ ಕಲ್ಯಾಣ ಇಲಾಖೆ, ಎನ್‌ಜಿಓಗಳ ಜತೆ ಜಂಟಿ ಕಾರ್ಯಾಚರಣೆ ನಡೆಸಿ ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.