ಸಾರಾಂಶ
ಹೊಸಪೇಟೆ : ಪಾಕಿಸ್ತಾನದ ಉಗ್ರರ ಅಡಗು ತಾಣಗಳ ಮೇಲೆ ಭಾರತ ಆಪರೇಷನ್ ಸಿಂದೂರ ನಡೆಸಿದ ಬಳಿಕ ಹಂಪಿ, ತುಂಗಭದ್ರಾ ಜಲಾಶಯ ಸೇರಿದಂತೆ ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ವಿಜಯನಗರ ಪೊಲೀಸ್ ಇಲಾಖೆಯಿಂದ ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದೆ.
ಜಿಲ್ಲೆಯ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ ಹಾಗೂ ಗುಡೇಕೊಟೆ ಕರಡಿ ಧಾಮ, ಅಟಲ್ ಬಿಹಾರಿ ವಾಜಪೇಯಿ ಜೂಲಾಜಿಕಲ್ ಪಾರ್ಕ್ ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.
ತುಂಗಭದ್ರಾ ಜಲಾಶಯದ ಬಳಿ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ. ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲ, ಟಿಬಿಡ್ಯಾಂನಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಕೇಂದ್ರ ಕೈಗಾರಿಕೆ ಕಾವಲು ಪಡೆಯವರು ಭದ್ರತೆ ಒದಗಿಸಿದ್ದಾರೆ. ಜಲಾಶಯದ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ, ಅವರನ್ನು ವಿಚಾರಿಸಲಾಗುತ್ತಿದೆ. ಸ್ಥಳೀಯ ಪೊಲೀಸರು ಕೂಡ ಗಸ್ತು ಹೆಚ್ಚಿಸಿದ್ದಾರೆ. ಈ ಜಲಾಶಯ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶ ಮೂರು ರಾಜ್ಯಗಳಿಗೂ ನೀರು ಒದಗಿಸುತ್ತದೆ. ಹಾಗಾಗಿ ಭದ್ರತೆ ಹೆಚ್ಚಿಸಲಾಗಿದೆ.
ಹಂಪಿಗೆ ಭಾರೀ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುವ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯ ಗುಪ್ತಚರ ಇಲಾಖೆಗಳ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸರು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದಾರೆ. ಇನ್ನು ಪೊಲೀಸರು ಮಫ್ತಿಯಲ್ಲಿ ತಿರುಗಾಡಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಮೇಲೆ ನಿಗಾ ಇಟ್ಟಿದ್ದಾರೆ. ದೇಶ, ವಿದೇಶಿ ಪ್ರವಾಸಿಗರಿಗೆ ಭದ್ರತೆ ಒದಗಿಸುವುದಕ್ಕಾಗಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳಲ್ಲೂ ಪೊಲೀಸರು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.
ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿದ ಬಳಿಕ ಪ್ರಮುಖ ಪ್ರವಾಸಿ ತಾಣ ಹಂಪಿ, ಟಿಬಿ ಡ್ಯಾಂನಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಇನ್ನು ಪಾಕಿಸ್ತಾನದ ಮೇಲೆ ಭಾರತದ ಪ್ರತೀಕಾರದ ದಾಳಿ ಹಿನ್ನೆಲೆ ಪ್ರವಾಸಿ ತಾಣಗಳ ಮೇಲೆ ಇನಷ್ಟು ನಿಗಾ ವಹಿಸಲಾಗಿದೆ ಎಂದು ಎಸ್ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದ್ದಾರೆ.