ಬೇಸಿಗೆ ರಜೆಯಿಂದ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅವಕಾಶ: ಕೆ.ಪಿ.ಬಾಬು

| Published : Apr 16 2024, 01:08 AM IST

ಬೇಸಿಗೆ ರಜೆಯಿಂದ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಅವಕಾಶ: ಕೆ.ಪಿ.ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ರಜಾ ಸಮಯವನ್ನು ವ್ಯರ್ಥವಾಗಿ ಕಳೆಯದೆ ಪತ್ರಿಕೆಗಳನ್ನು ಮತ್ತು ಉತ್ತಮ ಪುಸ್ತಕಗಳನ್ನು ಓದುವುದಕ್ಕೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಇದರಿಂದ ಜ್ಞಾನ ವೃದ್ಧಿಸುವುದರೊಂದಿಗೆ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ರಜಾದಿನಗಳನ್ನು ಕೇವಲ ಮನೋರಂಜನೆಗೆ ಮೀಸಲಿಟ್ಟರೆ ಪ್ರಯೋಜನವಿಲ್ಲ. ಮನೋರಂಜನೆ ಜೊತೆಯಲ್ಲಿ ಮನೋವಿಕಾಸವೂ ವಿದ್ಯಾರ್ಥಿಗಳಿಗೆ ಅಗತ್ಯ.

ಕನ್ನಡಪ್ರಭ ವಾರ್ತೆ ಮಂಡ್ಯ

ಬೇಸಿಗೆ ರಜೆ ಸಮಯವನ್ನು ಮಜಾವಾಗಿ ಕಳೆಯುವುದು ಒಂದೆಡೆಯಾದರೆ ಸಾಮಾನ್ಯ ಜ್ಞಾನ, ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳುವುದಕ್ಕೂ ಒಂದಷ್ಟು ಸಮಯ ಮೀಸಲಿಡಬೇಕು ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ತಿಮ್ಮನಹೊಸೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ವ್ಯಕ್ತಿತ್ವ ವಿಕಸನ, ಸಾಮಾನ್ಯ ಜ್ಞಾನ ಸಂಸ್ಕಾರ, ರಜಾ ದಿನಗಳ ಸದುಪಯೋಗದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ರಜಾ ಸಮಯವನ್ನು ವ್ಯರ್ಥವಾಗಿ ಕಳೆಯದೆ ಪತ್ರಿಕೆಗಳನ್ನು ಮತ್ತು ಉತ್ತಮ ಪುಸ್ತಕಗಳನ್ನು ಓದುವುದಕ್ಕೆ ವಿದ್ಯಾರ್ಥಿಗಳು ಆಸಕ್ತಿ ವಹಿಸಬೇಕು. ಇದರಿಂದ ಜ್ಞಾನ ವೃದ್ಧಿಸುವುದರೊಂದಿಗೆ ವ್ಯಕ್ತಿತ್ವವೂ ವಿಕಸನಗೊಳ್ಳುತ್ತದೆ. ರಜಾದಿನಗಳನ್ನು ಕೇವಲ ಮನೋರಂಜನೆಗೆ ಮೀಸಲಿಟ್ಟರೆ ಪ್ರಯೋಜನವಿಲ್ಲ. ಮನೋರಂಜನೆ ಜೊತೆಯಲ್ಲಿ ಮನೋವಿಕಾಸವೂ ವಿದ್ಯಾರ್ಥಿಗಳಿಗೆ ಅಗತ್ಯ ಎಂದು ಕಿವಿಮಾತು ಹೇಳಿದರು.

ಪರೀಕ್ಷೆಗಳೆಲ್ಲಾ ಮುಗಿದಿರುವುದರಿಂದ ನಮ್ಮ ನಾಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನಗಳು, ಸ್ಮಾರಕಗಳು, ಪ್ರವಾಸಿ ತಾಣಗಳಿಗೆ ಭೇಟಿ ಕೊಡಬೇಕು. ಅಲ್ಲಿನ ಸ್ಥಳದ ವಿಶೇಷ, ದೇವಸ್ಥಾನಗಳ ಮಹತ್ವ, ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ನಾಡಿನ ಸಂಸ್ಕೃತಿಯ ಪರಿಚಯವಾಗುತ್ತದೆ. ಪ್ರವಾಸದಿಂದ ಹೊಸ ಅನುಭವ ಪಡೆದುಕೊಂಡಂತಾಗುವುದು. ಅದರ ಬಗ್ಗೆ ಪುಟ್ಟ ಲೇಖನಗಳನ್ನು ಬರೆಯುವ, ವಿಶೇಷತೆಗಳನ್ನು ಗುರುತಿಸುವ ಕೌಶಲ್ಯವನ್ನು ಸಂಪಾದಿಸುವಂತೆಎ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಸ್ತು, ವಿನಯ, ಸಂಸ್ಕಾರಗಳನ್ನು ರೂಢಿಸಿಕೊಂಡು ಸಂಸ್ಕಾರವಂತರಾಗಿ ಬೆಳವಣಿಗೆ ಕಾಣಬೇಕು. ಪರಿಸರ ಪ್ರೇಮವನ್ನು ಚಿಕ್ಕ ವಯಸ್ಸಿನಲ್ಲಿಯೇ ರೂಢಿಸಿಕೊಳ್ಳಬೇಕು. ಗಿಡಗಳನ್ನು ನೆಟ್ಟು ಬೆಳೆಸುವುದಕ್ಕೆ ಒಲವು ತೋರಿದಾಗ ಪರಿಸರ ಬೆಳವಣಿಗೆ ಕಾಣುತ್ತದೆ. ಊರಿನಲ್ಲೇ ಖಾಲಿ ಇರುವ ಜಾಗದಲ್ಲಿ ಗಿಡ-ಮರಗಳನ್ನು ನೆಟ್ಟು ಬೆಳೆಸುವುದರಿಂದ ಶುದ್ಧ ಗಾಳಿ, ಉತ್ತಮ ಆರೋಗ್ಯ ಲಭಿಸುತ್ತದೆ. ಇದರ ಬಗ್ಗೆ ಗ್ರಾಮಸ್ಥರಿಗೂ ವಿದ್ಯಾರ್ಥಿಗಳು ಅರಿವು ಮೂಡಿಸಬೇಕು ಎಂದರು.

ಮೊಬೈಲ್, ಇಂಟರ್ನೆಟ್ ವೀಕ್ಷಿಸುವ ಸಮಯದಲ್ಲಿ ಜ್ಞಾನಾರ್ಜನೆಗೆ ಪೂರಕವಾಗುವ, ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸೀಮಿತವಾಗಿ ಉಪಯೋಗಿಸುವುದು ಒಳ್ಳೆಯದು. ದಿನಕ್ಕೊಂದು ಗಂಟೆ ಉಪಯೋಗಿಸಿ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದ ಅವರು, ಬೇಸಿಗೆ ಇರುವುದರಿಂದ ಆಹಾರ ಸೇವನೆಯಲ್ಲೂ ಜಾಗೃತಿ ವಹಿಸಬೇಕು. ಸಾಧ್ಯವಾದಷ್ಟು ದ್ರವರೂಪದ ಆಹಾರ ಸೇವನೆಗೆ ಒತ್ತು ನೀಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. -ಸ್ಟ್‌ಪುಡ್, ಜಂಕ್-ಡ್‌ಗಳಿಂದ ದೂರವಿದ್ದು ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸಿ. ಮುದ್ದೆ, ಸೊಪ್ಪು, ತರಕಾರಿ, ಹಣ್ಣಿನ ರಸ ಇವೆಲ್ಲವೂ ದೇಹಾರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ನಿತ್ಯ ವ್ಯಾಯಾಮ, ಧ್ಯಾನ, ಯೋಗವನ್ನು ಅಳವಡಿಸಿಕೊಂಡಾಗ ಏಕಾಗ್ರತೆ ಮೂಡುತ್ತದೆ. ಮನಸ್ಸು ಕ್ರಿಯಾಶೀಲಗೊಳ್ಳುತ್ತದೆ. ಸದಾ ಚಟುವಟಿಕೆಯಿಂದ ದೇಹವನ್ನು ಇರಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇವುಗಳನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡು ಸದೃಢ ದೇಹವನ್ನು ಹೊಂದಬೇಕು ಎಂದರು.

ಮುಖ್ಯ ಶಿಕ್ಷಕ ಯೋಗೇಶ್, ಶಿಕ್ಷಕರು ಹಾಜರಿದ್ದರು.