ಕೆನಾಲ್ ವಿರೋಧಿಸಿ, ತುಮಕೂರು ಜಿಲ್ಲಾ ಬಂದ್ ಬೆಂಬಲಿಸಿ: ಶಾಸಕ ಜ್ಯೋತಿ ಗಣೇಶ್ ಮನವಿ

| Published : Jun 24 2024, 01:30 AM IST

ಕೆನಾಲ್ ವಿರೋಧಿಸಿ, ತುಮಕೂರು ಜಿಲ್ಲಾ ಬಂದ್ ಬೆಂಬಲಿಸಿ: ಶಾಸಕ ಜ್ಯೋತಿ ಗಣೇಶ್ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಕೆಡಿಪಿ ಸಭೆಯಲ್ಲೂ ಕೆನಾಲ್ ಯೋಜನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಜನರ ವಿರೋಧದ ನಡುವೆಯೂ ಸರ್ಕಾರ ಮಾಗಡಿ, ರಾಮನಗರ ಭಾಗಕ್ಕೆ ಅನಧಿಕೃತವಾಗಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದೆ. ಸರ್ಕಾರದ ಈ ಕ್ರಮದಿಂದ ಜಿಲ್ಲೆಯ ಜನರ ಕುಡಿಯುವ ನೀರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಈ ತಿಂಗಳ 25ರಂದು (ಮಂಗಳವಾರ) ಕರೆ ನೀಡಿರುವ ತುಮಕೂರು ಜಿಲ್ಲಾ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ ಶಾಸಕ ಜಿ.ಬಿ.ಜ್ಯೋತಿ ಗಣೇಶ್, ಜಿಲ್ಲೆಯ ಸಾರ್ವಜನಿಕರು, ಸಂಘ, ಸಂಸ್ಥೆಯವರು ಬಂದ್ ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಶಾಸಕ ಜಿ.ಬಿ.ಜ್ಯೋತಿಗಣೇಶ್, ಎಕ್ಸ್ ಪ್ರೆಸ್ಸ್ ಲಿಂಕ್ ಕೆನಾಲ್‌ನಿಂದ ತುಮಕೂರು ಜಿಲ್ಲೆಯ ಕುಡಿಯುವ ನೀರಿಗೆ ಮೂಲ ಆಧಾರವಾಗಿರುವ ಹೇಮಾವತಿ ಯೋಜನೆಯ ಆಶಯಕ್ಕೆ ಧಕ್ಕೆಯಾಗುತ್ತದೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಯೋಜನೆ ಮುಂದುವರಿಸಬಾರದು, ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲೆಯಾದ್ಯಂತ ತೀವ್ರ ಒತ್ತಾಯ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗುತ್ತಿವೆ, ತುಮಕೂರು ನಗರ ದಿನೇದಿನೇ ಬೆಳವಣಿಗೆಯಾಗುತ್ತಿರುವುದರಿಂದ ಕುಡಿಯುವ ನೀರಿನ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಮಾಗಡಿ, ರಾಮನಗರ ಭಾಗಕ್ಕೆ ತೆಗೆದುಕೊಂಡು ಹೋಗುವ ಸರ್ಕಾರದ ಪ್ರಯತ್ನ ಸರಿಯಲ್ಲ ಎಂದು ಹೇಳಿದ್ದಾರೆ.

ಜಿಲ್ಲೆಯ ಕೆಡಿಪಿ ಸಭೆಯಲ್ಲೂ ಕೆನಾಲ್ ಯೋಜನೆ ವಿರುದ್ಧ ನಿರ್ಣಯ ತೆಗೆದುಕೊಳ್ಳಲಾಗಿದೆ. ಜಿಲ್ಲೆಯ ಜನರ ವಿರೋಧದ ನಡುವೆಯೂ ಸರ್ಕಾರ ಮಾಗಡಿ, ರಾಮನಗರ ಭಾಗಕ್ಕೆ ಅನಧಿಕೃತವಾಗಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಹೇಮಾವತಿ ನೀರು ತೆಗೆದುಕೊಂಡು ಹೋಗಲು ಪ್ರಯತ್ನ ನಡೆಸಿದೆ. ಸರ್ಕಾರದ ಈ ಕ್ರಮದಿಂದ ಜಿಲ್ಲೆಯ ಜನರ ಕುಡಿಯುವ ನೀರಿಗೆ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.

ಇತ್ತೀಚೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆದ ಈ ಭಾಗದ ಚುನಾಯಿತ ಪ್ರತಿನಿಧಿಗಳ ಸಭೆಯಲ್ಲೂ ತೀವ್ರ ವಿರೋಧ ವ್ಯಕ್ತವಾಯಿತು. ಹೇಮಾವತಿ ಎಕ್ಸ್ಪ್ರೆಸ್ ಕೆನಾಲ್ ಕಾಮಗಾರಿ ಸಂಬಂಧ ಸರ್ಕಾರ ತಾಂತ್ರಿಕ ಸಮಿತಿ ರಚಿಸಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ. ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. 25ರಂದು ನಡೆಯುವ ಜಿಲ್ಲಾ ಬಂದ್‌ಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ. ಸಾರ್ವಜನಿಕರು, ಸಂಘ-ಸಂಸ್ಥೆಗಳು ಬಂದ್ ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದ್ದಾರೆ.