ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ಆಡಳಿತ ಪಕ್ಷದ ಕೈಕಟ್ಟಿ ಹಾಕುವುದಕ್ಕೆ ಆಗುವುದಿಲ್ಲ. ಏಕೆಂದರೆ, ವಿಪಕ್ಷದವರು ಈಗಾಗಲೇ ತಮ್ಮ ತಮ್ಮ ಕೈಗಳನ್ನು ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. ನಾನು ಹಿಟ್ ಅಂಡ್ ರನ್‌ ಮಾಡುವುದಿಲ್ಲ. ಈಗ ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಜ.2ರಂದು ಎಲ್ಲವನ್ನೂ ಮಾತನಾಡುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ ಬಳಗದ ಶಾಸಕ ಚನ್ನಗಿರಿಯ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.

- ವಿಜಯಣ್ಣ ಕೈಯನ್ನು ರಮೇಶ, ಯತ್ನಾಳ ಕಟ್ಟಿಹಾಕಿದ್ದಾರೆ: ಶಿವಗಂಗಾ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೆಳಗಾವಿ ಅಧಿವೇಶನದಲ್ಲಿ ವಿಪಕ್ಷಗಳು ಆಡಳಿತ ಪಕ್ಷದ ಕೈಕಟ್ಟಿ ಹಾಕುವುದಕ್ಕೆ ಆಗುವುದಿಲ್ಲ. ಏಕೆಂದರೆ, ವಿಪಕ್ಷದವರು ಈಗಾಗಲೇ ತಮ್ಮ ತಮ್ಮ ಕೈಗಳನ್ನು ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. ನಾನು ಹಿಟ್ ಅಂಡ್ ರನ್‌ ಮಾಡುವುದಿಲ್ಲ. ಈಗ ಸದ್ಯಕ್ಕೆ ಏನನ್ನೂ ಮಾತನಾಡುವುದಿಲ್ಲ. ಜ.2ರಂದು ಎಲ್ಲವನ್ನೂ ಮಾತನಾಡುವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಆಪ್ತ ಬಳಗದ ಶಾಸಕ ಚನ್ನಗಿರಿಯ ಬಸವರಾಜ ವಿ. ಶಿವಗಂಗಾ ಹೇಳಿದರು.

ಸೋಮವಾರ ಬೆಳಗಾವಿ ಅಧಿವೇಶನಕ್ಕೆ ತೆರಳುವ ಮುನ್ನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.9ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಶುರುವಾಗಲಿದೆ. ವಿಜಯಣ್ಣ ಕೈಯನ್ನು ರಮೇಶ ಕಟ್ಟಿ ಹಾಕಿದ್ದಾರೆ. ಯತ್ನಾಳ ಸಹ ಕಟ್ಟಿ ಹಾಕಿದ್ದಾರೆ. ಹೀಗೆ ತಮ್ಮ ತಮ್ಮ ಕೈಗಳನ್ನು ವಿಪಕ್ಷದವರು ತಾವೇ ಕಟ್ಟಿಕೊಂಡಿದ್ದಾರೆ. ವಿಪಕ್ಷದ ಸ್ಥಿತಿ ಹೀಗಿರುವ ಸದನದಲ್ಲಿನೇನು ನಮ್ಮನ್ನು ಕಟ್ಟಿ ಹಾಕುತ್ತಾರೆ ಎಂದು ಅವರು ಪ್ರಶ್ನಿಸಿದರು.

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು. ಅಂತಹ ಸಮಸ್ಯೆಗಳ ಪರಿಹಾರವಾಗಬೇಕು. ಆದರೆ, ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನ ಯಾವಾಗಲೂ ಪ್ರತಿಭಟನೆಗಳಿಗಷ್ಟೇ ಸೀಮಿತವಾಗಿದೆ. ಇದೇ ಕಾರಣಕ್ಕೆ ಸುವರ್ಣ ಸೌಧದ ಮುಂದೆ ಒಂದು ಪ್ರತಿಭಟನಾ ಟೆಂಟ್ ಸಹ ನಿರ್ಮಿಸಿದ್ದಾರೆ. ಯಾವುದೇ ಪಕ್ಷವಾಗಲೀ ಮೊದಲು ಉತ್ತರ ಕರ್ನಾಟಕ, ಅಲ್ಲಿನ ಜನರ ಸಮಸ್ಯೆ ಪರಿಹರಿಸುವ ಬಗ್ಗೆ ಚರ್ಚಿಸಲಿ ಎಂದು ಶಾಸಕರು ಹೇಳಿದರು.

ರಾಜ್ಯ ರಾಜಕಾರಣದಲ್ಲಿ ಈಗ ದುಬಾರಿ ವಾಚ್‌ಗಳ ಅನಗತ್ಯವಾಗಿ ಚರ್ಚೆಯಾಗುತ್ತಿದೆ. ಇದೆಲ್ಲಾ ಅಪ್ರಸ್ತುತ. ಈ ಬಗ್ಗೆ ಪರಿಶೀಲನೆ ನಡೆಸಲು ಐ.ಟಿ., ಇ.ಡಿ.ಯವರು ಇದ್ದಾರೆ. ನಮ್ಮ ಬಳಿ ದುಡ್ಡು ಇಲ್ಲ. ಹಾಗಾಗಿ ನಾವು ವಾಚ್ ಕಟ್ಟಿಲ್ಲ ಎಂದು ಸಿಎಂ- ಡಿಸಿಎಂ ವಾಚ್‌ಗಳ ವಿಚಾರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

ಬೆಳಗಾವಿಯಲ್ಲಿ ಡಿ.9ರಂದು ನಡೆಯಲಿರುವ ಶಾಸಕಾಂಗ ಪಕ್ಷದ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಶಾಸಕಾಂಗ ಸಭೆಯೇ ಎಂಬ ಪ್ರಶ್ನೆಗೆ ಶಿವಗಂಗಾ ಬಸವರಾಜ, ಅದನ್ನೆಲ್ಲಾ ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನಿಸುತ್ತದೆ. ನಾವು ನಮ್ಮ ಕ್ಷೇತ್ರದ ಸಮಸ್ಯೆಗಳ ಪರಿಹಾರದ ಕುರಿತಂತೆ ಸಭೆಯಲ್ಲಿ ಚರ್ಚಿಸುತ್ತೇವೆ. ಸಮಸ್ಯೆಗಳ ಪರಿಹಾರದ ಬಗ್ಗೆ ಸಭೆಯಲ್ಲಿ ಮನವಿ ಮಾಡುತ್ತೇವೆಂದು ತಿಳಿಸಿದರು. ಅನಂತರ ಬಸವರಾಜ ಶಿವಗಂಗಾ ಬೆಳಗಾವಿಗೆ ಪಯಣ ಬೆಳೆಸಿದರು.

- - -

(-ಫೋಟೋ: ಬಸವರಾಜ ಶಿವಗಂಗಾ.)