ಸಾರಾಂಶ
ಸಂಡೂರು: ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಶಾಲೆಗಳನ್ನು ಉನ್ನತೀಕರಿಸಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುತ್ತಲಿನ ಸುಮಾರು 5000ಕ್ಕೂ ಹೆಚ್ಚು ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ಮುಚ್ಚುತ್ತಿರುವುದನ್ನು ವಿರೋಧಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ಹಾಗೂ ಡಿವೈಎಫ್‌ಐ ಸಂಘಟನೆ ಮುಖಂಡರು ಮಂಗಳವಾರ ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪ್ರತಿಭಟನಾಕರರು ತಮ್ಮ ಮನವಿ ಪತ್ರವನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಳ್ಳಾಪುರ ವೀರೇಶಪ್ಪ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಎಸ್‌ಎಫ್‌ಐ ತಾಲೂಕು ಘಟಕದ ಸಂಚಾಲದ ಶಿವರೆಡ್ಡಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿನ ದಾಖಲಾತಿ 2015-16ರಲ್ಲಿ 47.1 ಲಕ್ಷದಿಂದ 2025-26ರಲ್ಲಿ 38.2 ಲಕ್ಷಕ್ಕೆ ಕುಸಿದಿದೆ. ಒಟ್ಟು ದಾಖಲಾತಿಯಲ್ಲಿ ಸರ್ಕಾರಿ ಶಾಲೆಗಳ ಪಾಲು ಶೇ. 46ರಿಂದ ಶೇ 38ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ 36.3 ಲಕ್ಷದಿಂದ 47ಲಕ್ಷಕ್ಕೆ ಏರಿಕೆಯಾಗಿದೆ. 2017-18ನೇ ಸಾಲಿನಲ್ಲಿ ಸರ್ಕಾರ ತಾಲೂಕಿಗೆ ಒಂದು ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಿತು. 2018ರಲ್ಲಿ 175 ಸರ್ಕಾರಿ ಶಾಲೆಗಳು, 2019ರಲ್ಲಿ 100 ಸರ್ಕಾರಿ ಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಉನ್ನತೀಕರಣ ಮಾಡಿದೆ. ನಂತರ ಹೊಸ ಶಿಕ್ಷಣ ನೀತಿ ಜಾರಿಯಾದ ಮೇಲೆ, ಅದರನ್ವಯ ಪಂಚಾಯಿತಿಗೆ ಒಂದು ಕೆಪಿಎಸ್ ಶಾಲೆ ಆರಂಭಿಸಲು ಸರ್ಕಾರ ಮುಂದಾಗಿದೆ.
2025ರಿಂದ 2027ರ ಒಳಗೆ ರಾಜ್ಯದಲ್ಲಿ 700 ಪಂಚಾಯ್ತಿಗಳಲ್ಲಿ ಕೆಪಿಎಸ್ ಶಾಲೆಗಳನ್ನು ಉನ್ನತೀಕರಿಸಿ, ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚಲು ಸರ್ಕಾರ ಮುಂದಾಗಿದೆ. ಈಗಾಗಲೆ ಉನ್ನತೀಕರಣ ಮಾಡಿರುವ ಕೆಪಿಎಸ್ ಶಾಲೆಗಳಲ್ಲಿ ಸರ್ಕಾರ ತಿಳಿಸಿರುವ ಆಡಳಿತಾತ್ಮಕ ಕ್ರಮಗಳನ್ನು ಜಾರಿಮಾಡಲು ಸರ್ಕಾರ ವಿಫಲವಾಗಿದೆ. ಉನ್ನತೀಕರಣಗೊಳಿಸಿರುವ ಶಾಲೆಗಳಿಗೆ ಸರಿಯಾಗಿ ಮೂಲ ಸೌಕರ್ಯ ಕಲ್ಪಿಸಿಲ್ಲ ಹಾಗೂ ಶಿಕ್ಷಕರ ನೇಮಕಾತಿ ಮಾಡಿಲ್ಲ ಎಂದು ದೂರಿದರು.ಹೊಸ ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲು ಎನ್‌ಜಿಒಗಳು, ಕಾರ್ಪೋರೇಟ್ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಆಸಕ್ತ ದಾನಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಮಾನದಂಡಗಳ ಮೂಲಕ ಸಂಪೂರ್ಣವಾಗಿ ಕೆಪಿಎಸ್ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ಬಿಟ್ಟು ಕೊಡುವ ಪ್ರಯತ್ನ ಮಾಡುತ್ತಿದೆ. ಇದು ಖಾಸಗೀಕರಣಕ್ಕೆ ಉತ್ತೇಜನ ನೀಡುವಂತಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡುವ ಪ್ರಕ್ರಿಯೆಯಿಂದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯೇ ನಾಶವಾಗುತ್ತದೆ ಎಂದು ಆರೋಪಿಸಿದರು.
ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸ್ವಾಮಿ ಮಾತನಾಡಿ, 700 ಪಂಚಾಯ್ತಿಗಳ ಮಟ್ಟದಲ್ಲಿ ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಿ, ಅವುಗಳಲ್ಲಿ ಪಂಚಾಯ್ತಿ ಸುತ್ತಮುತ್ತಲಿನ ಸರ್ಕಾರಿ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳನ್ನು ವಿಲೀನಗೊಳಿಸುವ ಸರ್ಕಾರದ ಕ್ರಮವನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ. ವಿಲೀನದ ಹೆಸರಿನಲ್ಲಿ ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಅಕ್ಷಯ್ ಕುಮಾರ್, ವಿದ್ಯಾರ್ಥಿಗಳಾದ ಅಮೃತ, ತುಳಸಿ, ಮಹಾಲಕ್ಷ್ಮೀ, ಮುತ್ತಮ್ಮ, ಕಿರಣ್‌ಕುಮಾರ್, ಪ್ರವೀಣ್, ಮೌನೇಶ್, ಮಹೇಶ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))