ಗಂಗಾವತಿ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆಗೆ ವಿರೋಧ: ಅ.5ರಂದು ಪ್ರತಿಭಟನೆ

| Published : Sep 30 2024, 01:18 AM IST

ಗಂಗಾವತಿ ಉಪವಿಭಾಗಕ್ಕೆ ಕುಷ್ಟಗಿ ಸೇರ್ಪಡೆಗೆ ವಿರೋಧ: ಅ.5ರಂದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪ್ರವಾಸಿ ಮಂದಿರದಲ್ಲಿ 371ಜೆ ಸಮರ್ಪಕ ಅನುಷ್ಠಾನ ಹಾಗೂ ಗಂಗಾವತಿ ಉಪವಿಭಾಗ ವ್ಯಾಪ್ತಿಗೆ ಕುಷ್ಟಗಿ ಸೇರ್ಪಡೆ ವಿರೋಧಿಸಿ ಹೋರಾಟ ನಡೆಸುವ ಕುರಿತು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಷ್ಟಗಿ

ಪಟ್ಟಣದ ಪ್ರವಾಸಿ ಮಂದಿರದಲ್ಲಿ 371ಜೆ ಸಮರ್ಪಕ ಅನುಷ್ಠಾನ ಹಾಗೂ ಗಂಗಾವತಿ ಉಪವಿಭಾಗ ವ್ಯಾಪ್ತಿಗೆ ಕುಷ್ಟಗಿ ಸೇರ್ಪಡೆ ವಿರೋಧಿಸಿ ಹೋರಾಟ ನಡೆಸುವ ಕುರಿತು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಪ್ರಮುಖರ ಪೂರ್ವಭಾವಿ ಸಭೆ ನಡೆಯಿತು.

371ಜೆ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಜಿಲ್ಲೆಯ ಗಡಿ ತಾಲೂಕಾದ ಕುಷ್ಟಗಿಯನ್ನು ನೂತನವಾಗಿ ರಚಿಸುತ್ತಿರುವ ಗಂಗಾವತಿ ಕಂದಾಯ ಉಪವಿಭಾಗ ವ್ಯಾಪ್ತಿಗೆ ಸೇರಿಸುವ ಮೂಲಕ ಮತ್ತಷ್ಟು ತೊಂದರೆ ಮಾಡಲಾಗುತ್ತಿದೆ. ಅ.5ರಂದು ಬೆಳಗ್ಗೆ 10 ಘಂಟೆಗೆ ಪಟ್ಟಣದ ಕಾರ್ಗಿಲ್ ವೀರಯೋಧ ಶ್ರೀ ಮಲ್ಲಯ್ಯ ವೃತ್ತದಿಂದ ಶ್ರೀ ಬಸವೇಶ್ವರ ವೃತ್ತದ ಮಾರ್ಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡು ಹಕ್ಕೋತ್ತಾಯ ಮಾಡಲು ತೀರ್ಮಾನಿಸಲಾಯಿತು.ಸಭೆಯಲ್ಲಿ ದೇವೇಂದ್ರಪ್ಪ ಬಳೂಟಗಿ. ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಜಿ. ಪಾಟೀಲ, ಬಸವ ಸಮಿತಿ ಅಧ್ಯಕ್ಷ ಶಿವಸಂಗಪ್ಪ ಬಿಜಕಲ್, ಎಸ್.ಎಚ್. ಹಿರೇಮಠ, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಟಿ. ಬಸವರಾಜ, ಮೋಹನ್ ಲಾಲ್ ಜೈನ್, ನಬಿಸಾಬ ಕುಷ್ಟಗಿ, ಶರಣಪ್ಪ ಜೀರ, ಡಿ.ಬಿ. ಗಡೇದ, ಅಮೃತರಾಜ ಜ್ಞಾನಮೋಟೆ, ರವಿಕುಮಾರ ಮೇಳಿ, ವೀರೇಶ ಬಂಗಾರಶೆಟ್ಟರ್, ಸುಕರಾಜ ತಾಳಕೇರಿ, ಕಲ್ಲೇಶ ತಾಳದ, ಹೈ-ಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಕಿರಣಜ್ಯೋತಿ, ಪರಶುರಾಮ ಈಳಗೇರ, ಅಣ್ಣಿರಯ್ಯ ಹಿರೇಮಠ, ಮುತ್ತಣ್ಣ ಬಾಚಲಾಪೂರ, ಬಸವರಾಜ ವಸ್ತ್ರದ, ಅಜಯ್ ಹಿರೇಮಠ ಸೇರಿದಂತೆ ಅನೇಕರಿದ್ದರು.

ಗಂಗಾವತಿಯ ಬದಲಿಗೆ ಕುಷ್ಟಗಿಯನ್ನೆ ಉಪವಿಭಾಗವನ್ನಾಗಿ ಮಾಡಿ:

ಕುಷ್ಟಗಿಯನ್ನು ಗಂಗಾವತಿಯ ಉಪವಿಭಾಗಕ್ಕೆ ಸೇರಿಸುವ ಬದಲಿಗೆ ಕುಷ್ಟಗಿಯನ್ನೇ ಉಪವಿಭಾಗವನ್ನಾಗಿ ಮಾಡಿದರೆ ಸೂಕ್ತವಾಗಲಿದೆ. ಜಿಲ್ಲೆಯಲ್ಲಿಯೂ ಸಮತೋಲನ ಕಾಪಾಡಿದಂತಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ದೃಷ್ಟಿಯಿಂದಾಗಿ ಗಂಗಾವತಿಯ ಬದಲು ಕುಷ್ಟಗಿಯಲ್ಲಿ ಕಚೇರಿಯನ್ನು ಆರಂಭ ಮಾಡಿದರೆ ಸೂಕ್ತವಾಗುತ್ತದೆ. ಈಗಾಗಲೇ ಗಂಗಾವತಿಯಲ್ಲಿ ಜೆಸ್ಕಾಂ ಹಾಗೂ ಡಿವೈಎಸ್ಪಿ ಕಚೇರಿಯು ಕಾರ್ಯ ನಿರ್ವಹಿಸುತ್ತಿದ್ದು, ಕಂದಾಯ ಇಲಾಖೆಯನ್ನೂ ಅಲ್ಲಿ ಸ್ಥಾಪಿಸಿದರೆ ಹೇಗೆ? ಸದ್ಯ ಈ ಕುರಿತು ಕೇವಲ ಸರ್ಕಾರಕ್ಕೆ ಪ್ರಸ್ತಾವನೆ ಮಾತ್ರ ಹೋಗಿದ್ದು, ಸಚಿವ ಸಂಪುಟದಲ್ಲಿ ಚರ್ಚೆಯಾಗಿಲ್ಲ, ಅಂತಿಮವಾಗಿಲ್ಲ ಎಂದರು.

ಈ ಹಿಂದೆ ಕುಷ್ಟಗಿ ಲೋಕಸಭಾ ಕ್ಷೇತ್ರವಾಗಿತ್ತು. ಉಪವಿಭಾಗ ಆಗುವಂತಹ ಎಲ್ಲ ಅರ್ಹತೆಗಳನ್ನು ಹೊಂದಿದ್ದು, ಕುಷ್ಟಗಿಯನ್ನು ಗಂಗಾವತಿಯ ಉಪವಿಭಾಗಕ್ಕೆ ಸೇರಿಸಲು ನಮ್ಮ ವಿರೋಧವಿದೆ. ಸಾಧ್ಯವಾದರೆ ಕುಷ್ಟಗಿಯನ್ನು ಉಪವಿಭಾಗ ಮಾಡಿ. ಇಲ್ಲವಾದರೆ ಕೊಪ್ಪಳ ವಿಭಾಗಕ್ಕೆ ಕುಷ್ಟಗಿಯು ಮೊದಲಿದ್ದಂತೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ. ಮಹೇಶ ಸೇರಿದಂತೆ ಅನೇಕರು ಇದ್ದರು.