ಸಾರಾಂಶ
ಸಂಡೂರು: ತಾಲೂಕಿನಲ್ಲಿ ನಾರಿಹಳ್ಳ ಪಂಪ್ ಸ್ಟೋರೇಜ್ ಪ್ರಾಜೆಕ್ಟ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ.ಸಂಡೂರು ಪಟ್ಟಣ ಹಾಗೂ ದೋಣಿಮಲೈ ಟೌನ್‌ಶಿಪ್‌ಗೆ ಪ್ರಮುಖ ಕುಡಿಯುವ ನೀರು ಪೂರೈಕೆ ಮೂಲವಾಗಿರುವ ನಾರಿಹಳ್ಳ ಜಲಾಶಯದಲ್ಲಿ ಜಿಂದಾಲ್ ನಿಯೋ ಪವರ್ ಪ್ರಾಜೆಕ್ಟ್ ಕಂಪನಿಯಿಂದ ಆರಂಭಿಸಲು ಉದ್ದೇಶಿಸಿರುವ ನಾರಿಹಳ್ಳ ಪಂಪ್ ಸ್ಟೋರೇಜ್ ಪ್ರಾಜೆಕ್ಟ್ ಯೋಜನೆಗಾಗಿ ಅರಣ್ಯ ಭೂಮಿಯನ್ನು ನೀಡಬಾರದು. ಜಲಾಶಯದ ಉದ್ದಕ್ಕೂ ಹೊಂದಿಕೊಂಡಿರುವ ೫೦೦ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಲು ಕೋರಿ ಜನ ಸಂಗ್ರಾಮ ಪರಿಷತ್ ಮುಖಂಡರು ನ.೧೪ರಂದು ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದರು.ಜನ ಸಂಗ್ರಾಮ ಪರಿಷತ್ ಮುಖಂಡರ ಬೇಡಿಕೆಗಳ ಕುರಿತು ನಿಯಮಾನುಸಾರ ಕ್ರಮಕೈಗೊಳ್ಳುವಂತೆ ಕೋರಿ ನ.೨೯ರಂದು ಅಪರ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಬರೆದಿರುವ ಪತ್ರ ಇದೀಗ ಜನ ಸಂಗ್ರಾಮ ಪರಿಷತ್ ಮುಖಂಡರ ಕೈಗೆ ತಲುಪಿದೆ.
ಸಂಡೂರು ಸೇರಿದಂತೆ ಬಹುಗ್ರಾಮ ಕುಡಿಯುವ ನೀರಿನ ಮೂಲವಾಗಿರುವ ನಾರಿಹಳ್ಳ ಜಲಾಶಯ ಮತ್ತು ಅದಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ೩೦೦ ಮೆ.ವ್ಯಾಟ್ ಜಲ ವಿದ್ಯುತ್ ಯೋಜನೆ ಆರಂಭಕ್ಕೆ ಅರಣ್ಯವನ್ನು ನೀಡಿದ್ದೇ ಆದಲ್ಲಿ ಇಲ್ಲಿನ ವನ್ಯಜೀವಿಗಳು ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಸರ್ಕಾರಿ ಈ ಪ್ರದೇಶದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಬಳಸಿಕೊಳ್ಳದಂತೆ ಆದೇಶಿಸಬೇಕು. ಜಲಾಶಯಕ್ಕೆ ಹೊಂದಿಕೊಂಡಿರುವ ೫೦೦ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯವೆಂದು ಘೋಷಿಸುವಂತೆ ಮನವಿ ಮಾಡಿಕೊಂಡಿದ್ದರು.ನಾರಿಹಳ್ಳ ಜಲಾಶಯದ ಬಳಿ ಜಲ ವಿದ್ಯುತ್ ಯೋಜನೆ ವಿರೋಧಿಸಿ ತಾವು ಸಲ್ಲಿಸಿದ ಮನವಿ ಕುರಿತಂತೆ ಉನ್ನತ ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಜನ ಸಂಗ್ರಾಮ ಪರಿಷತ್ ಮುಖಂಡರಲ್ಲಿ ಆಶಾ ಭಾವನೆ ಹುಟ್ಟಿಸಿದೆ. ಇದು ಕೇವಲ ಚರ್ಚೆಯಾದರೆ ಸಾಲದು. ತಮ್ಮ ಬೇಡಿಕೆಗಳ ಕುರಿತು ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಜಲಾಶಯದ ಸುತ್ತಲಿನ ಅರಣ್ಯ ಮತ್ತು ಜೀವ ವೈವಿಧ್ಯವನ್ನು ಸಂರಕ್ಷಿಸಬೇಕೆಂಬುದು ಜನ ಸಂಗ್ರಾಮ ಪರಿಷತ್ ಮುಖಂಡರ ಒತ್ತಾಯವಾಗಿದೆ.
ನಾರಿಹಳ್ಳ ಜಲಾಶಯದ ಬಳಿಯಲ್ಲಿ ಜಲ ವಿದ್ಯುತ್ ಉತ್ಪಾದನಾ ಯೋಜನೆ ಆರಂಭಿಸಲು ಸರ್ಕಾರ ಅನುಮತಿ ನೀಡಬಾರದು. ಜಲಾಶಯಕ್ಕೆ ಹೊಂದಿಕೊಂಡ ಅರಣ್ಯ ಪ್ರದೇಶವನ್ನು ಪರಿಸರ ಸೂಕ್ಷ್ಮವಲಯವೆಂದು ಘೋಷಿಸಬೇಕು. ಸರ್ಕಾರ ನಾರಿಹಳ್ಳ ಜಲಾಶಯದ ಬಳಿಯ ಪರಿಸರ, ಜೀವವೈವಿಧ್ಯ ಸಂರಕ್ಷಣೆಗೆ ಮುಂದಾಗಬೇಕು ಎನ್ನುತ್ತಾರೆ -ಟಿ.ಎಂ. ಶಿವಕುಮಾರ್.