ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡುವ ಚಿಂತನೆಗೆ ಕಾರವಾರದ ಜಿಲ್ಲಾ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಜಿಲ್ಲೆಯ ಮಧ್ಯವರ್ತಿ ಪ್ರದೇಶದಲ್ಲಿಯೇ ಹೊಸ ಪೀಠ ಸ್ಥಾಪನೆಗೆ ಒತ್ತಾಯಕನ್ನಡಪ್ರಭ ವಾರ್ತೆ ಕಾರವಾರ

ಪ್ರಸ್ತಾವಿತ ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆ ಮಾಡುವ ಚಿಂತನೆಗೆ ಕಾರವಾರದ ಜಿಲ್ಲಾ ವಕೀಲರ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.

ನಮ್ಮನ್ನು ಪ್ರಸ್ತುತ ಇರುವ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು, ಇಲ್ಲವಾದಲ್ಲಿ ಜಿಲ್ಲೆಯ ಮಧ್ಯವರ್ತಿ ಪ್ರದೇಶದಲ್ಲಿಯೇ ಹೊಸ ಪೀಠ ಸ್ಥಾಪಿಸಬೇಕು ಎಂದು ಸಂಘವು ಸರ್ಕಾರ ಹಾಗೂ ಹೈಕೋರ್ಟ್ ಅನ್ನು ಆಗ್ರಹಿಸಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ನಾಗರಾಜ ನಾಯಕ, ಕರಾವಳಿ ಎಂದರೆ ಕೇವಲ ಮಂಗಳೂರು ಮಾತ್ರವಲ್ಲ, ಕಾರವಾರದವರೆಗೂ ಕರಾವಳಿ ತೀರ ಹಬ್ಬಿದೆ. ಕೇವಲ ಮಂಗಳೂರಿಗೆ ಮಾತ್ರ ಪ್ರಾತಿನಿಧ್ಯ ನೀಡಿದರೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಅನ್ಯಾಯವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಭೌಗೋಳಿಕವಾಗಿ ಮಂಗಳೂರು ಉತ್ತರ ಕನ್ನಡ ಜಿಲ್ಲೆಗೆ ಬಹಳ ದೂರದಲ್ಲಿದೆ. ಆದರೆ ಧಾರವಾಡ ಕೇವಲ 174 ಕಿಮೀ ಅಂತರದಲ್ಲಿದೆ. ಈ ಭೌಗೋಳಿಕ ಸತ್ಯವನ್ನು ಕಡೆಗಣಿಸಿ ಮಂಗಳೂರಿಗೆ ವ್ಯಾಪ್ತಿ ಬದಲಾಯಿಸಿದರೆ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಅಂಕಿ-ಸಂಖ್ಯೆಗಳ ದೃಷ್ಟಿಯಿಂದ ನೋಡಿದರೂ, ಉಡುಪಿ ಜಿಲ್ಲೆಯಲ್ಲಿ 4 ಮತ್ತು ದಕ್ಷಿಣ ಕನ್ನಡದಲ್ಲಿ 6 ವಕೀಲರ ಸಂಘಗಳಿದ್ದರೆ, ಉತ್ತರ ಕನ್ನಡದಲ್ಲಿ 11 ವಕೀಲರ ಸಂಘಗಳಿವೆ. ಜಿಲ್ಲೆಯಲ್ಲಿ ದಾಖಲಾಗುವ ಪ್ರಕರಣಗಳ ಸಂಖ್ಯೆಯೂ ದಕ್ಷಿಣ ಕನ್ನಡ ಮತ್ತು ಉಡುಪಿಗಿಂತ ಹೆಚ್ಚಾಗಿರುವುದರಿಂದ, ನೂತನ ಹೈಕೋರ್ಟ್ ಪೀಠ ಪಡೆಯಲು ಉತ್ತರ ಕನ್ನಡವೇ ಹೆಚ್ಚು ಅರ್ಹವಾಗಿದೆ ಎಂದು ಸ್ಪಷ್ಟಪಡಿಸಿದರು.

ಇನ್ನು ಹೊಸ ಪೀಠ ಸ್ಥಾಪಿಸುವುದೇ ಆದರೆ, ಭೌಗೋಳಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ''''''''ಹೊನ್ನಾವರ''''''''ದಂತಹ ಮಧ್ಯವರ್ತಿ ಪ್ರದೇಶ ಅತ್ಯಂತ ಸೂಕ್ತವಾಗಿದೆ. ಮಂಗಳೂರು ಪೀಠಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ಶಿವಮೊಗ್ಗದಿಂದ ಹೊನ್ನಾವರಕ್ಕೆ ಕೇವಲ 160 ಕಿ.ಮೀ. ಇರುವುದರಿಂದ ಇದು ಎಲ್ಲರಿಗೂ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ, ವಾರದಲ್ಲಿ ಕನಿಷ್ಠ ಮೂರು ದಿನ ಕಾರ್ಯನಿರ್ವಹಿಸುವ ''''''''ಸಂಚಾರಿ ಪೀಠ''''''''ವನ್ನಾದರೂ ಆರಂಭಿಸಬೇಕು ಎಂದು ಒತ್ತಾಯಿಸಿದರು.

ಈ ಕುರಿತು ಜಿಲ್ಲಾ ವಕೀಲರ ಸಂಘವು ಸರ್ವಾನುಮತದ ನಿರ್ಣಯ ಕೈಗೊಂಡಿದ್ದು, ಸರ್ಕಾರ ಹಾಗೂ ಹೈಕೋರ್ಟ್‌ಗೆ ಕಳುಹಿಸಲು ಸಿದ್ಧತೆ ನಡೆಸಿದೆ. ಮುಂಬರುವ ದಿನಗಳಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ಈ ವಿಷಯವನ್ನು ತೀವ್ರ ಸ್ವರೂಪದ ಜನಪರ ಹೋರಾಟವಾಗಿ ರೂಪಿಸಲಾಗುವುದು ಎಂದು ಸಂಘವು ಎಚ್ಚರಿಕೆ ನೀಡಿದೆ.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗ್ವತ್, ಕಾರ್ಯದರ್ಶಿ ಚರಣ್ ನಾಯ್ಕ, ದಿಯಾ ಭಟ್, ಶುಭಾ ಗಾಂವ್ಕರ್, ರಾಜೇಶ ಆಚಾರಿ, ಅನಾಮಿಕಾ ರಾಣೆ, ಅಶೋಕ್ ಕುಮಾರ ಮತ್ತಿತರರು ಇದ್ದರು.