ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶವಾದ ಈ ಭಾಗದಲ್ಲಿ ಭೂಮಿಯಲ್ಲಿ ಬೃಹತ್ ಯೋಜನೆಗಳನ್ನು ಹೊರುವ ಧಾರಣ ಸಾಮರ್ಥ್ಯವಿಲ್ಲ. ಪಂಪ್ಡ್ ಸ್ಟೋರೇಜ್, ಚಕ್ರಾ, ವರಾಹಿ, ಲಿಂಗನಮಕ್ಕಿ, ಹಿರೇಭಾಸ್ಕರ, ಮಡೆನೂರು , ಸಾವೇಹಕ್ಲು, ಮಾಣಿ ಜಲಾಶಯದಂತಹ ಪರಿಸರ ಮಾರಕ ಯೋಜನೆಗಳು ಜಾರಿಗೊಂಡಿದ್ದು, ಈಗ ಸಾಗರ ಸಮೀಪದ ಬೇಸೂರಿನಲ್ಲಿ ಎನ್‌ಟಿಪಿಸಿ ಮಾರಕ ಅಣು ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂಬ ಅಧಿಕೃತ ಮಾಹಿತಿ ದೊರೆತ್ತಿದೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಶ್ಚಿಮಘಟ್ಟದ ಸೂಕ್ಷ್ಮ ಪ್ರದೇಶವಾದ ಈ ಭಾಗದಲ್ಲಿ ಭೂಮಿಯಲ್ಲಿ ಬೃಹತ್ ಯೋಜನೆಗಳನ್ನು ಹೊರುವ ಧಾರಣ ಸಾಮರ್ಥ್ಯವಿಲ್ಲ. ಪಂಪ್ಡ್ ಸ್ಟೋರೇಜ್, ಚಕ್ರಾ, ವರಾಹಿ, ಲಿಂಗನಮಕ್ಕಿ, ಹಿರೇಭಾಸ್ಕರ, ಮಡೆನೂರು , ಸಾವೇಹಕ್ಲು, ಮಾಣಿ ಜಲಾಶಯದಂತಹ ಪರಿಸರ ಮಾರಕ ಯೋಜನೆಗಳು ಜಾರಿಗೊಂಡಿದ್ದು, ಈಗ ಸಾಗರ ಸಮೀಪದ ಬೇಸೂರಿನಲ್ಲಿ ಎನ್‌ಟಿಪಿಸಿ ಮಾರಕ ಅಣು ವಿದ್ಯುತ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಿದೆ ಎಂಬ ಅಧಿಕೃತ ಮಾಹಿತಿ ದೊರೆತ್ತಿದೆ. ಇದಕ್ಕೆ ಅನುಮತಿ ನೀಡುವುದರ ಮೂಲಕ ಜಿಲ್ಲಾಡಳಿತ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಫೆ.6ರಂದು ಎನ್‌ಟಿಪಿಸಿ ಸಂಸ್ಥೆಯ ನಿರ್ದೇಶನದಂತೆ ಸರ್ಕಾರದ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ವೀಡಿಯೋ ಕಾನೆರೆನ್ಸ್ ಮೂಲಕ ಐದು ಜಿಲ್ಲೆಗಳ ಜಿಲ್ಲಾಧಿಕಾರಿ ಸಭೆಯನ್ನು ಕರೆದು ಪರಮಾಣು ಸ್ಥಾವರನ್ನು ಸ್ಥಾಪಿಸಲು ಸಂಭಾವ್ಯ ಪ್ರದೇಶಗಳ ಸೂಕ್ತತೆ ಕುರಿತು ಪ್ರಾಥಮಿಕ ಅಧ್ಯಯನ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂಬ ನಿಖರ ಮಾಹಿತಿ ಲಭ್ಯವಾಗಿದೆ ಎಂದರು.
ಬೇಸೂರಿನಲ್ಲಿ 3,190 ಎಕರೆ ಜಮೀನು ಲಭ್ಯತೆ ಇದೆ ಎಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಅಣುಸ್ಥಾವರ ಯೋಜನೆಗೆ ರಾಯಚೂರು, ವಿಜಯನಗರ, ಕೊಪ್ಪಳ, ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ತಮ್ಮಲ್ಲಿ ಭೂಮಿ ಇಲ್ಲ. ಮಾಲಿನ್ಯ ಉಂಟು ಮಾಡುವ, ಅಣುಸ್ಥಾವರದ ಅಣು ವಿಕೇಂದ್ರೀಕರಣದಿಂದ ಆಗುವ ಹಾನಿ ಹಾಗೂ ಯಾವುದೇ ಕೈಗಾರಿಕೆಗಳನ್ನು ಸ್ಥಾಪಿಸಬಾರದೆಂದು ಸಾರ್ವಜನಿಕರು, ಪರಿಸರವಾದಿಗಳು, ಧರಣಿ, ಮುಷ್ಕರ ನಡೆಸುತ್ತಿದ್ದಾರೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿರುವಾಗ ನಮ್ಮ ಜಿಲ್ಲಾಧಿಕಾರಿಗೆ ಏನಾಗಿದೆ? ಜಾಗ ಇದೆ ಎಂದು ತಿಳಿಸುವುದರ ಮರ್ಮವೇನು? ಇಂತಹ ಮಾರಕ ಯೋಜನೆಗಳು ಬೇಡ ಎಂದು ಜಲ್ಲಾಧಿಕಾರಿ ಏಕೆ ಹೇಳುತ್ತಿಲ್ಲ. ಇಲ್ಲಿಯ ಜನ ಧಂಗೆ ಏಳುವುದನ್ನು ಜಿಲ್ಲಾಧಿಕಾರಿ ಇಷ್ಟಪಡುತ್ತಿದ್ದಾರೆಯೇ? ಎಂದು ಕಿಡಿಕಾರಿದರು.ಬೇಸೂರು ಅಣುಸ್ಥಾವರ ಸ್ಥಾಪನೆಯ ಕುರಿತಂತೆ ಇಲ್ಲಿಯವರೆಗೆ ಆದ ಸಭೆಗಳ ನಡಾವಳಿಗಳನ್ನು ತೆಗೆದುಕೊಳ್ಳುತ್ತೇನೆ. ಡಿಸಿಯವರು ರಜೆ ಮುಗಿಸಿ ಬಂದ ಬಳಿಕ ಅವರ ಜತೆ ಸಭೆ ಮಾಡುತ್ತೇನೆ. ಈಗಾಗಲೇ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರು ಸೋಲಾರ್, ಪವನ ವಿದ್ಯುತ್‌ಗಳಿಗೆ ತಾವು ಆದ್ಯತೆ ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ನಾನು ಸ್ವಾಗತಿಸುತ್ತೇನೆ. ಪರಿಸರಕ್ಕೆ ಮಾರಕವಲ್ಲದ ಯೋಜನೆಗಳನ್ನು ಜಾರಿಗೆ ತರಲು ಎಲ್ಲಾ ಜಿಲ್ಲಾಡಳಿತಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ.ಶೇಖರ್‌ಗೌಳೇರ್, ಪರಿಸರ ರಮೇಶ್, ಪ್ರಕಾಶ್, ಮಹಾದೇವ ಸ್ವಾಮಿ, ಶ್ರೀಕಾಂತ್, ಎಸ್.ಬಿ.ಅಶೋಕ್‌ಗಾಂಧಿ, ಹರೀಶ್‌ಕಾರ್ಣೀಕ್, ವಿ.ರಾಜು, ಜನಾರ್ಧನ್ ಪೈ, ಸುಬ್ರಹ್ಮಣ್ಯ, ನವ್ಯಶ್ರೀ ನಾಗೇಶ್ ಇತರರು ಇದ್ದರು.ಬೇಸೂರಿನಲ್ಲಿ ಯಾವುದೇ ಅಣುಸ್ಥಾವರ ಸ್ಥಾಪಿಸುವ ಯೋಜನೆ ಸರ್ಕಾರಕ್ಕಿಲ್ಲ. ಯೋಜನೆ ಸ್ಥಾಪಿಸುವ ಕುರಿತು ಸರ್ಕಾರಕ್ಕೆ ತಾವು ಯಾವುದೇ ವರದಿ ಸಲ್ಲಿಸಿಲ್ಲ ಎಂದು ಸೋಮವಾರ ಪ್ರಭಾರ ಜಿಲ್ಲಾಧಿಕಾರಿ ಎನ್.ಹೇಮಂತ್ ನೀಡಿರುವ ಹೇಳಿಕೆ ಕೇವಲ ಜನರ ಮೂಗಿಗೆ ತುಪ್ಪ ಸುರಿಯುವ ಕೆಲಸವಾಗಿದೆ. ಅವರ ಹೇಳಿಕೆ ನಂಬಿಕೆಗೆ ಅರ್ಹವಲ್ಲ. ಅಣುವಿದ್ಯುತ್ ಉತ್ಪಾದನಾ ವೆಚ್ಚವನ್ನು ಎನ್.ಟಿ.ಪಿ.ಸಿ. ಮುಕ್ತವಾಗಿ ಹೇಳಬೇಕು. ವೆಚ್ಚದಾಯಕ ಈ ಯೋಜನೆಯ ಪ್ರಸ್ತಾಪವನ್ನು ಯಾವುದೇ ಕಾರಣಕ್ಕೂ ನಾವು ಸಹಿಸುವುದಿಲ್ಲ.
ಪ್ರೊ.ಬಿ.ಎಂ.ಕುಮಾರಸ್ವಾಮಿ ಪರಿಸರ ಹೋರಾಟಗಾರ .ಬೇಸೂರಿನಲ್ಲಿ ಅಣುಸ್ಥಾವರದಿಂದ ಪರಸರಕ್ಕೆ ಹಾನಿ
ಕೈಗಾದಲ್ಲಿ 2000 ಇಸವಿಯಲ್ಲೇ 1600 ಮೆಗಾವ್ಯಾಟ್ ಸಾಮರ್ಥ್ಯದ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲಾಗಿತ್ತು. ಆದರೆ ಅದು ಸ್ಥಾಪನೆಯಾಗಿ 25 ವರ್ಷಗಳು ಕಳೆದರೂ ಇಂದು ಕೇವಲ 800 ಮೆಗಾವ್ಯಾಟ್ ಅಣುವಿದ್ಯುತ್ ಸ್ಥಾಪಿಸಲಾಗುತ್ತಿದೆ. ಅಲ್ಲಿನ ಸುತ್ತಮುತ್ತಲಿನ ಜನರು ಅಲ್ಲಿಯ ವಾತಾವರಣ ಮತ್ತು ನೀರಿನಿಂದ ಅನೇಕ ರೋಗರುಜಿನಗಳಿಗೆ ತುತ್ತಾಗಿ ನರಳಾಡುತ್ತಿದ್ದಾರೆ. ಅಣುಸ್ಥಾವರದ ಸುತ್ತಮುತ್ತಲಿನ 5.5 ಕಿ.ಮೀ. ವ್ಯಾಪ್ತಿಯಲ್ಲಿ ಯಾರೂ ವಾಸಿಸಬಾರದೆಂಬ ನಿಯಮವಿದೆ. ಪ್ರಸ್ತಾವಿತ ಅಣುಸ್ಥಾವರದ ಬೇಸೂರು ಸಾಗರದಿಂದ ಕೇವಲ 16 ಕಿ.ಮೀ., ಧಾರ್ಮಿಕ ಕ್ಷೇತ್ರ ಸಿಗಂದೂರಿನಿಂದ 20 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇಲ್ಲಿ ಅಣುವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಬಾರದು ಎಂದು ರಾಷ್ಟ್ರಭಕ್ತ ಬಳಗದ ಶ್ರೀಕಾಂತ್ ಹೇಳಿದ್ದಾರೆ.