ಸವಣೂರು ತಾಲೂಕು ಆಸ್ಪತ್ರೆ ಸ್ಥಳಾಂತರಕ್ಕೆ ವಿರೋಧ

| Published : Mar 14 2025, 12:31 AM IST

ಸಾರಾಂಶ

ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಕೆಡವಿ ಪ್ರತ್ಯೇಕ ಅನುದಾನವನ್ನು ತಂದು ನೂತನ ಕಟ್ಟಡವನ್ನು ಕಟ್ಟಲು ಸಾಕಷ್ಟು ಅವಕಾಶಗಳಿವೆ. ಅದನ್ನು ಬಿಟ್ಟು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸುವುದು ಸಮಂಜಸವಲ್ಲ.

ಸವಣೂರು: ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ಕಟ್ಟಡಕ್ಕೆ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರಿಸುವ ಕುರಿತು ಕೈಗೊಳ್ಳಲಾಗುತ್ತಿದೆ ಎನ್ನುವ ತೀರ್ಮಾನವನ್ನು ವಿರೋಧಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ ಬಾರ್ಕಿ ನೇತೃತ್ವದಲ್ಲಿ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ತಹಸೀಲ್ದಾರ್ ಭರತರಾಜ ಕೆ.ಎನ್. ಅವರ ಮೂಲಕ ಮನವಿ ಸಲ್ಲಿಸಲಾಯಿತು.ಪಟ್ಟಣಕ್ಕೆ ಹಿಂದಿನ ಸರ್ಕಾರ ₹44 ಕೋಟಿ ಅನುದಾನದಲ್ಲಿ ಪಟ್ಟಣದ ಹೊರವಲಯದಲ್ಲಿ ಸರ್ಕಾರಿ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯನ್ನು ಪಾರಂಭಿಸಿ ಈ ಭಾಗದ ವಿದ್ಯಾರ್ಥಿಗಳ ಬಹುದಿನದ ಕನಸಿಗೆ ಆಗಿನ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಸ್ಪಂದಿಸಿದ್ದರು.

ಅಲ್ಲದೇ ಈಗಾಗಲೇ ಕಟ್ಟಡ ಕಾಮಗಾರಿ ಮುಗಿಯುವ ಹಂತದಲ್ಲಿದೆ. ಆದರೆ, ಈ ಕಟ್ಟಡಕ್ಕೆ ಈಗ ಕಾರ್ಯನಿರ್ವಹಿಸುತ್ತಿರುವ ತಾಲೂಕು ಸಾರ್ವಜನಿಕ ಆಸ್ಪತ್ರೆಯನ್ನು ಸ್ಥಳಾಂತರ ಮಾಡುವ ಹುನ್ನಾರ ಆರೋಗ್ಯ ಇಲಾಖೆ ಮೂಲಕ ತೀರ್ಮಾನಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಇದನ್ನು ಅಖಂಡ ಕರ್ನಾಟಕ ರೈತ ಸಂಘ ಬಲವಾಗಿ ವಿರೋಧಿಸುತ್ತದೆ. ಅಲ್ಲದೇ ಯಾವ ಉದ್ದೇಶಕ್ಕಾಗಿ ಕಟ್ಟಡ ಮಂಜೂರಾಗಿದೆಯೋ ಅದೇ ಉದ್ದೇಶಕ್ಕೆ ಬಳಕೆಯಾಗಬೇಕು.

ಪಟ್ಟಣದಲ್ಲಿ ಈಗಿರುವ ಹಳೆಯ ತಾಲೂಕು ಸಾರ್ವಜನಿಕ ಆಸ್ಪತ್ರೆ ಕಟ್ಟಡವನ್ನು ಕೆಡವಿ ಪ್ರತ್ಯೇಕ ಅನುದಾನವನ್ನು ತಂದು ನೂತನ ಕಟ್ಟಡವನ್ನು ಕಟ್ಟಲು ಸಾಕಷ್ಟು ಅವಕಾಶಗಳಿವೆ. ಅದನ್ನು ಬಿಟ್ಟು ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಕಟ್ಟಡಕ್ಕೆ ಸ್ಥಳಾಂತರಿಸುವುದು ಸಮಂಜಸವಲ್ಲ. ಹೊಸದನ್ನು ಮಾಡಿ ಜನತೆಗೆ ತೋರಿಸುವುದು ನೂತನ ಶಾಸಕರ ಕರ್ತವ್ಯವಾಗಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಒಂದು ವೇಳೆ ತಾಲೂಕು ಆಸ್ಪತ್ರೆಯನ್ನು ಸ್ಥಳಾಂತರಿಸುವ ತೀರ್ಮಾನವೇನಾದರೂ ಇಲಾಖಾ ಮಟ್ಟದಲ್ಲಿ ಆಗಿದ್ದೇ ಆದರೆ ಮುಂದಿನ ದಿನಗಳಲ್ಲಿ ಸವಣೂರು ಬಂದ್‌ಗೆ ಕರೆ ಕೊಡುವ ಮೂಲಕ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ದೇವಗಿರಿ, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನವೀರಯ್ಯ ಹೊಸಮಠ, ಪುರದಪ್ಪ ಅಣ್ಣಿಗೇರಿ, ಪರಮೇಶ ಜಕ್ಕಣ್ಣವರ, ನಾಗಮ್ಮ ಪೂಜಾರ, ನೂರಹ್ಮದ ಮುಲ್ಲಾ, ಷಣ್ಮುಖಪ್ಪ ಮರಡೂರ ಇತರರು ಇದ್ದರು.ರಾಣಿಬೆನ್ನೂರು ಟಾಂಗಾಕೂಟ ನಿಷೇಧಾಜ್ಞೆ ಸಡಿಲಿಸಿ ಆದೇಶ

ಹಾವೇರಿ: ಹೋಳಿ ಹಬ್ಬದ ಪ್ರಯುಕ್ತ ರಾಣಿಬೆನ್ನೂರು ನಗರದ ಟಾಂಗಾಕೂಟ ಬಯಲು ಜಾಗ ನಿಷೇಧಾಜ್ಞೆಯನ್ನು ಮಾ. 13ರಿಂದ ಮಾ. 15ರ ವರೆಗೆ ಸಡಿಲುಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಅವರು ಆದೇಶ ಹೊರಡಿಸಿದ್ದಾರೆ.

ಈ ಸ್ಥಳದಲ್ಲಿ ಬೇರೆ ಸಮಾಜದ ಪ್ರಾರ್ಥನಾ ಮಂದಿರಗಳಿದ್ದು, ಪ್ರಾರ್ಥನೆಗೆ ಬಂದು ಹೋಗುವವರಿಗೆ ಹಿಯಾಳಿಸಿ, ಪ್ರಚೋದನಾತ್ಮಕವಾಗಿ ಮಾತನಾಡಬಾರದು ಹಾಗೂ ಇತರೆ ಸಮಾಜದ ಜನರ ಮೇಲೆ ಬಣ್ಣ ಎರಚುವಂತಿಲ್ಲ. ಯಾವುದೇ ಕೋಮು ಪ್ರಚೋದನಾತ್ಮಕ ಸಂದೇಶ, ಚಟುವಟಿಕೆಗಳನ್ನು ಮಾಡುವಂತಿಲ್ಲ ಹಾಗೂ ಶಾಂತಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ನಡೆಯುತ್ತಿರುವುದರಿಂದ ಅವಧಿಯ ಒಳಗಾಗಿ ಹಲಗೆ ಬಾರಿಸುವುದು ಮತ್ತು ಕಾಮ ದಹನವನ್ನು ಪೂರ್ಣಗೊಳಿಸಬೇಕು. ಈ ಸ್ಥಳದಲ್ಲಿ ಪೊಲೀಸರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಹಬ್ಬದ ಆಚರಣೆ ಕಾಲಕ್ಕೆ ಸಾರ್ವಜನಿಕ ಶಾಂತತೆಗೆ ಹಾಗೂ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.