ವಾಟದಹೊಸಹಳ್ಳಿ ಕೆರೆ ನೀರು ಯೋಜನೆಗೆ ವಿರೋಧ

| Published : Aug 08 2025, 01:01 AM IST

ಸಾರಾಂಶ

ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ಹರಿಸುವ ಕುರಿತು ನಮ್ಮ ಭಾಗದ ರೈತರೊಂದಿಗೆ ಚರ್ಚಿಸದೆ ಏಕ ಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ, ನಗರಗೆರೆ ಹೋಬಳಿಯಲ್ಲಿ 70ಸಾವಿರ ಜನ ಈ ಕೆರೆನೀರಿನ ಮೇಲೆ ಅವಲಂಭಿಸಿ ಜೀವನ ಸಾಗಿಸುತ್ತಿದ್ದಾರೆ, ಶಾಸಕರು ಈ ಕೆರೆನೀರನ್ನು ನಗರಕ್ಕೆ ಹರಿಸಲು ಅವೈಜ್ಞಾನಿಕ ಯೋಜನೆ ರೂಪಿಸಿ 65ಕೋಟಿ ಸಾರ್ವಜನಿಕರ ಹಣವನ್ನು ಖರ್ಚುಮಾಡಲು ಹೊರಟಿದ್ದಾರೆ

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ವಿವಾದಿತ ವಾಟದಹೊಸಹಳ್ಳಿ ಕೆರೆನೀರನ್ನು ಅಮೃತ್ 2.0ಯೋಜನೆಯಡಿ ನಗರಕ್ಕೆ ಹರಿಸುವ ಯೋಜನೆಯನ್ನು ವಿರೋಧಿಸಿ ನಗರಗೆರೆ ಹೋಬಳಿಯ ರೈತರು, ಸಂಘ ಸಂಸ್ಥೆಗಳು, ಕಾಂಗ್ರೆಸ್, ಬಿಜೆಪಿ ಮತ್ತು ಕೆಂಪರಾಜು ಬಣ ಸೇರಿದಂತೆ ಸಾವಿರಾರು ರೈತರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ವಾಟದಹೊಸಹಳ್ಳಿ ಪಂಚಾಯಿತಿ ಅವರಣದಿಂದ ಬೆಳಗ್ಗೆ ಪ್ರಾರಂಭವಾದ ಸುಮಾರು 20 ಕಿ.ಮಿ.ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಎತ್ತಿನಬಂಡಿ, ಆಟೋ ಟ್ರ್ಯಾಕ್ಟರ್ ಗಳೊಂದಿಗೆ, ನಮ್ಮ ನೀರು ನಮ್ಮ ಹಕ್ಕು, ಯಾವುದೇ ಕಾರಣಕ್ಕೂ ನಮ್ಮ ನೀರನ್ನು ನಗರಕ್ಕೆ ಹರಿಯಲು ಬಿಡುವುದಿಲ್ಲ ಎಂದು ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಏಕ ಪಕ್ಷೀಯ ನಿರ್ಣಯ

ಪ್ರತಿಭಟನಾ ನಿರತ ರೈತರನ್ನುದ್ದೇಶಿಸಿ ವಾಟದಹೊಸಹಳ್ಳಿ ಅಚ್ಚುಕಟ್ಟುದಾರರ ಸಂಘದ ಅಧ್ಯಕ್ಷ ಮಾಳಪ್ಪ ಮಾತನಾಡಿ, ವಾಟದಹೊಸಹಳ್ಳಿ ಕೆರೆ ನೀರನ್ನು ನಗರಕ್ಕೆ ಹರಿಸುವ ಕುರಿತು ನಮ್ಮ ಭಾಗದ ರೈತರೊಂದಿಗೆ ಚರ್ಚಿಸದೆ ಏಕ ಪಕ್ಷೀಯ ನಿರ್ಣಯ ಕೈಗೊಂಡಿದ್ದಾರೆ, ನಗರಗೆರೆ ಹೋಬಳಿಯಲ್ಲಿ 70ಸಾವಿರ ಜನ ಈ ಕೆರೆನೀರಿನ ಮೇಲೆ ಅವಲಂಭಿಸಿ ಜೀವನ ಸಾಗಿಸುತ್ತಿದ್ದಾರೆ, ಈ ಕೆರೆ ತುಂಬಿದರೆ ಸುತ್ತಮುತ್ತಲಿನ 5-6ಕೆರೆಗಳು ತುಂಬುತ್ತವೆ, ನದಿ-ನಾಲೆಗಳಿಲ್ಲದೆ ಮಳೆನೀರಿನ ಮೇಲೆ ಅವಲಂಭಿತವಾಗಿರುವ ಕೆರೆನೀರನ್ನು ನಗರಕ್ಕೆ ಹರಿಸಲು ಅವೈಜ್ಞಾನಿಕ ಯೋಜನೆ ರೂಪಿಸಿ 65ಕೋಟಿ ಸಾರ್ವಜನಿಕರ ಹಣವನ್ನು ಖರ್ಚುಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಎತ್ತಿನಹೊಳೆ ನೀರು ಬರೋಲ್ಲರೈತಮುಖಂಡ ಹರ್ಷವರ್ಧನರೆಡ್ಡಿ ಮಾತನಾಡಿ, ನಮ್ಮ ಹೋರಾಟಕ್ಕೆ ರೈತರೇಬಲ ತುಂಬುತ್ತಿದ್ದಾರೆ, ಆದರೆ ಶಾಸಕರು ಕಾಣದ ಕೈಗಳು ಎಂದು ಹೇಳುತ್ತಿದ್ದಾರೆ, ಇವರಿಗೆ ರೈತರ ಕಷ್ಟಗಳು ತಿಳಿದಿಲ್ಲ, ಎತ್ತಿನಹೊಳೆ ನೀರು ಯಾವತ್ತಿಗೂ ಈ ಭಾಗಕ್ಕೆ ಬರುವುದಿಲ್ಲ, ಇದು ಹಗರಣವಷ್ಟೇ, ಎತ್ತಿನ ಹೊಳೆ ನೀರನ್ನು ಮೊದಲು ನಮ್ಮ ಕೆರೆಗೆಹರಿಸಿ, ನಂತರ ನಮ್ಮಕೆರೆಯ ನೀರನ್ನು ಕೇಳಲಿ, ನಮ್ಮ ಕೆರೆನೀರನ್ನು ಉಳಿಸಿಕೊಳ್ಳಲು ಪ್ರಾಣತ್ಯಾಗಕ್ಕೂ ಸಿದ್ದವಾಗಿದ್ದೇವೆ, ಎಂದು ಎಚ್ಚರಿಕೆ ನೀಡಿದರು.ಮಧುಸೂರ್ಯನಾರಾಯಣರೆಡ್ಡಿ ಮಾತನಾಡಿ, ಈ ಯೋಜನೆಯು ಅವೈಜ್ಞಾನಿಕ ಮತ್ತು ಹಣಮಾಡುವ ಯೋಜನೆಯಾಗಿದೆ, ಈ ಯೋಜನೆಯನ್ನು ಕೂಡಲೇ ಕೈಬಿಡಬೇಕು, ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ನಮ್ಮ ಕೆರೆನೀರನ್ನು ನಗರಕ್ಕೆ ಹರಿಸಲುಬಿಡುವುದಿಲ್ಲ ಎಂದರು.ಪೊಲೀಸರ ವಿರುದ್ಧ ಘೋಷಣೆ

ವಾಟದಹೊಸಹಳ್ಳಿಯಿಂದ ಹಿಡಿದು ನಗರದ ಹೊರಭಾಗದಲ್ಲಿರುವ ತಾಲ್ಲೂಕುಆಡಳಿತ ಕಚೇರಿವರೆವಿಗೂ ರೈತರಿಗೆ ಪೊಲೀಸರು ಉತ್ತಮ ಸಹಕಾರ ನೀಡಿದರು. ಪ್ರತಿಭಟನಾಕಾರರು ಎತ್ತಿನಗಾಡಿಗಳೊಂದಿಗೆ ತಾಲೂಕು ಕಚೇರಿ ಆವರಣ ಪ್ರವೇಶಕ್ಕೆ ಪ್ರಯತ್ನಿಸಿದಾಗ ಪೊಲೀಸರು ತಡೆದರು. ಆಗ ರೈತರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಪೊಲೀಸರು ರೈತರಿಗೆ ತಾಲೂಕು ಕಚೇರಿಯ ಆವರಣದಲ್ಲಿ ಪ್ರತಿಭಟನೆಗೆ ಸ್ಥಳಾವಕಾಶ ಮಾಡಿಕೊಟ್ಟರು. ಪ್ರತಿಭಟನಾ ನಿರತ ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಡಿ.ಹೆಚ್.ಅಶ್ವಿನ್‌ ಮತ್ತು ತಹಸೀಲ್ದಾರ್‌ ಅರವಿಂದ ಕೆ.ಎಂ. ಭೇಟಿ ನೀಡಿ ರೈತರಿಂದ ಮನವಿಪತ್ರ ಸ್ವೀಕರಿಸಿದರು. ಬಳಿಕ ಅನಿರ್ದಿಷ್ಟಾವಧಿ ಧರಣಿ ಮುಂದುವರೆಯಿತು.ಪೊಲೀಸ್ ಬಂದೋಬಸ್ತು

ಈ ಹೋರಾಟಕ್ಕೆ ವೃತ್ತ ನಿರೀಕ್ಷಕ ಕೆ.ಪಿ.ಸತ್ಯನಾರಾಯಣ್ ನೇತ್ರತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತು.1ಡಿ.ಎಸ್.ಪಿ, 3ಇನ್ಸ್ಪೆಕ್ಟರ್, 11ಸಬ್ ಇನ್ಸ್ಪೆಕ್ಟರ್,140ಪೊಲೀಸ್ ಸಿಬ್ಬಂಧಿ ಬಂದೋಬಸ್ತು ಒದಗಿಸಲಾಗಿತ್ತು. ಇದೇ ಸಂದರ್ಭದಲ್ಲಿ, ಸಿ.ಇ.ಟಿ.ಯು.ಸಿದ್ದಗಂಗಪ್ಪ, ದಲಿತಪರ ಸಂಘಟನೆಗಳ ಜಿಲ್ಲಾಸಂಚಾಲಕ ಸಿ.ಜಿ.ಗಂಗಪ್ಪ, ಎ.ಕೆ.ಆರ್.ಎಸ್.ರವಿಚಂದ್ರರೆಡ್ಡಿ, ಕೊಡಿರ್ಲಪ್ಪಾ, ಬಂಡಪಲ್ಲಿಮೂರ್ತಿ, ಹೂಲಿಕುಂಟೆಅಶ್ವತಪ್ಪ, ಅಮರನಾರಾಯಣರೆಡ್ಡಿ, ಅನೂಡಿನಾಗರಾಜ್, ಲಕ್ಷ್ಮಣರೆಡ್ಡಿ, ಶಶಾಂಕ್ ನಾಯಕ್, ವೆಂಕಟಶಿವಾರೆಡ್ಡಿ, ಸೇರಿದಂತೆ ಹಲವು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.