ಸಾರಾಂಶ
ಹಾರಂಗಿ ಗ್ರಾಮದಲ್ಲಿ ಚುನಾವಣೆ ಬಹಿಷ್ಕಾರ ಕೂಗೆದ್ದಿದೆ. ಹಾರಂಗಿ ಜಲಾಶಯದಲ್ಲಿ ಸಾಹಸಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳು ನಡೆಯುತ್ತಿದ್ದು ಇದರಿಂದ ಜಲಾಶಯದ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿರುವ ಹಾರಂಗಿ ಗ್ರಾಮಸ್ಥರು ತಕ್ಷಣ ಜಲಾಶಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಬೇಕು, ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧಾರ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯದಲ್ಲಿ ಸಾಹಸಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳು ನಡೆಯುತ್ತಿದ್ದು ಇದರಿಂದ ಜಲಾಶಯದ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿರುವ ಹಾರಂಗಿ ಗ್ರಾಮಸ್ಥರು ತಕ್ಷಣ ಜಲಾಶಯದಲ್ಲಿ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಬೇಕು, ಇಲ್ಲದಿದ್ದಲ್ಲಿ ಚುನಾವಣೆ ಬಹಿಷ್ಕಾರ ಮಾಡುವುದಾಗಿ ನಿರ್ಧಾರ ಎಚ್ಚರಿಸಿದ್ದಾರೆ.ಜಲಾಶಯದಲ್ಲಿ ಇತ್ತೀಚಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳ ನಡೆಯುತ್ತಿದ್ದು ಇದರಿಂದ ಕೆಳಭಾಗದ ನಾಗರಿಕರಿಗೆ ಕುಡಿಯಲು ಯೋಗ್ಯ ನೀರು ದೊರಕುತ್ತಿಲ್ಲ. ಕಲುಷಿತ ನೀರು ಸರಬರಾಜಾಗುತ್ತಿದೆ ಎಂದು ಆರೋಪಿಸಿರುವ ಕೂಡು ಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಮತ್ತು ಸದಸ್ಯರಾದ ಮಣಿಕಂಠ ನೇತೃತ್ವದಲ್ಲಿ ಹಾರಂಗಿಯ ಗ್ರಾಮಸ್ಥರು ಮತದಾನ ಬಹಿಷ್ಕಾರ ಘೋಷಣೆ ಮಾಡಿದ್ದಾರೆ.
ಈ ಸಂಬಂಧ ಪ್ರತಿ ಮನೆಗಳಲ್ಲಿ ಚುನಾವಣಾ ಬಹಿಷ್ಕಾರ ಫಲಕಗಳನ್ನು ಅಳವಡಿಸಿದ್ದು ತಕ್ಷಣ ಸಂಬಂಧಿಸಿದೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಈ ಹಿಂದೆ ನಡೆಯಬೇಕಾಗಿದ್ದ ಕಾರ್ಯಕ್ರಮ ಮುಂದೂಡಲಾಗಿದ್ದು ದಿಢೀರನೆ ಚುನಾವಣೆಯ ನಡುವೆ ಜಲಾಶಯದಲ್ಲಿ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳು ಆರಂಭಗೊಂಡಿವೆ. ಇದರಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ನೀರು ಸಂಪೂರ್ಣ ಕಲುಷಿತಗೊಳ್ಳುತ್ತಿದೆ. ಜಲಾಶಯದ ಕೆಳಭಾಗದ ಜನರಿಗೆ ಕಲುಷಿತ ನೀರು ಪೂರೈಕೆ ಆಗುತ್ತಿದೆ ಎಂದು ಭಾಸ್ಕರ ನಾಯಕ್ ಆರೋಪಿಸಿದ್ದಾರೆ.
ವಾಟರ್ ಸ್ಪೋರ್ಟ್ಸ್ ನಡೆಯುವ ಜಾಗ ಕಾಡಾನೆ ಕಾರಿಡಾರ್ ಪ್ರದೇಶವಾಗಿದ್ದು ಆನೆಗಳಿಗೂ ಇದರಿಂದ ಕಿರಿಕಿರಿ ಉಂಟಾಗುತ್ತಿದೆ. ಜಲಚರಗಳು ಕೂಡ ನಾಶವಾಗುವ ಸಾಧ್ಯತೆಯಿದ್ದು ಕೂಡಲೇ ಈ ಚಟುವಟಿಕೆಯನ್ನು ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.ಹಾರಂಗಿ ಗ್ರಾಮಸ್ಥರಾದ ಅಣ್ಣಾಮಲೈ, ಸೆಂದಿಲ್, ಮಂಜು ಗಂಗಮ್ಮ, ಲಲಿತ, ರಜಿ ಮತ್ತಿತರರು ತಮ್ಮ ಗ್ರಾಮದ ಸಮಸ್ಯೆಯನ್ನು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ವಿವರಿಸಿದರು.
ಈ ಬಗ್ಗೆ ‘ಕನ್ನಡಪ್ರಭ’ ಹಾರಂಗಿ ಜಲಾಶಯದಲ್ಲಿ ದಿಡೀರ್ ಆರಂಭಗೊಂಡ ಸಾಹಸಿ ವಾಟರ್ ಸ್ಪೋರ್ಟ್ಸ್ ಬಗ್ಗೆ ಸಮಗ್ರ ವರದಿಯನ್ನು ಇತ್ತೀಚೆಗೆ ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು