ದಾಸೋಹಕ್ಕೆ ದಾನಕ್ಕಿಂತಲೂ ಮಹತ್ತರ ಧ್ಯೇಯವಿದೆ

| Published : Jun 30 2025, 12:34 AM IST

ದಾಸೋಹಕ್ಕೆ ದಾನಕ್ಕಿಂತಲೂ ಮಹತ್ತರ ಧ್ಯೇಯವಿದೆ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಲ್ಲಿರುವ ಸಂಪತ್ತನ್ನು ಬೇರೆಯವರಿಗೆ ಅನುಕೂಲವಾಗಲಿ ಎಂದು ದಾನ ಕೊಡುತ್ತಾರೆ. ಆದರೆ ದಾನ ಕೊಡುವವರಲ್ಲಿ ಅಹಂಕಾರ ಇರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುದಾನಕ್ಕೂ, ದಾಸೋಹಕ್ಕೆ ಸಾಕಷ್ಟು ವ್ಯತ್ಯಾಸವಿದೆ. ದಾಸೋಹ ವೀರಶೈವ-ಲಿಂಗಾಯತ ಪರಂಪರೆಯ ಶ್ರೇಷ್ಠ ಪರಿಕಲ್ಪನೆಯಾಗಿದೆ. ದಾನಕ್ಕಿಂತಲೂ ಮಹತ್ತರ ಧ್ಯೇಯ ದಾಸೋಹಕ್ಕಿದೆ ಎಂದು ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಬಣ್ಣಿಸಿದರು.ಜೆಎಸ್‌ಎಸ್ ಮಹಾವಿದ್ಯಾಪೀಠ, ಶ್ರೀ ಶಿವರಾತ್ರೀಶ್ವರ ಧಾರ್ಮಿಕ ದತ್ತಿ ಸಹಯೋಗದಲ್ಲಿ ನಗರದ ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿನ ಶ್ರೀ ರಾಜೇಂದ್ರ ಭವನದಲ್ಲಿ ಶನಿವಾರ ಸರ್ವಮಂಗಳಮ್ಮ ಮತ್ತು ಕೆ.ಎನ್. ವೀರಭದ್ರಪ್ಪ ಅವರ ಸ್ಮರಣಾರ್ಥ ಏರ್ಪಡಿಸಿದ್ದ ಶಿವಾನುಭವ ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮಲ್ಲಿರುವ ಸಂಪತ್ತನ್ನು ಬೇರೆಯವರಿಗೆ ಅನುಕೂಲವಾಗಲಿ ಎಂದು ದಾನ ಕೊಡುತ್ತಾರೆ. ಆದರೆ ದಾನ ಕೊಡುವವರಲ್ಲಿ ಅಹಂಕಾರ ಇರುತ್ತದೆ. ಆದರೆ ದಾಸೋಹ ಪರಿಕಲ್ಪನೆಯಲ್ಲಿ ಕೊಡುವಾಗಲೇ ವಿನಯ ಮತ್ತು ಭಕ್ತಿ ಇರುತ್ತದೆ. ಆದ್ದರಿಂದ ಶರಣರು ಬಿತ್ತಿದ ದಾಸೋಹದ ಪರಿಕಲ್ಪನೆಯನ್ನು ಸಮಾಜದಲ್ಲಿ ಎಲ್ಲರೂ ಅಳವಡಿಸಿಕೊಳ್ಳಬೇಕಿದೆ. ಜೊತೆಗೆ ಜ್ಞಾನ ದಾಸೋಹವನ್ನೂ ನಡೆಸಬೇಕಿದೆ ಎಂದು ತಿಳಿಸಿದರು.ಮದಿಸಿದ ಆನೆಗಳು ಎಲ್ಲೆಡೆ ಸೊಂಡಿಲು ಹಾಕುವ ರೀತಿಯಲ್ಲಿ ಯಾವ್ಯಾವುದೋ ರೂಪದಲ್ಲಿ ಹಣ ಮಾಡಿರುವವರು, ಅಧಿಕಾರ ಪಡೆದವರು ಎಲ್ಲಾ ಕಡೆ ಪ್ರಭಾವ ಬೀರುತ್ತಿದ್ದಾರೆ. ಆದರೆ ಅವರಿಗೆ ಅಂಕುಶ ಹಾಕುವವರು ಸಮಾಜದಲ್ಲಿ ಇಲ್ಲವಾಗಿದ್ದಾರೆ ಎಂದು ವಿಷಾದಿಸಿದ ಅವರು, ಶರಣ ಸಂಸ್ಕೃತಿ ಮತ್ತು ದಾಸೋಹ ಪರಿಕಲ್ಪನೆಯಿಂದ ಅವರೂ ಉತ್ತಮವಾದುದನ್ನು ಮಾಡಲು ಸಾಧ್ಯವಿದೆ ಎಂದರು.ಕದಳಿ ಮಹಿಳಾ ವೇದಿಕೆ ಅಧ್ಯಕ್ಷ ಶಾರದಾ ಶಿವಲಿಂಗಸ್ವಾಮಿ ಮಾತನಾಡಿ, ಸರ್ವಮಂಗಳಮ್ಮ ಅವರು ಸಾತ್ವಿಕತೆ ಮತ್ತು ಶರಣ ಸಂಸ್ಕೃತಿಯನ್ನು ಜೀವನದುದ್ದಕ್ಕೂ ರೂಢಿಸಿಕೊಂಡು ಬದುಕಿದವರು. ಮಕ್ಕಳಿಗೆ ಉತ್ತಮ ಸಂಸ್ಕೃತಿ ಮತ್ತು ಸಂಸ್ಕಾರ ಹೇಳಿಕೊಟ್ಟವರು. ಅವರ ಪುತ್ರ ಕೆ.ವಿ. ಮಲ್ಲೇಶ್ ಅವರು ತಮ್ಮ ತಾಯಿ ಸರ್ವಮಂಗಳಮ್ಮ ಹಾಗೂ ತಂದೆ ಕೆ.ಎನ್. ವೀರಭದ್ರಪ್ಪ ಅವರು ಹಾಕಿಕೊಟ್ಟ ಉತ್ತಮ ಸಂಸ್ಕಾರದ ಹಾದಿಯಲ್ಲಿ ಸಾಗುತ್ತಿದ್ದಾರೆ ಅವರಿಗೆ ಯಶಸ್ಸು ಸಿಗಲಿ ಎಂದು ಹಾರೈಸಿದರು.ಕನ್ನಡ ಸಾಹಿತ್ಯ ಕಲಾ ಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಶಿವರಾತ್ರಿ ರಾಜೇಂದ್ರ ಶ್ರೀಗಳು ಶಿವಾನುಭವ ದಾಸೋಹ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು. ಇಂತಹ ಸೃಜನ ಶೀಲ, ಸಮಾಜಕ್ಕೆ ಉತ್ತಮ ಸಂಸ್ಕಾರ, ಶರಣ ಸಂಸ್ಕೃತಿ ಹಾಗೂ ದಾಸೋಹ ಸಂಸ್ಕೃತಿಯ ಬೀಜವನ್ನು ಬಿತ್ತುವ ಕೆಲಸಕ್ಕೆ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಿದ್ದಾಗಿ ಅವರು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಕುದೇರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠ ಸ್ವಾಮೀಜಿ, ವಿಶ್ರಾಂತ ಪ್ರಾಂಶುಪಾಲ ಪ್ರೊ. ಚಂದ್ರಶೇಖರಯ್ಯ, ವಕೀಲ ವಿರೂಪಾಕ್ಷ, ನಗರ ಪಾಲಿಕೆ ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಕೆ.ವಿ. ಶ್ರೀಧರ್, ಬಿ.ಆರ್. ಶಿವಕುಮಾರ್ ಮೊದಲಾದವರು ಇದ್ದರು.