ಕೊಲೆಯಾದವಳು ಎದ್ದು ಬಂದ ಪ್ರಕರಣ- ಆರೋಪಿಯ ಬಿಡುಗಡೆ

| Published : Apr 24 2025, 02:03 AM IST

ಸಾರಾಂಶ

ಆರೋಪಿಗೆ 1 ಲಕ್ಷ ರೂ. ಪರಿಹಾರ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ

ಕನ್ನಡಪ್ರಭ ವಾರ್ತೆ ಮೈಸೂರು

ವರದಕ್ಷಿಣೆ ಕಿರುಕುಳ ನೀಡಿ, ದೌರ್ಜನ್ಯ ನಡೆಸಿ, ಶೀಲ ಶಂಕಿಸಿ ಪತ್ನಿಯನ್ನು ಕೊಲೆ ಮಾಡಿ ಶವವನ್ನು ಪೊದೆಯಲ್ಲಿ ಮುಚ್ಚಿಟ್ಟು ಸಾಕ್ಷ್ಯ ನಾಶ ಪಡಿಸಿದ್ದಾನೆಂದು ಆರೋಪಿಸಿ ಬೆಟ್ಟದಪುರ ಪೊಲೀಸರು ಬಂಧಿಸಿ, ಜೇಲಿಗೆ ಕಳುಹಿಸಿದ್ದ ಕುಶಾಲನಗರದ ಬಸವನಹಳ್ಳಿ ಹೊಸ ಬಡಾವಣೆಯ ನಿವಾಸಿ ಗಾಂಧಿ ಅವರ ಮಗ ಸುರೇಶ ಅ. ಕುರುಬರ ಸುರೇಶನನ್ನು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಬುಧವಾರ ಬಿಡುಗಡೆಗೊಳಿಸಿದೆ.

ಈ ಕೊಲೆ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಕೊಲೆಯಾಗಿದ್ದಳೆಂದು ಹೇಳಲಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯಲ್ಲಿ ಪ್ರತ್ಯಕ್ಷಳಾಗಿ ಮೈಸೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರಾಗಿ ಹಾಜರಾಗಿ ಅಚ್ಚರಿ ಮೂಡಿಸಿದ್ದಳು. ಆಕೆ ಮತ್ತು ಈ ಪ್ರಕರಣದ ಪ್ರಮುಖ ಸಾಕ್ಷೀದಾರರಾದ ಆಕೆಯ ಮಕ್ಕಳು, ತಾಯಿ,ಅತ್ತೆ, ಮಾವ ಹಾಗೂ ಪೊಲೀಸ್ ತನಿಖಾಧಿಕಾರಿಗಳ ಹೇಳಿಕೆ ಪಡೆದ ನ್ಯಾಯಾಲಯವು ಈ ವಿಚಾರವಾಗಿ ಎಲ್ಲರ ಹೇಳಿಕೆ ಪಡೆದು ವರದಿ ನೀಡುವಂತೆ ಮೈಸೂರು ಜಿಲ್ಲಾ ಎಸ್ ಪಿ ವಿಷ್ಣುವರ್ಧನ್ ಅವರಿಗೆ ನಿರ್ದೇಶಿಸಿತ್ತು.. ಎಸ್ ಪಿ ವರದಿ ಸ್ವೀಕರಿಸಿ,ಪಬ್ಲಿಕ್ ಪ್ರಾಸಿಕ್ಯೂಟರ್ ಹಾಗೂ ಆರೋಪಿ ಪರ ವಕೀಲ ಬಿ.ಎಸ್.ಪಾಂಡುಪೂಜಾರಿ ಅವರ ವಾದ ಆಲಿಸಿದ್ದ ಮೈಸೂರಿನ ಐದನೆಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಗುರುರಾಜ್ ಸೋಮಕ್ಕಳವರ್ ಬುಧವಾರ ಮಧ್ಯಾಹ್ನ ತೀರ್ಪು ಪ್ರಕಟಿಸಿದರು.

ಆರೋಪಿ ಸುರೇಶನನ್ನು ಬಿಡುಗಡೆಗೊಳಿಸಿದ ನ್ಯಾಯಾಲಯವು ಆರೋಪಿಯ ಹೆಸರನ್ನು ಪೊಲೀಸ್ ಠಾಣೆಯ ಕಡತದ ದಾಖಲೆಯಿಂದ ತೆಗೆದುಹಾಕುವಂತೆ ಬೆಟ್ಟದಪುರ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಸುರೇಶನಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಹೆಚ್ಚುವರಿ ಕಾರ್ಯದರ್ಶಿ ಗೃಹ ಇಲಾಖೆಗೆ ನಿರ್ದೇಶನ ನೀಡಿದೆ.

ತನಿಖೆ ಮಾಡಿದ್ದ ಪುಲೀಸ್ ಅಧಿಕಾರಿಗಳಾದ ಜಿತೇಂದ್ರ ಕುಮಾರ್ , ಪ್ರಕಾಶ್ ಎಂ ಯತ್ತಿನಮನಿ,

ಮಹೇಶ್ ಕುಮಾರ್ ಬಿ ಕೆ, ಪ್ರಕಾಶ್ ಬಿ ಜಿ. ವಿರುದ್ದ ಇಲಾಖಾ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುವಂತೆ ಮೈಸೂರಿನ ಐ ಜಿ ಪಿ ಅವರಿಗೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಅಲ್ಲದೆ ಅಸಹಜವಾಗಿ ಸಾವಿಗೀಡಾಗಿದ್ದ ವ್ಯಕ್ತಿಯ ಆ ಶವದ ವಿಚಾರವಾಗಿ ಯು ಡಿ ಆರ್ ತನಿಖೆ ನಡೆಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ಹಾಗೂ ಈ ನ್ಯಾಯಾಲಯಕ್ಕೆ ವರದಿ ನೀಡುವಂತೆ ಎಸ್ ಪಿ ಅವರಿಗೆ ನಿರ್ದೇಶನ ನೀಡಿದೆ.

ಅಲ್ಲದೆ, ಸುಳ್ಳು ದಾಖಲೆ ಸೃಷ್ಟಿಸಿ ಸುಳ್ಳು ಸಾಕ್ಷ್ಯ ನೀಡಿದ ಆರೋಪದ ಮೇಲೆ ಬಿ ಜಿ ಪ್ರಕಾಶ್ ವಿರುದ್ಧ ಐ ಪಿ ಸಿ ಸೆಕ್ಷನ್ 193 ಮತ್ತು 195 ಪ್ರಕಾರ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಮೈ ಸೂರು ಜಿಲ್ಲಾ ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿಗೆ ಅಧಿಕಾರ ನೀಡಿ ನಿರ್ದೇಶನ ನೀಡಿದೆ.

ಈ ತೀರ್ಪಿನ ಪ್ರತಿಯನ್ನು ಡಿಜಿಪಿ ಬೆಂಗಳೂರು, ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸರ್ಕಾರ, ಹೆಚ್ಚುವರಿ ಕಾರ್ಯದರ್ಶಿ ಗೃಹ ಇಲಾಖೆ, ಐಜಿಪಿ ಹಾಗೂ ಎಸ್ಪಿ ಮೈಸೂರು ಅವರಿಗೆ ಕಳಿಸುವಂತೆ ನಿರ್ದೇಶಿಸಿದೆ.

----

ಕೋಟ್...

ಪೊಲೀಸ್ ಇಲಾಖೆ, ಅಭಿಯೋಜನಾ ಇಲಾಖೆ, ನ್ಯಾಯಾಲಯ, ಸರ್ಕಾರ ಹಾಗೂ ಮಾಧ್ಯಮದ ದಾರಿ ತಪ್ಪಿಸಲು ಪ್ರಯತ್ನಿಸಿ ಈ ಎಲ್ಲಾ ಇಲಾಖೆಯ ಮೇಲೆ ಜನಸಾಮಾನ್ಯರಿಗೆ ಇರುವ ನಂಬಿಕೆಗೆ ಧಕ್ಕೆ ತರಲು ಪ್ರಯತ್ನಿಸುವ ಅಧಿಕಾರಿಗಳಿಗೆ ಈ ತೀರ್ಪು ತಕ್ಕ ಪಾಠ ಕಲಿಸಿದೆ.

- ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು