ಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಬರೋಬ್ಬರಿ 67,632 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ.
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಆರೋಗ್ಯ ಇಲಾಖೆಯ ನಿರಂತರ ಜಾಗೃತಿ ಅಭಿಯಾನದ ಫಲವಾಗಿ ರಾಜ್ಯದಲ್ಲಿ ಬರೋಬ್ಬರಿ 67,632 ಮಂದಿ ಅಂಗಾಂಗ ದಾನದ ವಾಗ್ದಾನ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲೇ 12,534 ಜನರು ನೋಂದಣಿ ಮಾಡಿಸಿದ್ದು, ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದಿದೆ.
ಅಂಗಾಂಗ ದಾನವು ಒಬ್ಬ ವ್ಯಕ್ತಿಯು ತನ್ನ ಜೀವಿತಾವಧಿಯಲ್ಲಿ ಅಥವಾ ಮರಣದ ನಂತರ ತನ್ನ ಆರೋಗ್ಯಕರ ಅಂಗಗಳನ್ನು ಮತ್ತೊಬ್ಬ ರೋಗಿಯ ಜೀವ ಉಳಿಸಲು ನೀಡುವ ಒಂದು ವೈದ್ಯಕೀಯ ಪ್ರಕ್ರಿಯೆಯಾಗಿದೆ. 18 ವರ್ಷ ಮೇಲ್ಪಟ್ಟ ಯಾರಾದರೂ ಅಂಗಾಂಗ ದಾನ ನೋಂದಣಿ ಮಾಡಿಸಿಕೊಳ್ಳಬಹುದು.ಜಾಗೃತಿಯ ಫಲ:
ಆರೋಗ್ಯ ಇಲಾಖೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯತಂತ್ರದಡಿ ಶಾಲಾ- ಕಾಲೇಜು, ಶಿಕ್ಷಣ ಸಂಸ್ಥೆ ಹಾಗೂ ವಿವಿಧ ಸಮುದಾಯ ಸಂಘಟನೆಗಳ ಸಹಕಾರದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಶಿಬಿರಗಳಲ್ಲಿ ಕ್ಯೂಆರ್ ಕೋಡ್ ಮೂಲಕವೂ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಒಬ್ಬ ದಾನಿ 8 ಜೀವಕ್ಕೆ ಆಸರೆ:
ಒಬ್ಬ ಮೃತ ಅಂಗಾಂಗ ದಾನಿಯಿಂದ 8 ಜನರ ಜೀವ ಉಳಿಸಬಹುದು. ಮೆದುಳಿನ ಕಾರ್ಯ ಶಾಶ್ವತವಾಗಿ ಸ್ಥಗಿತಗೊಂಡಿರುವುದು ವೈದ್ಯಕೀಯವಾಗಿ ದೃಢಪಟ್ಟ ಬಳಿಕ, ಕಾನೂನುಬದ್ಧ ಪ್ರಕ್ರಿಯೆ ಮತ್ತು ಕುಟುಂಬದ ಒಪ್ಪಿಗೆಯೊಂದಿಗೆ ಹೃದಯ, ಯಕೃತ್ತು, ಮೂತ್ರಪಿಂಡ, ಶ್ವಾಸಕೋಶ ಸೇರಿದಂತೆ ವಿವಿಧ ಅಂಗಾಂಗಗಳನ್ನು ಕಸಿ ಮಾಡಬಹುದಾಗಿದೆ. ಕಣ್ಣುಗಳ ದಾನವೂ ಮತ್ತೊಬ್ಬರ ಬದುಕಿಗೆ ಬೆಳಕು ನೀಡಬಲ್ಲದು.ಎನ್‌ಒಟಿಟಿಒ ಅಭಿಯಾನಕ್ಕೆ ಪೂರಕ:
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಎನ್‌ಒಟಿಟಿಒ) 2023ರಿಂದ ದೇಶಾದ್ಯಂತ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ಧಾರವಾಡ ಆರೋಗ್ಯ ಇಲಾಖೆ ಸ್ಥಳೀಯ ಮಟ್ಟದಲ್ಲಿ ಅಭಿಯಾನ ನಡೆಸುತ್ತಿದೆ. ಜಿಲ್ಲೆಯಲ್ಲಿ 2024ರಲ್ಲಿ 4, 2025ರಲ್ಲಿ 4 ಹಾಗೂ 2026ರಲ್ಲಿ ಓರ್ವ ಸೇರಿದಂತೆ ಒಟ್ಟು 9 ವಾಗ್ದಾನದಾರರ ಅಂಗಾಂಗಗಳನ್ನು ಕಸಿ ಪ್ರಕ್ರಿಯೆಗೆ ಬಳಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ವಿಜಯನಗರಕ್ಕೆ ಕೊನೆಯ ಸ್ಥಾನ:ಧಾರವಾಡದ ನಂತರ ಬಳ್ಳಾರಿ (12,222) ದ್ವಿತೀಯ, ಗದಗ (6,070) ತೃತೀಯ ಸ್ಥಾನದಲ್ಲಿವೆ. ವಿಜಯನಗರ ಜಿಲ್ಲೆಯಲ್ಲಿ 301 ನೋಂದಣಿಯಾಗುವ ಮೂಲಕ ಕೊನೆಯ ಸ್ಥಾನ ಪಡೆದಿದೆ.-ಕೋಟ್-
ನಿರಂತರ ಜಾಗೃತಿಯಿಂದ ಯಶಸ್ಸುಆರಂಭಿಕ ಹಂತದಲ್ಲಿ ಅಂಗಾಂಗ ದಾನಕ್ಕೆ ವಾಗ್ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಇತ್ತು. ಅಂಗಾಂಗ ದಾನದಿಂದ ಮತ್ತೊಬ್ಬರ ಜೀವ ಉಳಿಸಬಹುದು ಎಂಬ ಸಂದೇಶವನ್ನು ಆರೋಗ್ಯ ಮೇಳ, ಶಿಬಿರ, ವಿಶೇಷ ಕಾರ್ಯಕ್ರಮಗಳ ಮೂಲಕ ನಿರಂತರವಾಗಿ ಜನರಿಗೆ ತಲುಪಿಸಿದ ಪರಿಣಾಮ ನೋಂದಣಿ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ 2 ವರ್ಷಗಳಿಂದ ಧಾರವಾಡ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.
-ಡಾ. ಪರಶುರಾಮ ಎಫ್.ಕೆ. ಜಿಲ್ಲಾ ಆರೋಗ್ಯಾಧಿಕಾರಿ, ಧಾರವಾಡ-ಬಾಕ್ಸ್-ಟೇಬಲ್-
ಅಂಗಾಂಗ ದಾನ ನೋಂದಣಿ
ಜಿಲ್ಲೆನೋಂದಣಿ
ಧಾರವಾಡ12,534
ಬಳ್ಳಾರಿ12,222
ಗದಗ6,070
ಬೆಂಗಳೂರು5,702
ವಿಜಯಪುರ2,960
ಬೆಳಗಾವಿ2,957
ದಕ್ಷಿಣ ಕನ್ನಡ2,581
ಕೋಲಾರ2,031
ಕೊಪ್ಪಳ1,972
ಬಾಗಲಕೋಟೆ1,667
ಹಾವೇರಿ1,667