ಬರಡು ಭೂಮಿಯಲ್ಲಿ ಅರಕಲಗೂಡು ರೈತನ ಸಾವಯವ ಕೃಷಿ ಸಾಧನೆ

| Published : Feb 12 2024, 01:38 AM IST / Updated: Feb 12 2024, 04:19 PM IST

Farmer

ಸಾರಾಂಶ

ಬರಡು ಭೂಮಿಯಲ್ಲಿ ಏನೂ ಮಾಡಲು ಆಗುವುದಿಲ್ಲ ಎಂದವರಿಗೆ ಚಿನ್ನದಂತಹ ಬೆಳೆ ತೆಗೆದು ಆಧುನಿಕ ರೈತರೊಬ್ಬರು ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ನಂದನ್‌ಪುಟ್ಟಣ್ಣ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಬರಡು ಭೂಮಿಯಲ್ಲಿ ಏನೂ ಮಾಡಲು ಆಗುವುದಿಲ್ಲ ಎಂದವರಿಗೆ ಚಿನ್ನದಂತಹ ಬೆಳೆ ತೆಗೆದು ಆಧುನಿಕ ರೈತರೊಬ್ಬರು ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ಬರಡು ನೆಲದಲ್ಲಿ ಸಾವಯವ ಕೃಷಿ ಮಾಡಿ ರೈತ ಎಸ್. ರವಿಕುಮಾರ್ ಸೈ ಎನಿಸಿಕೊಂಡಿದ್ದಾರೆ. ತಾಲೂಕಿನ ದಂಡಿಗನಹಳ್ಳಿ ಹೋಬಳಿ ದೂತನೂರು ಕಾವಲು ಎಂಬ ಬರಡು ಕುಗ್ರಾಮದ ರವಿಕುಮಾರ್‌ ತಮ್ಮ ಸ್ವಂತ ೧೫ ಎಕರೆ ಜಮೀನಿನ ತೋಟದಲ್ಲಿ ಕೃಷಿ ಮಾಡಿ ಉತ್ತಮ ಆದಾಯ ಗಳಿಸಿದ್ದಾರೆ.

ದೇಶ ವಿದೇಶಗಳಿಂದ ಕೃಷಿ ವಿಜ್ಞಾನಿಗಳು ತಮ್ಮ ತೋಟಕ್ಕೆ ಆಗಮಿಸಿ ತಾವು ಬೆಳೆದ ಸಾವಯವ ಬೆಳೆಗಳ ಬಗ್ಗೆ ಸಂಶೋಧನೆ ಹಾಗೂ ನೂರಾರು ಕೃಷಿ ಕಾರ್ಯಗಾರವನ್ನು ಹಮ್ಮಿಕೊಂಡು ರೈತರಿಗೆ ಒಂದು ಮಾದರಿಯಾದ ತೋಟ ಎನಿಸಿಕೊಂಡು ಹಲವು ರೈತರಿಗೆ ಪ್ರಾತ್ಯಕ್ಷಿಕೆ ನೀಡುಡುತ್ತಿದ್ದಾರೆ.

ಮನಸ್ಸಿದ್ದರೆ ಮಾರ್ಗ ಎಂಬ ನಾಣ್ಣುಡಿಯಂತೆ ಬಂಜರು ಭೂಮಿ, ಬರೀ ಕಲ್ಲುಗಳೇ ತುಂಬಿದ್ದ ಪ್ರದೇಶ, ಈ ಬರಡು ಪ್ರದೇಶದಲ್ಲಿ ಯಾರೂ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ರವಿಕುಮಾರ್‌ ಅದೇ ಜಾಗದಲ್ಲಿ ಕೃಷಿ ಮಾಡಲು ದೃಢವಾದ ನಂಬಿಕೆಯನ್ನು ಇಟ್ಟುಕೊಂಡು ಕೆಲಸ ಪ್ರಾರಂಭಿಸಿ ಬರೋಬ್ಬರಿ ೧೫ ವರ್ಷಗಳ ಸತತ ಪ್ರಯತ್ನದ ಫಲವಾಗಿ ಒಂದು ಮಾದರಿ ತೋಟವನ್ನಾಗಿ ಮಾಡಿದ್ದಾರೆ. ಇವರು ಕೆಲಸ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದವರು ಇವರನ್ನು ಹುಚ್ಚ ಎಂದು ಟೀಕಿಸಿದ್ದೇ ಹೆಚ್ಚು.

ಕ್ರಮೇಣ ಎಸ್‌ಆರ್‌ಕೆ ಫಾರಂ ಹೌಸ್ ಆಗಿ ಬದಲಾದ ಸಂದರ್ಭದಲ್ಲಿ ತೆಂಗು, ಸಪೋಟ, ಮಾವು, ಹಲಸು, ಡ್ರ್ಯಾಗನ್, ಹನುಮಫಲ, ಬಟರ್‌ಫ್ರೂಟ್ ಹೀಗೆ ಅನೇಕ ಸುಮಾರು ೫೦ಕ್ಕೂ ಹೆಚ್ಚು ವಿವಿಧ ಜಾತಿಯ ಹಣ್ಣುಗಳನ್ನು ಬೆಳೆಯುತ್ತಾರೆ.

ಜಮೀನಿಗೆ ಕಾಲಿಟ್ಟರೆ ಮಲೆನಾಡು ಭಾಗಕ್ಕೆ ಹೋದಂತೆ ಭಾಸವಾಗುತ್ತದೆ. ತಣ್ಣನೆಯ ವಾತಾವರಣ, ಹಕ್ಕಿಗಳ ಚಿಲಿಪಿಲಿ ಮನಸ್ಸಿಗೆ ಮುದ ನೀಡುತ್ತದೆ. 

ಎರಡು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ತಗ್ಗಿನ ಪ್ರದೇಶದಲ್ಲಿ ಮೂರು ಕಡೆ ಕೃಷಿ ಹೊಂಡ ನಿರ್ಮಿಸಿದ್ದಾರೆ. ಮಳೆಯ ನೀರು ಸರಾಗವಾಗಿ ಕೃಷಿ ಹೊಂಡಕ್ಕೆ ಹರಿದು ಬರುವುದರಿಂದ ಬೆಳೆಗಳಿಗೆ ನೀರು ಹಾಯಿಸುವುದು ಸುಲಭ. 

ಹಾಗಾಗಿ ಬೆಳೆಗಳು ನಳ ನಳಿಸುತ್ತಿವೆ. ಒಂದು ಕೃಷಿ ಹೊಂಡದಲ್ಲಿ ಮೀನುಗಳನ್ನು ಸಾಕುತ್ತಿದ್ದಾರೆ. ವಿವಿಧ ಬೆಳೆ ಬೆಳೆದಿರುವುದರಿಂದ ವರ್ಷದ ಎಲ್ಲಾ ಋತುಮಾನದಲ್ಲಿ ಆದಾಯ ಬರುತ್ತದೆ. 

ಬದುಗಳನ್ನು ವ್ಯರ್ಥ ಮಾಡದೇ ಅಲ್ಲಿಯೂ ೨೦೦ ಬೆಟ್ಟದ ನೆಲ್ಲಿಕಾಯಿ ಗಿಡ ಬೆಳೆದಿದ್ದಾರೆ. ಬಹುತೇಕ ಸಾವಯವ ಗೊಬ್ಬರ ಬಳಸಿದ್ದಾರೆ. ಸ್ವಲ್ಪಮಟ್ಟಿಗೆ ರಾಸಾಯನಿಕ ಗೊಬ್ಬರ ಬಳಸುವುದೂ ಉಂಟು.

ವಿವಿಧ ಹಣ್ಣು, ತರಕಾರಿ ವ್ಯಾಪಾರಕ್ಕೆ ಮಾರುಕಟ್ಟೆ ಅವಲಂಬಿಸಿಲ್ಲ. ಉತ್ತಮ ಬೆಲೆ ಸಿಕ್ಕರೆ ಮಾತ್ರ ವ್ಯಾಪಾರಿಗಳಿಗೆ ನೀಡುತ್ತಾರೆ.

ಇಲ್ಲದಿದ್ದರೆ ಮನೆಯಲ್ಲಿಯೇ ವ್ಯಾಪಾರ ಮಾಡುತ್ತಾರೆ. ಗುಣಮಟ್ಟದ ಹಣ್ಣು, ತರಕಾರಿ ದೊರಕುವುದರಿಂದ ಗ್ರಾಹಕರು ಮನೆಗೆ ಬಂದು ಖರೀದಿಸುತ್ತಾರೆ.

ಸುಮಾರು ೫೦೦ಕ್ಕೂ ಹೆಚ್ಚು ಶ್ರೀಗಂಧದ ಸಸಿಗಳನ್ನು ನೆಟ್ಟಿರುವ ರವಿಕುಮಾರ್‌ ನಿತ್ಯ ತಮ್ಮ ಸ್ವಂತ ಶ್ರಮದಿಂದ ಗಿಡಗಳನ್ನು ಪೋಷಣೆ ಮಾಡುತ್ತ ಬಂದಿದ್ದು ಪರಿಪೂರ್ಣ ರೈತರಾಗಿ ಕೆಲಸ ಮಾಡುತ್ತಾರೆ.

ಒಟ್ಟಾರೆ ಮನಸಿದ್ದರೆ ಮಾರ್ಗ ಎಂಬಂತೆ ಆಧುನಿಕತೆಗೆ ಹೆಚ್ಚು ಮಾರು ಹೋಗಿ ಈಗಿನ ಯುವಕರು ಹಳ್ಳಿಯಿಂದ ಗುಳೆ ಹೋಗಿ ನಗರಗಳಲ್ಲಿ ಯಾರದೋ ಕಂಪನಿಯಲ್ಲಿ ಎಂಟತ್ತು ಸಾವಿರ ರು.ಗೆ ದುಡಿಯುವ ಬದಲು ಕೃಷಿಯಲ್ಲಿ ಲಕ್ಷಾಂತರ ರು. ಲಾಭ ಮಾಡಬಹುದು ಎಂಬುದಕ್ಕೆ ಇದು ನಿದರ್ಶನ.

ಪ್ರಶಸ್ತಿಗಳ ಗರಿ: ಗುಣಮಟ್ಟದ ರಾಗಿ ಬೆಳೆದಿದ್ದರಿಂದಾಗಿ ೨೦೧೨ರಲ್ಲಿ ಕೃಷಿ ಇಲಾಖೆ ರವಿಕುಮಾರ್‌ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ, ತಾಲೂಕು ಆಡಳಿತದಿಂದ ಉತ್ತಮ ಕೃಷಿಕ ಎಂಬ ಪ್ರಶಸ್ತಿ, ೨೦೧೫-೧೬ರಲ್ಲಿ ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಕೃಷಿ ಪಂಡಿತ್ ಪ್ರಶಸ್ತಿ ಲಭಿಸಿದೆ.

ಕೃಷಿಯಿಂದ ಉತ್ತಮ ಆರೋಗ್ಯ ಲಭಿಸುತ್ತದೆ, ಕೃಷಿ ಇಲಾಖೆಯಿಂದ ಬರುವ ಸಾಕಷ್ಟು ಪ್ರಯೋಜನಗಳನ್ನು ಪಡೆದುಕೊಂಡು ಇಂದಿನ ಯುವಕರು ಕೃಷಿಕರಾಗಬಹುದು. ಆದರೆ ಮೋಜಿನ ಹಿಂದೆ ಬೀಳುತ್ತಿದ್ದಾರೆ, ೪ ಎಕರೆ ಜಮೀನಿದ್ದರೆ ಸರ್ಕಾರಿ ಸಂಬಳಕ್ಕಿಂತ ಹೆಚ್ಚು ಆದಾಯ ತೆಗೆಯಬಹುದು.- ರವಿಕುಮಾರ್, ಸಾವಯವ ಕೃಷಿಕ.

ನಮ್ಮ ತಾಲೂಕಿನಲ್ಲಿ ಇಂತಹ ಮಾದರಿ ಕೃಷಿಕರಿರುವುದು ಸಂತೋಷದ ವಿಷಯ, ವಿದೇಶಗಳಿಂದ ವಿಜ್ಞಾನಿಗಳು ಬಂದು ಹೋಗುತ್ತಾರೆ, ತಾಲೂಕಿನ ಯುವಕರು ಹಾಗೂ ರೈತರು ಭೇಟಿ ನೀಡಿ ತಮ್ಮ ಜಮೀನಿನಲ್ಲಿ ಬೆಳೆ ಬೆಳೆಯಲು ಮಾಹಿತಿ ಪಡೆಯುತ್ತಾರೆ. - ಸೊಪ್ಪಿನಹಳ್ಳಿ ಶಿವಣ್ಣ, ರೈತ ಸಂಘದ ತಾಲ್ಲೂಕು ಅಧ್ಯಕ್ಷರು.