ಕನ್ನಡಪ್ರಭ ವಾರ್ತೆ ಕನಕಪುರ

ರೈತರ ನಿಜವಾದ ಪುಸ್ತಕವೆಂದರೆ ಅವರ ಜಮೀನು, ನಿಜವಾದ ಗ್ರಂಥಾಲಯವೆಂದರೆ ಕೃಷಿ ಮತ್ತು ತೋಟಗಾರಿಕೆ ತರಬೇತಿ ಕೇಂದ್ರಗಳು ಎಂದು ಸಂಸದ ಡಾ. ಸಿ. ಎನ್. ಮಂಜುನಾಥ್ ಅರ್ಥೈಸಿದರು.

ತಾಲೂಕಿನ ಕೋಡಿಹಳ್ಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಹಿಂದಿರುವ ರಂಗಮಂದಿರದಲ್ಲಿ ಐಸಿಎಆರ್- ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ ರೀಸರ್ಚ್ ಬೆಂಗಳೂರು, ಕನಕಪುರ ಆರ್ಗ್ಯಾನಿಕ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಹಾಗೂ ಕೋಡಿಹಳ್ಳಿ ರೇಷ್ಮೆ ಕೃಷಿ ರೈತ ಉತ್ಪಾದಕ ಕಂಪನಿ ಸಂಯುಕ್ತಾಶ್ರಯದಲ್ಲಿ ಗೊಬ್ಬರಗಳ ಸಮತೋಲಿತ ಬಳಕೆ ಮತ್ತು ಸಮಗ್ರ ಮಣ್ಣಿನ ಆರೋಗ್ಯ ನಿರ್ವಹಣೆ ಕುರಿತು ರಾಷ್ಟ್ರವ್ಯಾಪಿ ಜಾಗೃತಿ ಮತ್ತು ಸಂವೇದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಮ್ಮ ದೇಶದ ಜನರ ಆರೋಗ್ಯ ಸುಸ್ಥಿರವಾಗಿರಲು ಗ್ರಾಮೀಣ ಆರ್ಥಿಕತೆ ಬಲವಾಗಬೇಕು, ಗ್ರಾಮೀಣ ಆರ್ಥಿಕತೆ ಬಲವಾಗಬೇಕಾದರೆ ಜಾನುವಾರುಗಳ ಸಂಖ್ಯೆ ಹೆಚ್ಚಾಗಬೇಕು, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಅತಿಯಾದ ಬಳಕೆಯಿಂದ ಮಣ್ಣಿನ ಆರೋಗ್ಯ ಹಾಳಾಗುತ್ತಿದ್ದು, ಇದೇ ಕಾರಣದಿಂದ ಅನೇಕ ಆರೋಗ್ಯ ಸಮಸ್ಯೆಗಳು ಮತ್ತು ಕ್ಯಾನ್ಸರ್‌ಗಳಂತಹ ಗಂಭೀರ ರೋಗಗಳು ಹೆಚ್ಚುತ್ತಿವೆ. ಆದ್ದರಿಂದ ಗೊಬ್ಬರ ಮತ್ತು ಔಷಧಿಗಳನ್ನು ಮಿತವಾಗಿ ಬಳಸುವುದು ಅತ್ಯಗತ್ಯ ಎಂದು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ರೈತರಿಗೆ ಸರ್ಕಾರದ ಯೋಜನೆಗಳು, ಜೈವಿಕ ಕೃಷಿ ವಿಧಾನಗಳು ಮತ್ತು ಮಣ್ಣಿನ ಆರೋಗ್ಯದ ಮಹತ್ವದ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದ ಅವರು, ಭೂಮಿಗೂ ಜೀವವಿದೆ. ಪ್ರತಿಯೊಂದು ಜೀವರಾಶಿಯೂ ಒಂದರ ಮೇಲೆ ಒಂದು ಅವಲಂಬಿತವಾಗಿದೆ. ಮಣ್ಣಿನ ಆರೋಗ್ಯ ಕಾಪಾಡಿದಾಗ ಮಾತ್ರ ಉತ್ತಮ ಆಹಾರ ಉತ್ಪಾದನೆ ಸಾಧ್ಯ. ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ದೇಶಾದ್ಯಂತ ಹೆಚ್ಚಾಗಿ ನಡೆಯಬೇಕೆಂದು ತಿಳಿಸಿದರು.


ಹಿರಿಯ ವಿಜ್ಞಾನಿ( ಮಣ್ಣು ವಿಜ್ಞಾನ) ಡಾ. ಡಿ. ಕಲೈವನನ್, ಐಸಿಎಆರ್- ಐಐಎಚ್ಆರ್ ಬೆಂಗಳೂರು ವಿಜ್ಞಾನಿ ಡಾ. ಜಿ.ಆರ್. ಸ್ಮಿತಾ, ಕನಕಪುರ ಆರ್ಗಾನಿಕ್ ಪ್ರೊಡ್ಯೂಸರ್ ಕಂಪನಿಯ ನಿರ್ದೇಶಕರಾದ ಶ್ರೀ ಲಕ್ಷ್ಮೀ ನಾರಾಯಣ ಹಾಗೂ ಕೋಡಿಹಳ್ಳಿ ರೇಷ್ಮೆ ಕೃಷಿ ರೈತರ ಉತ್ಪಾದಕ ಕಂಪನಿ ಲಿಮಿಟೆಡ್‌ನ ನಿರ್ದೇಶಕರು ಶ್ರೀ ಸಂಪತ್ ಕುಮಾರ್, ಬೆಂಗಳೂರು ದಕ್ಷಿಣ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಜಗನ್ನಾಥ್ ಗೌಡ, ಕನಕಪುರ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ಕೆ.ಪಿ. ಕುಮಾರ್, ಕನಕಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಚೂಡಾಮಣಿ ಚಂದ್ರು, ವಿವಿಧ ಗಣ್ಯರು ಹಾಗೂ ಕನಕಪುರ ತಾಲೂಕಿನ ರೈತ ಬಾಂಧವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.