ಸಾರಾಂಶ
ಸಂಘಟನೆಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾರ್ಕ್ಸ್ ಹುಟ್ಟಿದ ಎಂದು ಭಾಸವಾಗುತ್ತದೆ. ಆತನ ಬೀಜ ವಿಶ್ವದಲ್ಲೆಡೆ ಹರಡಿದೆ ಎಂಬುದಕ್ಕೆ ಎಸ್‌ಎಫ್‌ಐ ಸಂಘಟನೆ ಸಾಕ್ಷಿಯಾಗಿದೆ ಎಂದು ಯುವಕವಿ, ಬರಹಗಾರ ದೇವರಾಜ ಹುಣಸಿಕಟ್ಟಿ ಹೇಳಿದರು.
ರಾಣಿಬೆನ್ನೂರು: ಸಂಘಟನೆಗಳು ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಮಾರ್ಕ್ಸ್ ಹುಟ್ಟಿದ ಎಂದು ಭಾಸವಾಗುತ್ತದೆ. ಆತನ ಬೀಜ ವಿಶ್ವದಲ್ಲೆಡೆ ಹರಡಿದೆ ಎಂಬುದಕ್ಕೆ ಎಸ್‌ಎಫ್‌ಐ ಸಂಘಟನೆ ಸಾಕ್ಷಿಯಾಗಿದೆ ಎಂದು ಯುವಕವಿ, ಬರಹಗಾರ ದೇವರಾಜ ಹುಣಸಿಕಟ್ಟಿ ಹೇಳಿದರು.ಇಲ್ಲಿನ ಗೌರಿಶಂಕರ ನಗರದ ನಿವೃತ್ತ ನೌಕರರ ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ತಾಲೂಕು ಸಮಿತಿ ಆಯೋಜಿಸಿದ 9ನೇ ತಾಲೂಕು ಸಮ್ಮೇಳನದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ತತ್ವಾದರ್ಶಗಳನ್ನು ತುಂಬುವುದು ಮಾತೃ ಹೃದಯ ಮಾಡುವ ಕೆಲಸ. ಅಂತಹ ಕಾರ್ಯವನ್ನು ಎಸ್‌ಎಫ್‌ಐ ಸಂಘಟನೆ ಸಮಾಜದಲ್ಲಿ ಮಾಡುತ್ತಿದೆ ಎಂಬ ಹೆಮ್ಮೆ ಇದೆ. ಸಂಘಟನೆಯಲ್ಲಿರುವ ಕಾರ್ಯಕರ್ತ ನೈತಿಕವಾಗಿ ಕಾಯಕದಲ್ಲಿ ಕೈಲಾಸ ಕಂಡುಕೊಂಡು ಇತರರಿಗೆ ಮಾದರಿ ಆಗುತ್ತಾರೆ ಎಂದರು. ಉಪನ್ಯಾಸಕ ಡಾ.ಹೊನ್ನಪ್ಪ ಹೊನ್ನಪ್ಪವರ ಮಾತನಾಡಿ, ಸಂಘಟನೆ ಧೈರ್ಯ ಕೊಡುತ್ತದೆ ಹಾಗೂ ಶಕ್ತಿಯಾಗಿ ನಿಲ್ಲುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ವ್ಯಾಪಾರಿಕರಣವಾಗುತ್ತಿದೆಯೇ ಹೊರತು ಸಾರ್ವತ್ರಿಕರಣವಾಗುತ್ತಿಲ್ಲ. ದೇಶದ ತಳ ಸಮುದಾಯದವರಿಗೆ, ಹಿಂದುಳಿದವರಿಗೆ, ಬಡವರಿಗೆ, ದಲಿತರಿಗೆ ಶಿಕ್ಷಣ ಸಿಗುತ್ತಿಲ್ಲ. ಅಂಬೇಡ್ಕರ್, ಭಗತ್ ಸಿಂಗ್, ಬಸವಣ್ಣ ಓದಬೇಕು ಆಗ ವಿದ್ಯಾರ್ಥಿ-ಯುವಜನರು ಹೋರಾಟಕ್ಕೆ ಸಜ್ಜುಗೊಳುತ್ತಾರೆ. ಯುವಜನತೆ ಕುವೆಂಪು ಅವರ ಕರೆಯಂತೆ ಜಾತಿ,ಧರ್ಮ ಹೊಡೆದಾಟ ಬಿಟ್ಟು ವಿಶ್ವಮತ ಸಂದೇಶ ಅರಿಯಬೇಕು ಎಂದರು.ವನಸಿರಿ ಸಂಸ್ಥೆ ಸಿಇಒ ಎಸ್. ಡಿ. ಬಳಿಗಾರ ಮಾತನಾಡಿ, ಕಾರ್ಮಿಕ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗುವುದು ಸರಿಯಲ್ಲ. ಎಸ್‌ಎಫ್‌ಐ ಸಂಘಟನೆಯೊಂದಿಗೆ ವನಸಿರಿ ಸಂಸ್ಥೆ ಸದಾಕಾಲವೂ ಜೊತೆಯಾಗಿರುತ್ತದೆ ಎಂದರು.ಎಸ್‌ಎಫ್‌ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿದರು.ಎಸ್‌ಎಫ್‌ಐ ತಾಲೂಕು ಅಧ್ಯಕ್ಷ ಶ್ರೀಧರ ಚಲವಾದಿ ಅಧ್ಯಕ್ಷತೆ ವಹಿಸಿದ್ದರು. ಕೀರ್ತನಾ ಎಚ್, ಶೃತಿ ಆರ್.ಎಮ್., ಸಿಂಚನ ಮಾಗನೂರ, ಬಸವರಾಜ ಕೊಣಸಾಲಿ, ಮಹೇಶ ಮರೋಳ, ಗಜೇಂದ್ರ ಆರೇರ, ಕರಿಯಪ್ಪ ಭರಡಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.