ಸಾರಾಂಶ
ವಿವಿಧತೆಯಲ್ಲಿ ಏಕತೆ ತೋರುವ ಹೆಮ್ಮೆಯ ರಾಷ್ಟ್ರದ ವೈವಿಧ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತದ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿವಿಧತೆಯಲ್ಲಿ ಏಕತೆ ತೋರುವ ಹೆಮ್ಮೆಯ ರಾಷ್ಟ್ರದ ವೈವಿಧ್ಯಮಯ ಧ್ವನಿಗಳ ಅಭಿವ್ಯಕ್ತಿಗೆ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗೆ ಅವಕಾಶ ನೀಡುವ ಆಡಳಿತದ ವ್ಯವಸ್ಥೆಯೇ ಪ್ರಜಾಪ್ರಭುತ್ವದ ಜೀವಾಳವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಭಾನುವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಾಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದ ಅವರು, ಪ್ರಜಾಪ್ರಭುತ್ವ ಸ್ವಾತಂತ್ರ್ಯ, ಸಮಾನತೆ ಮತ್ತು ನ್ಯಾಯಕ್ಕಾಗಿ ನಮ್ಮ ಅತ್ಯುನ್ನತ ಆಕಾಂಕ್ಷೆಗಳನ್ನು ಸಾಕಾರಗೊಳಿಸುವ ಶಕ್ತಿಯುತ ಮತ್ತು ಕ್ರಿಯಾತ್ಮಕ ಶಕ್ತಿಯಾಗಿದೆ ಎಂದರು.ಭಾರತ ದೇಶ ಅತ್ಯಂತ ಭವ್ಯ, ಶಕ್ತಿಶಾಲಿ ಮತ್ತು ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶವಾಗಿದೆ. ದೇಶದಲ್ಲಿ ಪರಿಣಾಮಕಾರಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮೂಲಧಾರೆ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ರಚಿತವಾದ ಸಂವಿಧಾನ. ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಸಾರ್ವತ್ರಿಕ ಮೌಲ್ಯವಾಗಿದೆ. ಪ್ರಜಾಪ್ರಭುತ್ವ ರಕ್ಷಿಸುವುದು, ಅದರ ಮೌಲ್ಯಗಳನ್ನು ಉತ್ತೇಜಿಸಿವುದು ಹಾಗೂ ಪ್ರಜಾಪ್ರಭುತ್ವ ಅಲ್ಲದ ರಾಷ್ಟ್ರಗಳು ಪ್ರಜಾಪ್ರಭುತ್ವ ವ್ಯವಸ್ಥೆ ಅಳವಡಿಸಿಕೊಳ್ಳಲು ಬೆಂಬಲಿಸುವುದು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಉದ್ದೇಶವಾಗಿದೆ ಎಂದರು.ಮಾನವ ಬಂಧುತ್ವ ಗಟ್ಟಿಗೊಳಿಸುವ ಮಾನವ ಸರಪಳಿ:
ರಾಜ್ಯವು ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ 2500 ಕಿ.ಮೀ ಉದ್ದದ ಮಾನವ ಸರಪಳಿ ನಿರ್ಮಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಜಿಲ್ಲೆಯಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯಿಂದ ಚನ್ನಮ್ಮನ ಕಿತ್ತೂರು ತಾಲೂಕಿನ ತೇಗೂರ ಗ್ರಾಮದವರೆಗೆ 145 ಕಿ.ಮೀ ಮಾನವ ಸರಪಳಿ ನಿರ್ಮಿಸಿ ಮಾನವ ಬಂಧುತ್ವವನ್ನು ಯಶ್ವಗೊಳಿಸಲು ಸಚಿವ ಸತೀಶ ಜಾರಕಿಹೊಳಿ ಕರೆ ನೀಡಿದರು.ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಮಾನವೀಯತೆಯ ಮೌಲ್ಯಗಳ ಸಂದೇಶ ಸಾರುವ ಈ ವಿಶ್ವ ದಾಖಲೆಯ ಕಾರ್ಯಕ್ರಮ ಅಭೂತಪೂರ್ವವಾಗಿದೆ. ಇಡೀ ವಿಶ್ವವವೇ ನಮ್ಮ ರಾಜ್ಯದತ್ತ ತಿರುಗಿ ನೀಡುವಂತಹ ಕಾರ್ಯಕ್ರಮವಾಗಿದೆ ಎಂದರು.
ಶಾಸಕರಾದ ಆಸಿಫ್(ರಾಜು) ಸೇಠ್, ವಿಠ್ಠಲ ಹಲಗೇಕರ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಜಿಲ್ಲಾಧಿಕಾರಿ ಮೊಹಮ್ಮದ ರೋಷನ್, ಪೋಲಿಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿಪಂ ಸಿಇಒ ರಾಹುಲ್ ಶಿಂಧೆ, ಪ್ರಶಿಕ್ಷಣಾರ್ಥಿ ಐಎಎಸ್ ಅಧಿಕಾರ ದಿನೇಶಕುಮಾರ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಡಿಸಿಪಿ ರೊಹನ್ ಜಗದೀಶ, ಜಿಲ್ಲೆಯ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿ ಸಿಬ್ಬಂದಿ, ಸಾರ್ವಜನಿಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಇದ್ದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೆಶಕ ರಾಮನಗೌಡ ಕನ್ನೋಳಿ ಸ್ವಾಗತಿಸಿದರು. ಸ್ವಾತಿ ಸಂವಿಧಾನ ಪಿಠೀಕೆ ಬೋಧಿಸಿದರು.ಬೃಹತ್ ಮಾನವ ಸರಪಳಿ:
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನಿಂದ ಚಾಮರಾಜನಗರದವರೆಗೆ ರಾಜ್ಯದ 31 ಜಿಲ್ಲೆಗಳನ್ನು ಒಳಗೊಂಡಿರುವ ಅತಿ ಉದ್ದದ ಮಾನವ ಸರಪಳಿಯನ್ನು ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯಿಂದ ಕಿತ್ತೂರಿನ ತೇಗೂರ ಗ್ರಾಮದ ವರಗೆ ಅಂದಾಜು 145 ಕಿ.ಮೀ ಉದ್ಧದ ಮಾನವ ಸರಪಳಿ ನಿರ್ಮಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಘ-ಸಂಸ್ಥೆಗಳು, ಸ್ವಯಂ ಪ್ರೇರಿತರಾಗಿ ಮಾನವ ಸರಪಳಿ ನಿರ್ಮಿಸುವದರ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವ ಸಾರುವ ಸಂವಿಧಾನ ಪಿಠೀಕೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು.