ವೀರಶೈವ ಲಿಂಗಾಯತ ಸಮುದಾಯ ಬಹಳ ದೊಡ್ಡದಾಗಿದ್ದು ನೆಮ್ಮದಿಯ ಜೀವನ, ಸಂಘಟನೆ, ಸಂವಿಧಾನಿಕ ಮಾನ್ಯತೆ ಹಾಗೂ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವೀರಶೈವ ಲಿಂಗಾಯತ ಸಮುದಾಯ ಬಹಳ ದೊಡ್ಡದಾಗಿದ್ದು ನೆಮ್ಮದಿಯ ಜೀವನ, ಸಂಘಟನೆ, ಸಂವಿಧಾನಿಕ ಮಾನ್ಯತೆ ಹಾಗೂ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಸಂಘಟನೆ ಅಗತ್ಯವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಣಬೇರು ರಾಜಣ್ಣ ಹೇಳಿದರು.

ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ಮಹಾಸಭಾದ ಜಿಲ್ಲೆಯ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ಅಪಪ್ರಚಾರ ಹಾಗೂ ಗೊಂದಲಗಳಿಗೆ ಅವಕಾಶ ಕೊಡದೇ ಅಭಿವೃದ್ಧಿ ಕಡೆಗೆ ಹಾಗೂ ಸಂಘಟನೆ ಕಡೆಗೆ ಗಟ್ಟಿಯಾಗಿ ನೆಲೆ ನಿಲ್ಲಬೇಕಿದೆ. ದಾವಣಗೆರೆ ನಗರದಲ್ಲಿ 2 ನಿವೇಶನಗಳಿದ್ದು, ಒಂದು ನಿವೇಶನದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಭವನ ನಿರ್ಮಾಣಕ್ಕೆ ಸಹಮತದ ಅಭಿಪ್ರಾಯದೊಂದಿಗೆ ಸಮ್ಮತಿಸಲಾಗಿದೆ. ಶೀಘ್ರದಲ್ಲೇ ಸಂಪನ್ಮೂಲ ಕ್ರೋಡೀಕರಿಸಿ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕ್ರಪ್ಪ ನೇತೃತ್ವದಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮಹಾಸಭಾ ರಾಜ್ಯ ನಿರ್ದೇಶಕಿ ಎಂ.ಜೆ. ಶಶಿಕಲಾ ಮೂರ್ತಿ ಮಾತನಾಡಿ, ಸಮುದಾಯದ ಒಗ್ಗಟ್ಟು ಹೆಚ್ಚಿಸಲು ಮಹಾಸಭಾ ಕಾರ್ಯಗತವಾಗಿದೆ. ಅವಕಾಶಗಳನ್ನು ಬಳಸಿ ಮಹಾಸಭಾ ಸಂಘಟನೆ ಮತ್ತು ಸದಸ್ಯತ್ವ ನೋಂದಣಿ ಹಮ್ಮಿಕೊಳ್ಳಲಾಗುತ್ತಿದೆ. ಗ್ರಾಮೀಣ, ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಮಹಾಸಭಾ ಸದಸ್ಯತ್ವ ನೋಂದಣಿ ನಡೆಸಲಾಗುತ್ತಿದೆ. ಇದಕ್ಕೆ ಸಮುದಾಯದ ಪ್ರತಿಯೊಬ್ಬರು ಸಹಕಾರ ನೀಡಿ ಸಂಘಟನೆಗೆ ಬಲ ನೀಡಬೇಕಾಗಿದೆ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಕಾರ್ಯದರ್ಶಿ ರೇಣುಕಾ ಪ್ರಸನ್ನ ಮಾತನಾಡಿ, ಇಂದಿನ ಸಭೆಯಲ್ಲಿ ಭವನ ನಿರ್ಮಾಣಕ್ಕೆ ಹಾಗೂ ಆರ್ಥಿಕ ಕ್ರೋಡೀಕರಣಕ್ಕೆ ಅಂಗೀಕರಿಸಲಾಗಿದೆ. ಭವನ ನಿರ್ಮಾಣಕ್ಕೆ ಸಮಿತಿ ರಚನೆ ಆಗಬೇಕು. ಇದರ ಸಂಪೂರ್ಣ ಹೊಣೆಗಾರಿಕೆ ರಾಜ್ಯ ಘಟಕಕ್ಕೆ ಇರುತ್ತದೆ ಎಂದು ತಿಳಿಸಿದರು.

ಮಹಾಸಭಾದ ಅಣಬೇರು ರಾಜಣ್ಣ, ರೇಣುಕಾ ಪ್ರಸನ್ನ, ಎಂ.ಜೆ.ಶಶಿಕಲಾ ಮೂರ್ತಿ, ಜಿಲ್ಲಾಧ್ಯಕ್ಷ ಐಗೂರು ಚಂದ್ರಶೇಖರ, ನಿರ್ದೇಶಕ ಸಂದೀಪ ಅಣಬೇರು, ಎಸ್.ಜಿ.ಉಳುವಯ್ಯ ಇತರರನ್ನು ಸನ್ಮಾನಿಸಲಾಯಿತು.

ಚಿಕ್ಕ ಕೋಗಲೂರು ಉಮೇಶ್. ಚನ್ನಗಿರಿ ಘಟಕ ಅಧ್ಯಕ್ಷ ಹರೋಸಾಗರ ಪ್ರಕಾಶ, ಎಸ್.ಜೆ. ಕಿರಣ್, ಹರಿಹರ ಘಟಕ ಅಧ್ಯಕ್ಷ ಶಿವಾನಂದಪ್ಪ, ಜಗಳೂರು ಘಟಕ ಅಧ್ಯಕ್ಷ ಅಜ್ಜಯ ನಾಡಿಗ್‌, ಜಿಲ್ಲಾ ಯುವ, ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.