ಮತದಾನ ಜಾಗೃತಿ ಮೂಡಿಸಲು ಕಾರ್ಯಕ್ರಮ ರೂಪಿಸಿ: ತುಷಾರ್‌

| Published : Feb 18 2024, 01:35 AM IST

ಸಾರಾಂಶ

ಲೋಕಸಭಾ ಚುನಾವಣೆ ಇರುವುದರಿಂದ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕಾರ್ಯಕ್ರಮ ರೂಪಿಸುವುದಕ್ಕೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲೋಕಸಭಾ ಚುನಾವಣೆ ಇರುವುದರಿಂದ ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಕುರಿತು ಕಾರ್ಯಕ್ರಮ ರೂಪಿಸುವುದಕ್ಕೆ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಕುರಿತು ಅಧಿಕಾರಿಗಳೊಂದಿಗೆ ಶನಿವಾರ ಸಭೆ ನಡೆಸಿ ಮಾತನಾಡಿದ ಅವರು, ವಿಶೇಷವಾಗಿ ಹಿರಿಯ ನಾಗರಿಕರು, ಅಂಗವಿಕಲರು, ಲೈಂಗಿಕ ಅಲ್ಪಸಂಖ್ಯಾತರು ಹಾಗೂ ವಲಸೆ ಕಾರ್ಮಿಕರು ಮತದಾರ ಪಟ್ಟಿಗೆ ಹೆಸರು ಸೇರ್ಪಡೆಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ನಗರದ ಎಲ್ಲ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಾಸರಿ ಮತದಾನಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳನ್ನು ಗುರುತಿಸಿ ಆ ಭಾಗದಲ್ಲಿ ಸೂಕ್ತ ಯೋಜನೆಗಳನ್ನು ರೂಪಿಸಿ ಜಾಗೃತಿ ಮೂಡಿಸಿ ಮತದಾನದ ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ಸರಾಸರಿ ಮತದಾನಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳಲ್ಲಿ ಹೆಚ್ಚು ಅಪಾರ್ಟ್ಮೆಂಟ್ ಪ್ರದೇಶವಾಗಿದ್ದರೆ, ಅದಕ್ಕೆ ಸಂಬಂಧಪಟ್ಟ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪ್ರತಿನಿಧಿಗಳನ್ನು ಭೇಟಿಯಾಗಿ ಅವರಲ್ಲಿ ಅರಿವು ಮೂಡಿಸಿ ಮತದಾರ ಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಪ್ರೇರೇಪಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಚುನಾವಣಾ ವಿಶೇಷ ಆಯುಕ್ತ ಸೆಲ್ವಮಣಿ, ಸ್ವೀಪ್ ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಕಾಂತರಾಜು ಇದ್ದರು.