ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯಾದ್ಯಂತ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಿ, ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಅದಕ್ಕೆ ಪಕ್ಷದ ಎಲ್ಲ ಕಾರ್ಯಕರ್ತರ ಸಹಕಾರ ಅಗತ್ಯವಾಗಿ ಬೇಕು ಎಂದು ಬಿಜೆಪಿ ಹೊಸ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಡಾ.ಶಿವರಾಜ ಪಾಟೀಲ್ ಹೇಳಿದರು.ಸ್ಥಳೀಯ ಆಕಾಶವಾಣಿ ಕೇಂದ್ರದ ಸಮೀಪದಲ್ಲಿರುವ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಶನಿವಾರ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿರುವ ಸಮಯದಲ್ಲಿ ಬಿ.ವೈ ವಿಜಯೇಂದ್ರ ಅವರು ನೂತನ ರಾಜ್ಯಾಧ್ಯಕ್ಷರಾಗಿ ಅಧಿಕಾರಿ ವಹಿಸಿಕೊಳ್ಳುತ್ತಲೇ ಪಕ್ಷ ಸಂಘಟನೆಗೆ ಬಲ ಬಂದಿದೆ. ಲೋಕಸಭಾ ಚುನಾವಣೆ ಸನಿಹವಿದ್ದು ನನಗೆ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ್ದರಿಂದ ಜವಾಬ್ದಾರಿ ಹೆಚ್ಚಾಗಿದೆ. ನಾನು ಅಧಿಕಾರದ ಹಾಗೂ ಸ್ಥಾನಮಾನದ ಹಿಂದೆ ಹೋದವನಲ್ಲ. ಕಾರ್ಯಕರ್ತರ ಪಡೆಯೊಂದಿಗೆ ಕೆಲಸ ಮಾಡಿ ರಾಯಚೂರು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಿ ಬಿಜೆಪಿಯ ಧ್ವಜಹಾರಿಸುವೆ ಎಂದರು.
ಸಂಸದ ರಾಜಾ ಅಮರೇಶ್ವರ ಮಾತನಾಡಿ, ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮತ್ತೊಮ್ಮೆ ಮೋದಿಯವರಿಗೆ ಅಧಿಕಾರ ಸಿಕ್ಕರೆ ದೇಶ ಬದಲಾಗಲಿದೆ. ಪಕ್ಷಕ್ಕೆ ದುಡಿದವರಿಗೆ ಸ್ಥಾನಮಾನ ಸಿಗುತ್ತದೆ. ಸಿಗದವರು ನಿರಾಸೆಯಾಗದೆ ಕೆಲಸ ಮಾಡಬೇಕು. ನನಗೆ ಸಿಕ್ಕ ಅವಕಾಶ ನಿಭಾಯಿಸಿದ್ದೇನೆ. ಈಗ ನನ್ನ ಸ್ಥಾನ ಬೇರೆಯವರಿಗೆ ನೀಡಲು ಪಕ್ಷ ಮುಂದಾದರೂ ನಾನು ಬೆಂಬಲಿಸುವೆ. ನಾನು ಅಧಿಕಾರದ ಹಿಂದೆ ಬಿದ್ದಲ್ಲಿ ಪಕ್ಷ ನೀಡಿದ ಜವಾಬ್ದಾರಿ ಚಾಚು ತಪ್ಪದೇ ಮಾಡುವೆ ಎಂದು ಹೇಳಿದರು.ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಶಂಕ್ರಪ್ಪ, ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ಎ.ಪಾಪಾರೆಡ್ಡಿ, ಬಸವನಗೌಡ ಬ್ಯಾಗವಾಟ್, ಗಂಗಾಧರ ನಾಯಕ, ಕೆ.ಕರಿಯಪ್ಪ, ಮುಖಂಡರಾದ ರವೀಂದ್ರ ಜಲ್ದಾರ್,ಶರಣಪ್ಪಗೌಡ ಜಾಡಲದಿನ್ನಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.ಅಧಿಕಾರ ಸ್ವೀಕಾರ
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಮೋರ್ಚಾದ ನೂತನ ಅಧ್ಯಕ್ಷರಾಗಿ ಶಾಸಕ ಡಾ.ಶಿವರಾಜ ಪಾಟೀಲ್ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾಧ್ಯಕ್ಷ ರಮಾನಂದ ಯಾದವ್ ಹೊಸ ಅಧ್ಯಕ್ಷರಿಗೆ ಶಾಲು ಹೊದಿಸಿ, ಪಕ್ಷದ ಧ್ವಜ ನೀಡಿ ಅಧಿಕಾರವನ್ನು ಹಸ್ತಾಂತರಿಸಿದರು.