ದೀರ್ಘ ಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ಬಾಕಿ ಬಿಲ್ ವಸೂಲಿಗಾಗಿ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ವ್ಯವಸ್ಥೆ ಜಾರಿಗೊಳಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರು : ದೀರ್ಘ ಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಂದ ಬಾಕಿ ಬಿಲ್ ವಸೂಲಿಗಾಗಿ ಜಲಮಂಡಳಿಯು ಏಪ್ರಿಲ್ ತಿಂಗಳಿನಿಂದ ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ವ್ಯವಸ್ಥೆ ಜಾರಿಗೊಳಿಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿನ ನಾಗರಿಕರಿಗೆ ಜಲಮಂಡಳಿ ಮೂಲಕ ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಾವಧಿಯಿಂದ ನೀರಿನ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿರುವವರಿಗೆ ಒಟಿಎಸ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ಏಪ್ರಿಲ್‌ನಿಂದ ಜೂನ್‌ವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದ್ದು, ಬಾಕಿ ಬಿಲ್‌ನ್ನು ಒಮ್ಮೆಲೇ ಪಾವತಿಸುವವರಿಗೆ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಜಲಮಂಡಳಿ ವ್ಯಾಪ್ತಿಯಲ್ಲಿ 11 ಲಕ್ಷ ನೀರಿನ ಸಂಪರ್ಕ
ಜಲಮಂಡಳಿ ವ್ಯಾಪ್ತಿಯಲ್ಲಿ 11 ಲಕ್ಷ ನೀರಿನ ಸಂಪರ್ಕಗಳಿವೆ. ಅವುಗಳಲ್ಲಿ 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯಕ್ಕೆ 851.33 ಕೋಟಿ ರು. ಬಾಕಿಯಿದ್ದು, ಅದರಲ್ಲಿ 311.90 ಕೋಟಿ ರು. ಬಡ್ಡಿ ಮೊತ್ತವಾಗಿದೆ. ಗ್ರಾಹಕರು ಒಮ್ಮೆಲೆ ತಮ್ಮ ಬಾಕಿ ಮೊತ್ತ ಪಾವತಿಸಿದರೆ ಅಷ್ಟು ದೊಡ್ಡ ಮೊತ್ತದ ಬಡ್ಡಿ ಮನ್ನಾ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಲ್ಲ ಗ್ರಾಹಕರಿಗೂ ಆಫರ್ ಅನ್ವಯ
ಈ ವ್ಯವಸ್ಥೆಯು ಗೃಹ, ವಾಣಿಜ್ಯ, ಕೈಗಾರಿಕೆ ಸೇರಿ ಜಲಮಂಡಳಿಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ವ್ಯವಸ್ಥೆ ಕಲ್ಪಿಸಲಾಗುವುದು. ಬಾಕಿದಾರರಿಗೆ ಜಲಮಂಡಳಿಯಿಂದ ಅವರ ಆರ್‌ಆರ್ ಸಂಖ್ಯೆ, ಅಸಲು ಮತ್ತು ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತವನ್ನು ವಿವರಿಸಲಾಗುತ್ತದೆ. ಅದನ್ನಾಧರಿಸಿ ಗ್ರಾಹಕರು ಏಪ್ರಿಲ್ 1ರಿಂದ ಜಲಮಂಡಳಿ ಕಿಯಾಸ್ಕ್, ಆನ್‌ಲೈನ್ ಪೋರ್ಟಲ್ ಮತ್ತು ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಹಣ ಪಾವತಿಸಬಹುದಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

