ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕನ್ನಡ ಚಲನಚಿತ್ರಗಳ ಬಿಡುಗಡೆಗೆ ಶೀಘ್ರ ಓಟಿಟಿ ಪ್ರಾರಂಭ ಮಾಡಲಾಗುವುದೆಂದು ಕಂಠೀರವ ಸ್ಟುಡಿಯೋಸ್ ಅಧ್ಯಕ್ಷ ಮಹಬೂಬ್ ಪಾಷ ಹೇಳಿದರು.ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೆಜಾನ್, ಜೀ5, ಜಿಯೋ ಹಾಟ್‍ಸ್ಟಾರ್, ನೆಟ್‍ಫ್ಲಿಕ್ಸ್ ಸೇರಿದಂತೆ ಖಾಸಗಿ ಓಟಿಟಿಗಳಲ್ಲಿ ಕನ್ನಡದ ಆಯ್ದ ಚಲನಚಿತ್ರಗಳಿಗೆ ಮಾತ್ರ ವೇದಿಕೆ ದೊರಕುತ್ತಿದೆ. ಇದರಿಂದಾಗಿ ಸುಮಾರು 4 ಸಾವಿರಕ್ಕೂ ಅಧಿಕ ಕನ್ನಡ ಸಿನಿಮಾಗಳು, ವಿತರಕರು ಹಾಗೂ ಚಿತ್ರ ಮಂದಿರಗಳ ಕೊರತೆಯಿಂದ ಬಿಡುಗಡೆ ಭಾಗ್ಯವನ್ನೇ ಕಂಡಿಲ್ಲ ಎಂದರು.
ಚಿತ್ರಮಂದಿರದ ಕೊರತೆಯಿಂದಾಗಿ ನಿರ್ಮಾಕರು, ಕಲಾವಿದರು, ತಂತ್ರಜ್ಞರು ಸಂಕಷ್ಟದಲ್ಲಿ ಇದ್ದಾರೆ. ಇಂಥ ಸಿನಿಮಾಗಳಿಗೆ ಕೇವಲ ನಮ್ಮ ರಾಜ್ಯ, ದೇಶ ಮಾತ್ರವಲ್ಲ, ಜಾಗತಿಕವಾಗಿ ವೇದಿಕೆ ಕಲ್ಪಿಸಿ ಕೊಡಲು ಸರ್ಕಾರದಿಂದಲೇ ಮುಂಬರುವ ಹೊಸ ವರ್ಷದಲ್ಲಿ ಓಟಿಟಿ ಪ್ರಾರಂಭಿಸಲಾಗುತ್ತಿದೆ. ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಉನ್ನತ ಮಟ್ಟದ ಸಮಿತಿ ಸಹ ರಚಿಸಲಾಗಿದೆ ಎಂದು ಅಧ್ಯಕ್ಷ ಮೆಹಬೂಬ್ ಪಾಷಾ ತಿಳಿಸಿದರು.ಓಟಿಟಿ ಸ್ಥಾಪನೆಗೆ ಸಂಬಂಧ ಈಗಾಗಲೆ ಸರ್ಕಾರ ಬಜೆಟ್‍ನಲ್ಲಿಯೇ ಘೋಷಿಸಿದೆ. ತಾಂತ್ರಿಕ ಸಿದ್ದತೆಗಳನ್ನು ಕೂಡ ಕೈಗೊಳ್ಳಲಾಗಿದೆ. ಹಲವು ಬಾರಿ ಉನ್ನತ ಮಟ್ಟದ ಸಭೆಗಳು ನಡೆದಿವೆ. ಓಟಿಟಿ ಸ್ಥಾಪನೆಯಿಂದ ಕನ್ನಡ ಸಿನಿಮಾಗಳ ಜೊತೆಗೆ ಧಾರವಾಹಿ, ಜಾನಪದ ಕಲೆ ಹಾಗೂ ಸ್ಥಳೀಯ ಮತ್ತು ಬುಡಕಟ್ಟು ಸಂಸ್ಕೃತಿಗಳಿಗೂ ಜಾಗತಿಕ ಮಟ್ಟದಲ್ಲಿ ವೇದಿಕೆ ದೊರಕಲಿದೆ. ವಿವಿಧ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರಗಳ ವೀಕ್ಷಣೆಗೆ ಹೆಚ್ಚಿನ ದರ ವಿಧಿಸಿದರೆ, ರಾಜ್ಯ ಸರ್ಕಾರ ಪ್ರಾರಂಭಿಸಿವ ಒಟಿಟಿ ವೇದಿಕೆಯಲ್ಲಿ ಅಲ್ಪ ಮೊತ್ತ ಪಾವತಿಸಿ, ವಿಶ್ವದ ಎಲ್ಲೆಡೆ ಇರುವ ಕನ್ನಡಿಗರು ಚಂದಾದರರಾಗಿ ಕನ್ನಡ ಸಿನಿಮಾ ಹಾಗೂ ಜಾನಪದ ಕಲೆಗಳನ್ನು ವೀಕ್ಷಿಸಬಹುದಾಗಿದೆ. ಇದರಿಂದ ಸಂಕಷ್ಟದಲ್ಲಿರುವ ನಿರ್ಮಾಪಕರಿಗೆ, ನಿರ್ದೇಶಕರಿಗೆ, ನಟ ನಟಿಯರು, ಕಲಾವಿದರು ತಂತ್ರಜ್ಞರಿಗೆ ಇದರಿಂದ ಉಪಯುಕ್ತವಾಗಲಿದೆ. ಜೊತೆಗೆ ಹೊಸ ಪ್ರತಿಭೆಗಳಿಗೂ ಹೆಚ್ಚಿನ ಅವಕಾಶ ದೊರಕಲಿದೆ. ವೀಕ್ಷಣೆಯ ಆಧಾರದಲ್ಲಿ ನಿರ್ಮಾಪಕರೊಂದಿಗೆ ಲಾಭಾಂಶವನ್ನು ಹಂಚಿಕೊಳ್ಳಲಾಗುವುದು ಎಂದು ಅಧ್ಯಕ್ಷ ಮೆಹಬೂಬ್ ಪಾಷಾ ಅವರು ಸ್ಪಷ್ಟಪಡಿಸಿದರು.
ಕಂಠೀರವ ಸ್ಟುಡಿಯೋಸ್ ಸ್ಥಾಪನೆಯಾಗಿ 60 ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ವಜ್ರ ಮಹೋತ್ಸವ ಆಚರಣೆ ಮಾಡಲು ಉದ್ದೇಶಿಸಲಾಗಿದೆ. ಈ ಹಿನ್ನಲೆಯಲ್ಲಿ ಸಿನಿಮಾ ನಿರ್ಮಾಣ, ಸ್ಟುಡಿಯೋ ಕುರಿತು ವಿಚಾರ ಸಂಕಿರಣ, ಕಂಠೀರವ ಸ್ಟುಡಿಯೋಸ್ ನಿರ್ಮಾಣದ ಸ್ಥಾಪಕ ಟಿ.ಎಸ್.ಕರಿಬಸವಯ್ಯ ಪುತ್ಥಳಿ ನಿರ್ಮಾಣ, ಮಾಜಿ ಮುಖ್ಯಮಂತ್ರಿ ದಿ. ಎಸ್.ನಿಜಲಿಂಗಪ್ಪ ಚಲನಚಿತ್ರ ನಿರ್ಮಾಣ ಮಾಡುವುದು ಹಾಗೂ ಸಂಗೀತ ಸಂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದರು.ಕಂಠೀರವ ಸ್ಟುಡಿಯೋಸ್ ವಜ್ರ ಮಹೋತ್ಸವ ಆಚರಣೆಗಾಗಿ ಸರ್ಕಾರದಿಂದ ಈಗಾಗಲೇ ರು. ಒಂದು ಕೋಟಿ ಅನುದಾನ ಮಂಜೂರಾಗಿದ್ದು, ಇನ್ನೂ ಹೆಚ್ಚಿನ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲಾಗಿದೆ. ವಜ್ರ ಮಹೋತ್ಸವ ಆಚರಣೆಯನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋ ಅಥವಾ ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ಆಚರಿಸಲು ನಿರ್ಧರಿಸಲಾಗಿದ್ದು, ಸ್ಥಳದ ನಿರ್ಧಾರ ಇನ್ನೂ ಅಂತಿಮವಾಗಿಲ್ಲ ಎಂದು ಹೇಳಿದರು.
1966ರಲ್ಲಿ ಕಂಠೀರವ ಸ್ಟುಡಿಯೋಸ್ ಅನ್ನು ಗುಬ್ಬಿ ವೀರಣ್ಣ, ಟಿ.ಎಸ್.ಕರಿಬಸಯ್ಯ ಮತ್ತಿತರರು ಸೇರಿದಂತೆ ಬೆಂಗಳೂರಿನಲ್ಲಿ ಜಮೀನು ಖರೀದಿ ಮಾಡಿ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡಿದರು. ಇದಕ್ಕೂ ಪೂರ್ವದಲ್ಲಿ ಕನ್ನಡ ಚಲನಚಿತ್ರ ನಿರ್ಮಾಣ ಕುರಿತ ಕೆಲಸ ಕಾರ್ಯಗಳಿಗೆ ಮದ್ರಾಸ್‍ಗೆ ಹೋಗಬೇಕಿತ್ತು. ಹೀಗಾಗಿ ಇಲ್ಲಿಯೇ ಚಲನಚಿತ್ರಗಳ ನಿರ್ಮಾಣಕ್ಕೆ ಸಂಬಧಿಸಿದ ಕೆಲಸಗಳು ಆಗಬೇಕು ಎನ್ನುವ ಕಾರಣಕ್ಕಾಗಿ, ಮೊಟ್ಟ ಮೊದಲನೆಯ ಕಂಠೀರವ ಸ್ಟುಡಿಯೋಸ್‍ಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ರು.5 ಲಕ್ಷ ಅನುದಾನ ನೀಡಿ, ಸ್ಟುಡಿಯೋ ಅಭಿವೃದ್ಧಿಗೆ ಶ್ರಮಿಸುವ ಮೂಲಕ ಪ್ರೋತ್ಸಾಹ ನೀಡಿದರು. ಬಳಿಕ ಕಂಠೀರವ ಸ್ಟುಡಿಯೋವನ್ನು ನಡೆಸಲು ಸಾಧ್ಯವಾಗದೇ 1974 ರಲ್ಲಿ ಸರ್ಕಾರಕ್ಕೆ ವಶಕ್ಕೆ ನೀಡಿದರು. ಆಗಿನಿಂದಲೂ ಸರ್ಕಾರವೇ ಕಂಠೀರವ ಸ್ಟುಡಿಯೋ ನಿರ್ವಹಣೆ ಮಾಡುತ್ತಿದೆ ಎಂದು ಮೆಹಬೂಬ ಪಾಷಾ ಹೇಳಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಮುಖಂಡ ಲಕ್ಷ್ಮಿಕಾಂತ್ ಇದ್ದರು.)
)
;Resize=(128,128))
;Resize=(128,128))