ಕೃತಿ ಚಿಕಿತ್ಸೆಯು ಭಾರತೀಯ ಸಂಸ್ಕೃತಿಯ ಮೂಲಾಧಾರಗಳ ಮೇಲೆ ನಿಂತಿರುವ ಔಷಧ ರಹಿತ ಚಿಕಿತ್ಸಾ ಪದ್ಧತಿಯಾಗಿದೆ

ಮರಿಯಮ್ಮನಹಳ್ಳಿ: ಪ್ರಕೃತಿ ಚಿಕಿತ್ಸೆಯು ಭಾರತೀಯ ಸಂಸ್ಕೃತಿಯ ಮೂಲಾಧಾರಗಳ ಮೇಲೆ ನಿಂತಿರುವ ಔಷಧ ರಹಿತ ಚಿಕಿತ್ಸಾ ಪದ್ಧತಿಯಾಗಿದೆ ಎಂದು ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಡಾ. ಪವನ್ ಹೇಳಿದರು.

ಇಲ್ಲಿನ ಅನ್ನದಾನೀಶ್ವರ ಮಠದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಆಯುಷ್‌ ಇಲಾಖೆ ಆಯುಷ್ ಮಂತ್ರಾಲಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ, ಬೆಂಗಳೂರು, ಕರ್ನಾಟಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಭಾರತೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದವೀಧರರ ಸಂಘ ಸಂಯುಕ್ತಾಶ್ರಯದಲ್ಲಿ 8ನೇ ರಾಷ್ಟ್ರೀಯ ಪ್ರಕೃತಿ ಚಿಕಿತ್ಸಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶಿಯ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಯಾದ ಆಯುಷ್ ನಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ. ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿ ಯಾವುದೇ ರಾಸಾಯನಿಕ ಔಷಧಿಯನ್ನು ಉಪಯೋಗಿಸದೆ, ದೇಹದಲ್ಲಿರುವ ಜೀವ ಚೈತನ್ಯವನ್ನು ವಿವಿಧ ರೀತಿಯ ನೈಸರ್ಗಿಕ ಚಿಕಿತ್ಸೆಗಳ ಮೂಲಕ ಉತ್ತೇಜನಗೊಳಿಸಲಾಗುತ್ತದೆ ಎಂದರು.

ಶರೀರದಲ್ಲಿರುವ ಪಂಚಮಹಾಭೂತಗಳಾದ ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶಗಳಲ್ಲಿ ಉಂಟಾಗಿರುವ ಅಸಮತೋಲನವೇ ಖಾಯಿಲೆಗೆ ಕಾರಣವಾಗುತ್ತದೆ. ಈ ಅಸಮತೋಲನವನ್ನು ನಿವಾರಿಸಲು, ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಪಂಚ ಮಹಾಭೂತಗಳನ್ನೇ ಉಪಯೋಗಿಸಿ ವಿವಿಧ ಚಿಕಿತ್ಸೆಗಳ ಮೂಲಕ ದೇಹಕ್ಕೆ ಚಿಕಿತ್ಸೆ ನೀಡಲಾಗುವ ಈ ಪದ್ದತಿ ಇಂದು ಹೊರದೇಶಗಳಲ್ಲಿ ಮುನ್ನೆಲೆಗೆ ಬಂದಿದೆ ಎಂದರು.

ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು, ಈ ಪದ್ಧತಿಯನ್ನು ಅನುಸರಿಸಿ ಯಾವುದೇ ಮದ್ದು ಮಾತ್ರೆಗಳಿಲ್ಲದೇ ಆರೋಗ್ಯವಾಗಿ ಬದುಕುತ್ತಿದ್ದರು. ದೇಹವು ತಾನೇ ತನ್ನನ್ನು ಗುಣಪಡಿಸಿಕೊಳ್ಳುತ್ತದೆ. ಪ್ರಕೃತಿಯ ಸಹಾಯದಿಂದ ದೇಹದ ಒಳಗಿನ ಶಕ್ತಿಯೇ ರೋಗವನ್ನು ನಿವಾರಿಸಿ, ಆರೋಗ್ಯವನ್ನು ಪುನಃಸ್ಥಾಪಿಸುತ್ತದೆ ಎಂದರು.

ಈ ಸಂಧರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ, ಡಾ. ನವೀನ್, ಡಾ. ಮುನೀರ್, ಎಂ. ರಾಘವೇಂದ್ರ, ಕೆ.ಎಂ. ಬಸವರಾಜಯ್ಯಸ್ವಾಮಿ, ಕೊಟ್ಗಿ ಚಂದ್ರಶೇಖರ್, ಬಿ. ರಮೇಶ್, ಸುಭಾನ್, ಉಮೇಶ್ ಕಾಸ್ಲಿ ಸೇರಿದಂತೆ ಇತರರಿದ್ದರು.