‘ಸತತ ಪ್ರಯತ್ನದಿಂದ ಗೆಲುವು ಸಿಗಲಿದೆ. ಮುಂದಿನ ಗೆಲುವು ನಮ್ಮದೇ. ಪ್ರಯತ್ನ ಮಾಡ್ತಿದ್ದಿವಿ ಎಂದ ಮೇಲೆ ಒಂದಲ್ಲಾ ಒಂದು ದಿನ ಗೆಲ್ಲಲೇಬೇಕು’ ಎಂದು ಮಾಜಿ ಸಂಸದ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ, ಡಿ.ಕೆ.ಸುರೇಶ್ ಹೇಳಿದ್ದಾರೆ.

 ಕುಣಿಗಲ್ : ‘ಸತತ ಪ್ರಯತ್ನದಿಂದ ಗೆಲುವು ಸಿಗಲಿದೆ. ಮುಂದಿನ ಗೆಲುವು ನಮ್ಮದೇ. ಪ್ರಯತ್ನ ಮಾಡ್ತಿದ್ದಿವಿ ಎಂದ ಮೇಲೆ ಒಂದಲ್ಲಾ ಒಂದು ದಿನ ಗೆಲ್ಲಲೇಬೇಕು’ ಎಂದು ಮಾಜಿ ಸಂಸದ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಹೋದರ, ಡಿ.ಕೆ.ಸುರೇಶ್ ಹೇಳಿದ್ದಾರೆ.

ಗೆಲುವಿನ ಮಾತು ಭಾರಿ ಚರ್ಚೆಗೆ ಗ್ರಾಸ

ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಗಾದಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವೆ ಕಾದಾಟ ನಡೆಯುತ್ತಿರುವ ಬೆನ್ನಲ್ಲೆ, ಮಾಜಿ ಸಂಸದ ಡಿ.ಕೆ.ಸುರೇಶ್ ಆಡಿರುವ ಈ ಗೆಲುವಿನ ಮಾತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಕೆಂಪನಹಳ್ಳಿಯಲ್ಲಿ ಭಾನುವಾರ ‘ಕುಣಿಗಲ್ ಉತ್ಸವ’ ಪ್ರಯುಕ್ತ ನಡೆದ ಕ್ರಿಕೆಟ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು. ಶಾಸಕ ಡಾ.ರಂಗನಾಥ ಅವರ ಬೌಲಿಂಗ್ ಗೆ ಬೌಂಡರಿ ಬಾರಿಸುವ ಮೂಲಕ ಡಿ.ಕೆ.ಸುರೇಶ್ ಅವರು ಪಂದ್ಯಾವಳಿಗೆ ಚಾಲನೆ ನೀಡಿದರು.

ಎಲ್ಲರೂ ಒಂದಲ್ಲ ಒಂದು ದಿನ ಗೆಲ್ಲಲೇಬೇಕು

ಬಳಿಕ, ವೇದಿಕೆಯ ಭಾಷಣದಲ್ಲಿ ಗೆಲುವಿನ ಮಾತನಾಡಿದ ಡಿ.ಕೆ,ಸುರೇಶ್, ‘ಡಿ.ಕೆ.ಶಿವಕುಮಾರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಕ್ರಿಕೆಟ್‌ ಪಂದ್ಯಾವಳಿ ಇದು. ಎಲ್ಲರೂ ಒಂದಲ್ಲ ಒಂದು ದಿನ ಗೆಲ್ಲಲೇಬೇಕು. ಪ್ರಯತ್ನ ಮಾಡ್ತಾ ಇದ್ದೀವಿ...ಗೆಲುವು ಸಿಕ್ಕೆ ಸಿಗುತ್ತದೆ...ಒಬ್ಬರು ಗೆಲ್ಲಲೇಬೇಕು, ಇನ್ನೊಬ್ಬರು ಸೋಲಲೇಬೇಕು. ಎಲ್ಲಾ ಚಟುವಟಿಕೆಯಲ್ಲೂ ಸೋಲು, ಗೆಲುವು ಇರಲೇಬೇಕು. 

ರಾಜಕೀಯದಲ್ಲೂ ಸೋಲು-ಗೆಲುವು ಇದ್ದದ್ದೆ. ಗೆದ್ದಿದ್ದೇವೆ ಎಂದು ಮೇಲಕ್ಕೆ ಹೋಗೋಕೆ ಆಗಲ್ಲ, ಸೋತಿದ್ದೇವೆ ಎಂದು ಪ್ರಯತ್ನ ಬಿಡೋಕೂ ಆಗಲ್ಲ. ಸೋಲು-ಗೆಲುವು ಒಂದು ಭಾಗವಷ್ಟೇ. ಎಲ್ಲವನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು. ಗೆಲುವಿಗಾಗಿ ಕ್ರೀಡಾಪಟುಗಳ ನಿರಂತರ ಪ್ರಯತ್ನದಂತೆ, ನಿಮ್ಮ ಆಶೀರ್ವಾದದಿಂದ ನನ್ನ ಪ್ರಯತ್ನವೂ ನಿರಂತರವಾಗಿ ಇರುತ್ತದೆ’ ಎಂದರು. ಡಿ.ಕೆ.ಸುರೇಶ್ ಅವರ ಈ ಮಾರ್ಮಿಕ ಮಾತಿಗೆ ವೇದಿಕೆ ಮೇಲಿದ್ದ ಗಣ್ಯರು ನಗುವಿನ ಅಲೆ ಬೀರಿದರು.