ನಮ್ಮ ಆಹಾರ, ಜೀವನ ಕ್ರಮವೇ ಅನಾರೋಗ್ಯಕ್ಕೆ ಕಾರಣ: ಲಯನ್ಸ್ ಅಧ್ಯಕ್ಷ ಡಾ. ಚಂದ್ರಮೌಳಿ

| Published : Jul 30 2024, 12:35 AM IST

ನಮ್ಮ ಆಹಾರ, ಜೀವನ ಕ್ರಮವೇ ಅನಾರೋಗ್ಯಕ್ಕೆ ಕಾರಣ: ಲಯನ್ಸ್ ಅಧ್ಯಕ್ಷ ಡಾ. ಚಂದ್ರಮೌಳಿ
Share this Article
  • FB
  • TW
  • Linkdin
  • Email

ಸಾರಾಂಶ

ಲಯನ್ಸ್ ಸಂಸ್ಥೆಯಿಂದ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಅದರಲ್ಲೂ ಬಹುಮುಖ್ಯವಾಗಿ ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ, ಮಕ್ಕಳ ತಪಾಸಣೆ, ಜನರಲ್ ಚೆಕಪ್ ಮತ್ತು ಪುಟ್ ಪಲ್ಸ್ ಥೆರಪಿ ತಪಾಸಣೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದರಿಂದ ಸಾಕಷ್ಟು ಜನರು ಕೂಡ ಅನುಕೂಲ ಪಡೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೇಲೂರು

ಇತ್ತೀಚೆಗೆ ನಾವು ಹಲವು ಕಾಯಿಲೆಗಳಿಗೆ ತುತ್ತಾಗಿ ಅನಾರೋಗ್ಯದಿಂದ ಬಳಲುತ್ತಿದ್ದೇವೆ, ಇದಕ್ಕೆ ಪ್ರಮುಖವಾಗಿ ನಮ್ಮ ಆಹಾರ, ಜೀವನ ಕ್ರಮವೇ ಅನಾರೋಗ್ಯಕ್ಕೆ ಕಾರಣವಾಗಿದೆ ಎಂದು ಲಯನ್ಸ್ ಅಧ್ಯಕ್ಷ ಡಾ. ಚಂದ್ರಮೌಳಿ ತಿಳಿಸಿದರು.

ಲಯನ್ಸ್ ಕ್ಲಬ್ ವತಿಯಿಂದ ಸರ್ಕಾರಿ ಆಸ್ಪತ್ರೆ ಬೇಲೂರು ಮತ್ತು ಮ್ಯಾನ್ ಕೈಂಡ್ ಫಾರ್ಮ್ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಯಮಸಂಧಿ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು , ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸಮಸ್ಯೆ ಎಲ್ಲರಲ್ಲೂ ಕಾಡುತ್ತಿದೆ. ಅದಕ್ಕೆ ಕಾರಣ ಸರಿಯಾದ ಆಹಾರ ಪದ್ಧತಿ ಇಲ್ಲದಿರುವುದು ,ದೈಹಿಕ ಚಟುವಟಿಕೆ, ವ್ಯಾಯಾಮವನ್ನು ಮಾಡದೇ ಇರುವುದು ಹಾಗೂ ಜಂಕ್ ಫುಡ್ ಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತಿದೆ.

ಸರಿಯಾದ ಚಿಕಿತ್ಸೆ ವಿಧಾನವನ್ನು ಅನುಸರಿಸುವುದರ ಮೂಲಕ ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದು. ಕೆಲವರಿಗೆ ತಮ್ಮ ದೇಹದಲ್ಲಿ ಇರುವ ಕಾಯಿಲೆಗಳು ಗೊತ್ತೇ ಇರುವುದಿಲ್ಲ. ಆ ಸಮಯದಲ್ಲಿ ಇಂತಹ ಶಿಬಿರಗಳಲ್ಲಿ ಭಾವಹಿಸಿ, ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ನಿಮ್ಮಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದರು.

ಲಯನ್ಸ್ ಸಂಸ್ಥೆಯಿಂದ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದ್ದು, ಅದರಲ್ಲೂ ಬಹುಮುಖ್ಯವಾಗಿ ಕಣ್ಣಿನ ತಪಾಸಣೆ, ಮಧುಮೇಹ ಹಾಗೂ ರಕ್ತದೊತ್ತಡ, ಮಕ್ಕಳ ತಪಾಸಣೆ, ಜನರಲ್ ಚೆಕಪ್ ಮತ್ತು ಪುಟ್ ಪಲ್ಸ್ ಥೆರಪಿ ತಪಾಸಣೆಯನ್ನು ನಡೆಸಿಕೊಂಡು ಬರುತ್ತಿದ್ದು, ಇದರಿಂದ ಸಾಕಷ್ಟು ಜನರು ಕೂಡ ಅನುಕೂಲ ಪಡೆದುಕೊಂಡಿದ್ದಾರೆ.

ತಾಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ ಅಲ್ಲಿ ಪ್ರಖ್ಯಾತ ವೈದ್ಯರನ್ನು ಕರೆದುಕೊಂಡು ನಿಮ್ಮ ಬಳಿಯೇ ಬಂದು ಉಚಿತ ಅರೋಗ್ಯ ತಪಾಸಣೆ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ನಮ್ಮ ಲಯನ್ಸ್ ಸೇವಾ ಸಂಸ್ಥೆಯು ನಿಮ್ಮ ಜೊತೆ ಇನ್ನಷ್ಟು ಹತ್ತಿರವಾಗಲಿದ್ದು, ತಾಲೂಕು ವೈದ್ಯಾಧಿಕಾರಿಗಳು ನಮ್ಮ ಜೊತೆ ಕೈಜೋಡಿಸಿದ್ದು ನಮಗೆ ಇನ್ನಷ್ಟು ಸಹಕಾರಿಯಾಗಲಿದೆ ಎಂದರು.

ತಾಲೂಕು ವೈದ್ಯಾಧಿಕಾರಿ ಡಾಕ್ಟರ್ ವಿಜಯ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡೆಂಘೀ ಜ್ವರ ಎಲ್ಲರಲ್ಲಿ ಹೆಚ್ಚಾಗಿ ಕಾಣಿಸುತ್ತಿರುವುದು ಆತಂಕದ ವಿಷಯವಾಗಿದ್ದು, ನಾವು ಜಾಗರೂಕತೆಯಿಂದ ಇರಬೇಕು. ಮನೆ ಅಕ್ಕಪಕ್ಕದಲ್ಲಿ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು.

ಸೊಳ್ಳೆಗಳು ಬರದಂತೆ ನೋಡಿಕೊಳ್ಳಬೇಕು. ಚರಂಡಿಯಲ್ಲಿ ನೀರು ಕಟ್ಟಿಕೊಳ್ಳದಂತೆ ನೋಡಬೇಕು. ಎಲ್ಲೆಂದರಲ್ಲಿ ಕಸಕಡ್ಡಿಗಳನ್ನು ಹಾಕಬಾರದು. ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದಾಗ ತಕ್ಷಣ ಸ್ಥಳೀಯ ಆಸ್ಪತ್ರೆ ಅಥವಾ ಸರ್ಕಾರಿ ಆಸ್ಪತ್ರೆಗೆ ಬಂದು ಸೂಕ್ತ ಚಿಕಿತ್ಸೆ ಕೊಡಿಸಿಕೊಳ್ಳಬೇಕು.

ಲಯನ್ಸ್ ಸಂಸ್ಥೆಯವರು ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾಡುತ್ತಿದ್ದು, ನಾವು ಕೂಡ ಇವರ ಜೊತೆ ಕೈಜೋಡಿಸಿದ್ದೇವೆ. ಕೇವಲ ಪಟ್ಟಣವಲ್ಲದೇ ಗ್ರಾಮಾಂತರ ಪ್ರದೇಶಗಳಿಗೂ ಕೂಡ ಇವರು ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಿದ್ದು ಶ್ಲಾಘನೀಯ. ಇವರ ಸೇವೆ ನಿತಂತರವಾಗಿರಲಿ ಹಾಗೂ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಉಚಿತ ಆರೋಗ್ಯ ಶಿಬಿರದಲ್ಲಿ ಸುಮಾರು ೧೨೦ಕ್ಕೂ ಹೆಚ್ಚು ಜನ ತಮ್ಮ ಆರೋಗ್ಯ ತಪಾಸಣೆ ಮಾಡಿಕೊಂಡರು.

ಲಯನ್ಸ್ ಕ್ಲಬ್ ನ ಪೂವಯ್ಯ, ಪ್ರಶಾಂತ್, ಪವನ್, ಮುಕ್ತಾರ್ ಅಹಮದ್, ಸಂತೋಷ್ ,ವೈ ಬಿ ಸುರೇಶ್, ದೊಡ್ಡಮನೆ ಪ್ರಭಾಕಾರ್. ಆದರ್ಶ, ಲ್ಯಾಬ್ ಆದರ್ಶ, ಸೈಫ್ ಹಾಗೂ ಮ್ಯಾನ್ ಕೈಂಡ್ ಫಾರ್ಮ ದ ಸೂರ್ಯ ಪಟೇಲ್ ಮತ್ತು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಇದ್ದರು‌.