ರೈತನಿಂದಲೇ ನಮ್ಮ ಬದುಕು, ದೇಶದ ಅಭಿವೃದ್ಧಿ ಸಾಧ್ಯ

| Published : Feb 28 2024, 02:36 AM IST

ಸಾರಾಂಶ

ರೈತರು ಆಶಾದಾಯಕ ಬದುಕು ಸಾಗಿಸುತ್ತಾರೆ. ಎಷ್ಟೇ ಕಷ್ಟ ಬಂದರೂ ಅವರು ಬಿಡುವುದಿಲ್ಲ, ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂಥ ಬದುಕು ನಮಗೂ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ರಫ್ತುದಾರರು, ಖರೀದಿದಾರರು ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.

ಕೊಪ್ಪಳ: ನಮ್ಮ ದೇಶದ ಅಭಿವೃದ್ಧಿ ಹಾಗೂ ನಮ್ಮ ಬದುಕು ನಿಂತಿರುವುದು ರೈತರ ಮೇಲೆ. ಅವರಿಂದ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಂಸದ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.

ಕೊಪ್ಪಳ ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಕೆಪೆಕ್) ಸಹಯೋಗದಲ್ಲಿ ಮಂಗಳವಾರ ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳ ತೋಟಗಾರಿಕೆ ಉತ್ಪನ್ನಗಳ ಕುರಿತು ರೈತರಿಗೆ ರಫ್ತುದಾರರ/ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶ-2024 ಉದ್ಘಾಟಿಸಿ ಅವರು ಮಾತನಾಡಿದರು. ರೈತರು ಆಶಾದಾಯಕ ಬದುಕು ಸಾಗಿಸುತ್ತಾರೆ. ಎಷ್ಟೇ ಕಷ್ಟ ಬಂದರೂ ಅವರು ಬಿಡುವುದಿಲ್ಲ, ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂಥ ಬದುಕು ನಮಗೂ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ. ಇಡೀ ದೇಶಕ್ಕೆ ಅನ್ನ ಹಾಕುವ ರೈತರು ನೆಮ್ಮದಿಯಿಂದ ಇರುವಂತಾಗಬೇಕು ಎಂದರು.ರೈತ ಸಮುದಾಯ ಇಂದು ಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದೆ. ಹೀಗಾಗಿ, ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಆಗಬೇಕು. ರೈತರು ತಮ್ಮ ಉತ್ಪಾದನೆಯನ್ನು ಮಾರಾಟ ಮಾಡುವಾಗ ಜಾಗೃತಿಯಿಂದ ಇರಬೇಕು. ಗಂಗಾವತಿ ಏರಿಯಾದಲ್ಲಿ ಬತ್ತ ಮಾರಾಟ ಮಾಡಿ, ಕೈ ಸುಟ್ಟುಕೊಂಡಿದ್ದಾರೆ. ಖರೀದಿದಾರರು ನಾಪತ್ತೆಯಾಗಿದ್ದಾರೆ. ಹೀಗಾಗಿ, ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ, ರೈತರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ನೋಂದಾಯಿತ ಕಂಪನಿಗಳ ಮೂಲಕವೇ ಮಾರಾಟ ಮಾಡಬೇಕು ಎಂದರು.

ಈಗ ಕೇಂದ್ರ ಸರ್ಕಾರವೂ ರೈತರಿಗಾಗಿ ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ. ಕೋಟಿ ಕೋಟಿ ಸಬ್ಸಿಡಿ ನೀಡುತ್ತಿದೆ. ಅಂಥ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದರು.

ಅಂಚೆ ಇಲಾಖೆಯ ಮೂಲಕವೂ ರೈತರು ತಮ್ಮ ಉತ್ಪನ್ನಗಳನ್ನು ದೇಶ, ವಿದೇಶಗಳಿಗೂ ರಫ್ತು ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಮುಖ್ಯವಾಗಿದೆ. ಜಿಲ್ಲೆಯಲ್ಲಿ ಸದ್ಯ ಶೇ. 10 ರಷ್ಟು ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದು, ಅದನ್ನು ಶೇ. 30ರಷ್ಟು ವಿಸ್ತರಿಸಿ, ತೋಟಗಾರಿಕೆ ಬೆಳೆಗಳು, ಉತ್ಪನ್ನಗಳನ್ನು ಜಿಲ್ಲೆಯಿಂದ ಬೇರೆಡೆ ರಫ್ತು ಮಾಡುವುದು ನಮ್ಮ ಉದ್ದೇಶವಾಗಿದೆ. ಈ ಕುರಿತು ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಟ್ಟು 1.5 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಯ ಕ್ಷೇತ್ರವನ್ನು ಜಿಲ್ಲೆಯಲ್ಲಿ ವಿಸ್ತರಿಸಬೇಕು. ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕುರಿತು ಆಸಕ್ತ ರೈತರು ತೋಟಗಾರಿಕೆ ಇಲಾಖೆಯನ್ನು ಸಂಪರ್ಕಿಸಿ, ಮಣ್ಣಿನ ಪರೀಕ್ಷೆ ಮಾಡಿಸಿ, ಮಣ್ಣಿನ ಗುಣಕ್ಕೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮಾತನಾಡಿ, ತೋಟಗಾರಿಕೆ ಕ್ಷೇತ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ರೈತರು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಂಗಳೂರು ಲಾಲ್‌ಬಾಗ್‌ನ ಕ್ಷೇತ್ರ ಮತ್ತು ನರ್ಸರಿ ಹಾಗೂ ತಾಳೆ ಬೆಳೆ ಯೋಜನೆಯ ತೋಟಗಾರಿಕೆ ಅಪರ ನಿರ್ದೇಶಕ ಡಾ. ಪಿ.ಎಂ. ಸೊಬರದ, ಹಣ್ಣುಗಳ ವಿಭಾಗದ ತೋಟಗಾರಿಕೆ ಅಪರ ನಿರ್ದೇಶಕ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಕೆ.ಬಿ. ದುಂಡಿ, ಕಲಬುರಗಿ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಮಂಜುನಾಥ ನಾರಾಯಣಪುರ, ಬೆಂಗಳೂರು ಲಾಲ್‌ಬಾಗ್‌ನ ತೋಟಗಾರಿಕೆ ಉಪನಿರ್ದೇಶಕ ಕ್ಷಮಾ ಪಾಟೀಲ್, ನಬಾರ್ಡ್ ವ್ಯವಸ್ಥಾಪಕರು, ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್. ಬಂತ್ನಾಳ್, ಬೆಂಗಳೂರಿನ ಕಿಸಾನ್ ಸಾಥಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಸಿಇಒ ಆದ ಪ್ರೇಮ್ ರಾಠೋಡ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಶಿವಣ್ಣ ಮೂಲಿಮನಿ, ಜಿಲ್ಲೆಯ ಅಭಿನವಶ್ರೀ ತೋಟಗಾರಿಕೆ ರೈತ ಉತ್ಪಾದಕರ ಸಂಸ್ಥೆಯ ಅಧ್ಯಕ್ಷ ಶಿವರಾಮಪ್ಪ ಗಬ್ಬೂರ ಮೊದಲಾದವರು ಇದ್ದರು.