ಸಾರಾಂಶ
ಬಿಜೆಪಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ
ರಾಜ್ಯದಲ್ಲಿ ನಮ್ಮ ನಿರೀಕ್ಷೆಯಷ್ಟು ಸ್ಥಾನ ಬಂದಿಲ್ಲಕನ್ನಡಪ್ರಭ ವಾರ್ತೆ ಕೊಪ್ಪಳ
ಕೇಂದ್ರದಲ್ಲಿ ಬಿಜೆಪಿಯನ್ನು ಮತದಾರರು ತಿರಸ್ಕಾರ ಮಾಡಿದ್ದು, ಇಂಡಿಯಾ ಕೂಟಕ್ಕೆ ಅಧಿಕಾರ ರಚನೆ ಮಾಡುವ ಅವಕಾಶ ಬರುವ ಸಾಧ್ಯತೆ ಇದೆ, ಕಾದು ನೋಡಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಗೆಲುವು ಸಾಧಿಸಿರುವ ಹಿನ್ನೆಲೆ ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಯನ್ನಂತೂ ಮತದಾರರು ತಿರಸ್ಕಾರ ಮಾಡಿದ್ದಾರೆ. ಎಲ್ಲ ಎಕ್ಸಿಟ್ ಪೋಲ್‌ಗಳನ್ನು ಮೀರಿ ಫಲಿತಾಂಶ ಹೊರಬಿದ್ದಿದೆ. ನಮ್ಮ ನಿರೀಕ್ಷೆಯಷ್ಟು ಫಲಿತಾಂಶ ಬಂದಿಲ್ಲವಾದರೂ ದೇಶದ ಹಿತದೃಷ್ಟಿಯಿಂದ ಇಂಡಿಯಾ ಕೂಟಕ್ಕೆ ಬೆಂಬಲ ದೊರೆಯುವ ವಿಶ್ವಾಸವಿದೆ ಎಂದರು.ಮೋದಿ ಮೋದಿ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಾಗ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು, ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಗೆ ಮತದಾನ ಮಾಡುವ ಮೂಲಕ ತಂಗಡಗಿ ಅವರ ಕಪಾಳಕ್ಕೆ ಹೊಡಯಿರಿ ಎಂದು ಹೇಳಿದ್ದರು. ಆಗ ನಾನು ಹೇಳಿದ್ದೆ, ಮತದಾರರೇ ಮತದಾನದ ಮೂಲಕವೇ ನಿಮ್ಮ ಕಪಾಳಕ್ಕೆ ಹೊಡೆಯುತ್ತಾರೆ ಎಂದು. ಅದರಂತೆ ಕೊಪ್ಪಳ ಜಿಲ್ಲೆಯಲ್ಲಿ ಮತದಾರರು ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ಅವರನ್ನು ಗೆಲ್ಲಿಸುವ ಮೂಲಕ ಸರಿಯಾಗಿ ಕಪಾಳಕ್ಕೆ ಹೊಡೆದಿದ್ದಾರೆ ಎಂದರು.
ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದಕ್ಕೆ ಜಿಲ್ಲೆಯ ಎಲ್ಲ ನಾಯಕರು ಶಕ್ತಿಮೀರಿ ಶ್ರಮಿಸಿದ್ದಾರೆ. ಲೀಡ್ ನಮ್ಮ ನಿರೀಕ್ಷೆಯಷ್ಟು ಬಂದಿಲ್ಲವಾದರೂ ಗೆಲುವು ಸಾಧಿಸಿರುವುದು ಖುಷಿ ತಂದಿದೆ. ನಮಗೆ ಗಂಗಾವತಿ ಮತ್ತು ಸಿರಗುಪ್ಪಾದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿದ್ದು, ಸಿಂಧನೂರು ಮತ್ತು ಕುಷ್ಟಗಿ ಹೊರತುಪಡಿಸಿ, ಕನಕಗಿರಿ ಕ್ಷೇತ್ರ ಸೇರಿದಂತೆ ಉಳಿದೆಲ್ಲ ಕಡೆಯೂ ಮತದಾರರು ಉತ್ತಮ ಬೆಂಬಲ ನೀಡಿದ್ದಾರೆ ಎಂದರು.ಕಳೆದ ಹದಿನೈದು ವರ್ಷಗಳಿಂದ ಕ್ಷೇತ್ರ ಕೈತಪ್ಪಿ ಹೋಗಿತ್ತು. ಈಗ ಅದನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಸತತ ಮೂರು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿಗೆ ಈ ಬಾರಿ ಸೋಲಾಗಿದೆ. ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಖುಷಿಯಾಗಿದೆ ಎಂದರು.