ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ ಕ್ಷೇತ್ರದ ಮತದಾರರ ಆಶೀರ್ವಾದಿಂದ ಕೆಪಿಸಿಸಿ ಅಧ್ಯಕ್ಷ, ಗೃಹಸಚಿವ, ಗ್ಯಾರಂಟಿ ಅಧ್ಯಕ್ಷ ಮತ್ತು ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು, ಮತದಾರರ ಋಣ ನನ್ನ ಮೇಲಿದೆ. ೨೦೨೮ಕ್ಕೆ ಮತ್ತೆ ನಮ್ಮ ಸರ್ಕಾರ ಬರುತ್ತೆ ಕೊರಟಗೆರೆ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ನನ್ನ ಆರೋಗ್ಯಕ್ಕಿಂತ ನಿಮ್ಮ ಅಭಿಮಾನವೇ ದೊಡ್ಡದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ತಿಳಿಸಿದರು.

ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್‌, ಮಹಿಳಾ, ಯುವ ಕಾಂಗ್ರೆಸ್ ಮತ್ತು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗದಿಂದ ಭಾನುವಾರ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಅನಾರೋಗ್ಯ ನಿಮಿತ್ತ ಚಿಕಿತ್ಸೆ ಪಡೆಯುತ್ತಿರುವ ಡಿಸಿಎಂ ಅಭಿಮಾನಿಗಳನ್ನು ನಿರಾಸೆ ಮಾಡದೆ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕೈಗೆ ಹಾಕಲಾಗಿದ್ದ ಸೂಜಿ ( ಈಸಿಫಿಕ್ಸ್‌) ತೆಗೆಯದೆ ಮುಖಕ್ಕೆ ಮಾಸ್ಕ ಧರಿಸಿ ಅಭಿಮಾನದ ಸನ್ಮಾನವನ್ನು ಸ್ವೀಕರಿಸುವ ಮೂಲಕ ಸ್ವಕ್ಷೇತ್ರದ ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬಿದರು.

ಎತ್ತಿನಹೊಳೆ ಯೋಜನೆ ಮಾಡೆ ಮಾಡ್ತೀವಿ. ರೈತರ ನೀರಾವರಿ ಸಮಸ್ಯೆ ನಿವಾರಣೆ ಮಾಡ್ತೀನಿ. ಬೈರಗೊಂಡ್ಲು ರೈತರು ವಿರೋಧ ಪಕ್ಷದವರ ಮಾತು ಕೇಳಿ ನೀರಾವರಿ ಯೋಜನೆ ಹಾಳುಮಾಡಿದ್ರು. ಬೈರಗೊಂಡ್ಲು ಬಳಿ ೨೫೦೦ ವಿಸ್ತೀರ್ಣದ ಜಲಾಶಯ ಈಗ ನಮ್ಮ ಕೈತಪ್ಪಿದೆ. ವಡೇರಹಳ್ಳಿ ಬಳಿ ಈಗ ಕೇವಲ ೫೦೦ಎಕರೆ ನೀಡಿದ್ರೆ ಅನುಕೂಲ ಆಗುತ್ತೆ. ಈಗ ಅದಕ್ಕೂ ವಿರೋಧ ಆಗ್ತಿದೆ ಸರ್ಕಾರ ಕೈಕಟ್ಟಿ ಕೂರಲ್ಲ. ವಿನಯವಾಗಿ ಗೌರವದಿಂದ ಕೈಮುಗಿದು ಕೇಳುತ್ತೇನೆ ಜಮೀನು ನೀಡಲು ವಿರೋಧ ಮಾಡಬೇಡಿ ಎಂದು ಮನವಿ ಮಾಡಿದರು.


ತುಮಕೂರು ಮಾಜಿ ಸಂಸದ ಮುದ್ದಹನುಮೇಗೌಡ ಮಾತನಾಡಿ, ರಾಜ್ಯದ ೨ಸಲ ಡಿಸಿಎಂ ಆಗಿರುವ ಕೀರ್ತಿ ಡಾ.ಜಿ.ಪರಮೇಶ್ವರ ಅವರದ್ದು. ೨ಸಲ ಸಿಎಂ ಹುದ್ದೆ ಕೈತಪ್ಪಿದ್ದು ೨೦೨೮ಕ್ಕೆ ನನಸಾಗಲಿ. ಸಿಎಂ ಮತ್ತು ಡಿಸಿಎಂ ಜೋಡೆತ್ತು ಮತ್ತೆ ಅಧಿಕಾರಕ್ಕೆ ಬರಲಿ. ಎತ್ತಿನಹೊಳೆ ಮತ್ತು ರಾಯದುರ್ಗ ರೈಲ್ವೆಯೋಜನೆ ತ್ವರಿತವಾಗಿ ಪೂರ್ಣವಾದರೆ ಜನರ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದ ಎಂದರು.

ಪಾವಗಡ ಶಾಸಕ ವೆಂಕಟೇಶ್ ಮಾತನಾಡಿ, ಡಾ.ಜಿ.ಪರಮೇಶ್ವರ ೨೦೧೩ರಲ್ಲಿ ಕೊರಟಗೆರೆಯಲ್ಲಿ ಗೆದ್ದಿದ್ರೆ ಸಿಎಂ ಆಗ್ತಿದ್ರು. ಗ್ಯಾರಂಟಿ ಯೋಜನೆ ರಾಜ್ಯಕ್ಕೆ ಅನುಷ್ಟಾನ ಮಾಡಿದ ಕೀರ್ತಿ ಇವರದ್ದು. ರಾಜಕೀಯ ಕ್ಷೇತ್ರದಲ್ಲಿ ಡಾ.ಜಿ.ಪರಮೇಶ್ವರ ಇರುವ ತನಕ ಮನೆ ಮಗನಾಗಿ ಇರುತ್ತೇನೆ. ೨೦೨೮ಕ್ಕೆ ಕೊರಟಗೆರೆ ಕ್ಷೇತ್ರದ ಜನರ ಕನಸು ಮತ್ತೆ ನನಸಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಅಧ್ಯಕ್ಷ ಡಾ.ನಾಗಲಕ್ಷ್ಮೀ, ಮಾಜಿ ಶಾಸಕ ಗಂಗಹನುಮಯ್ಯ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಅಶ್ವತ್ಥನಾರಾಯಣ್, ಅರಕೆರೆ ಶಂಕರ್. ಕೆಪಿಸಿಸಿ ಕಾರ್ಯದರ್ಶಿ ದಿನೇಶ್, ಕಾಂಗ್ರೆಸ್‌ ಮಹಿಳಾಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ಭೈರೇಶ್, ಮುಖಂಡರಾದ ಪ್ರೇಮಾಮಹಾಲಿಂಗಪ್ಪ, ಬಲರಾಮಯ್ಯ, ಕೆ.ಆರ್.ಓಬಳರಾಜು, ಎಲ್.ರಾಜಣ್ಣ, ವಿನಯ್, ಅರವಿಂದ್, ರಘುವೀರ್, ಕೆಎಲ್‌ಎಂ ಮಂಜು, ಅಮರ, ಮಹೇಶ್ ಸೇರಿದಂತೆ ಇತರರು ಇದ್ದರು.

ಗಮನ ಸೆಳೆದ ಕಡ್ಲೆಚಿಕ್ಕಿ ಹಾರ

ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದಿಂದ ಸರ್ಕಾರಿ ಬಸ್ ನಿಲ್ದಾಣದ ಮೂಲಕ ಜೂನಿಯರ್ ಕಾಲೇಜು ಮೈದಾನದ ವರೆಗೆ ತೆರೆದ ವಾಹನದಲ್ಲಿ ಡಾ.ಜಿ.ಪರಮೇಶ್ವರ ಬೃಹತ್ ಮೆರವಣಿಗೆ ನಡೆಸಿದರು. ಈ ವೇಳೆ ಕೋಲಾಟ, ಕೊಳ್ಳುಕುಣಿತ, ಯಕ್ಷಗಾನ ಕುಣಿತ, ಕಾಡಿನ ನೃತ್ಯ ವೀರಗಾಸೆ ಗಮನ ಸೆಳೆಯಿತು. ರಸ್ತೆಯುದ್ದಕ್ಕೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಹಿಸಿದರು. ಬೃಹತ್ ಮೆರವಣಿಗೆ ವೇಳೆ ಪಪಂ ಮುಂಭಾಗ ಡಿಸಿಎಂಗೆ ಮಂಜು ಹಾಕಿದ ಕಡ್ಲೆಚಿಕ್ಕಿ ಹಾರವು ಕಾರ್ಯಕರ್ತರ ಗಮನ ಸೆಳೆಯಿತು. ಸರ್ಕಾರಿ ಬಸ್ ನಿಲ್ದಾಣ, ಊರ್ಡಿಗೆರೆ ವೃತ್ತ, ಭೋವಿಕಾಲೋನಿ ಮತ್ತು ಕಾಲೇಜು ಮೈದಾನ ಬಳಿ ಅಭಿಮಾನಿಗಳು ಸೇಬು, ಮೈಸೂರು ಪಾಕ್, ಪೇಡಾ, ಮೊಸಂಬಿಯ ಬೃಹತ್ ಹಾರಗಳನ್ನು ಜೆಸಿಬಿಯ ಮೂಲಕ ಹಾಕಿ ಅಭಿಮಾನ ಮೆರೆದರು.

ಕೋಟ್‌.....ರಾಜ್ಯದ ಪ್ರತಿಕ್ಷೇತ್ರದ ಅಧಿಕಾರಿ ವರ್ಗ ಕೇಂದ್ರ ಸ್ಥಾನದಲ್ಲೇ ಇರಬೇಕಿದೆ. ಜನಪರ ಆಡಳಿತ ಇನ್ನಷ್ಟು ಚುರುಕು ಆಗಲಿದೆ. ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ನಾನು ಮತ್ತು ಕೆಪಿಸಿಸಿ ಅಧ್ಯಕ್ಷ ಹರಿಪ್ರಸಾದ್ ಸೇರಿ ೨೦೨೮ಕ್ಕೇ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರ್ತೇವೆ. ಸಿದ್ದರಾಮಯ್ಯ ಜನಪರ ಆಡಳಿತ ಮುಂದುವರೆಯುತ್ತದೆ.

ಡಾ.ಜಿ.ಪರಮೇಶ್ವರ್‌. ಡಿಸಿಎಂ.