ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಇತ್ತೀಚಿಗೆ ಬಿದ್ದ ಹೆಚ್ಚು ಮಳೆ ಹಾಗೂ ಹವಾಮಾನ ವೈಪರೀತ್ಯದಿಂದ ಮುಸುಕಿನ ಜೋಳದಲ್ಲಿ ಬೂಜು/ ಕೇದಿಗೆ ರೋಗ ಉಲ್ಬಣಗೊಳ್ಳುತ್ತಿದೆ ಎಂದು ಸಸ್ಯರೋಗ ಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪಾ ತಿಳಿಸಿದರು.ನಾಗನಹಳ್ಳಿಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025- 26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಹೋಬಳಿಯ ರೈತ ಸಂಪರ್ಕ ಕೇಂದ್ರದ ಆವರಣಲ್ಲಿ ಮಂಗಳವಾರ ಆಯೋಜಿಸಿದ್ದ ಶುಂಠಿ, ತೆಂಗು ಮತ್ತು ಬಾಳೆ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳು ಹಾಗೂ ಮುಸುಕಿನಜೋಳದ ಬೆಳೆಯಲ್ಲಿ ಬೂಜು ರೋಗ ಮತ್ತು ಸೈನಿಕ ಹುಳುವಿನ ಬಾದೆಗೆ ಹತೋಟಿ ಕ್ರಮಗಳು ಕುರಿತು ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೂಜು ರೋಗದಿಂದ ಇಳುವರಿ ನಷ್ಟ ಸಾಧ್ಯತೆ ಇರುವುದರಿಂದ ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8ಡಬ್ಲುಪಿ+ ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂಧ್ರನಾಶಕವನ್ನು ಪ್ರತೀ 1 ಲೀಟರ್ ನೀರಿಗೆ 2 ಗ್ರಾಂ ನಂತೆ (ಎಕರೆಗೆ 600 ಗ್ರಾಂ) ಮಿಶ್ರಣ ಮಾಡಿ ಗರಿಗಳ ತಳಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸಬೇಕು ಎಂದು ಅವರು ಹೇಳಿದರು.ಮುಸುಕಿನಜೋಳ ಬಿತ್ತನೆಗೆ ಮೊದಲು ಪ್ರತಿ 1 ಕೆ.ಜಿ ಬಿತ್ತನೆ ಬೀಜಕ್ಕೆ 3 ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ+ ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂಧ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇ.30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ. ಬೆಂಗಳೂರು ಕೃಷಿ ವಿವಿ ಅಭಿವೃದ್ಧಿ ಪಡಿಸಿರುವ ಬೂಜು/ ಕೇದಿಗೆ ರೋಗ ನಿರೋಧಕ ತಳಿಗಳಾದ ಎಂಎಎಚ್-14-5, ಎಂಎಎಚ್-1137 (ಹೇಮ), ಎಂಎಎಚ್-2049(ನಿತ್ಯಶ್ರೀ), ಎಂಎಎಚ್-14-138, ಎಂಎಎಚ್-15-84 ತಳಿಗಳನ್ನು ಬೆಳೆಯುವುದು ಸೂಕ್ತ ಎಂದು ಅವರು ಸಲಹೆ ನೀಡಿದರು.
ಶುಂಠಿ, ಬಾಳೆ, ತೆಂಗು ಮತ್ತು ಅಡಿಕೆ ಬೆಳೆಯ ಬೇಸಾಯ ಕ್ರಮಗಳ ಕುರಿತು ತೋಟಗಾರಿಕೆ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ಸಿದ್ದಪ್ಪ ಮಾಹಿತಿ ನೀಡಿದರು.ಅಂತರಸಂತೆ ಹೋಬಳಿ ಕೃಷಿ ಅಧಿಕಾರಿ ಜಿ. ಸಿದ್ದಪ್ಪಸ್ವಾಮಿ, ಪತ್ರಕರ್ತ ಪುಟ್ಟರಾಜು, ಹೊಸಹೊಳಲು ಗ್ರಾಪಂ ಸದಸ್ಯ ಟಿ. ಮಂಜು, ಕರ್ನಾಟಕ ಭೀಮಸೇನೆ ತಾಲೂಕು ಅಧ್ಯಕ್ಷ ಪ್ರಕಾಶ್ ಬುದ್ದ, ನೂರಲಕುಪ್ಪೆ ರೈತ ಸಿ. ರಾಜು, ರಾಮೇನಹಳ್ಳಿ ರೈತ ಶ್ರೀನಿವಾಸ, ಆತ್ಮ ಯೋಜನೆಯ ತಾಲೂಕು ತಾಂತ್ರಿಕ ವ್ಯವಸ್ಥಾಪಕಿ ಶಿಲ್ಪಾ, ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರಕ್ಷಿತಾ, ವಿನಯ್ ಅಸೋಡೆ ಇದ್ದರು. 60 ಜನ ರೈತರು ಭಾಗವಹಿಸಿದ್ದರು. ಕೃಷಿ ಅಧಿಕಾರಿ ಎಚ್.ಆರ್. ರಾಜಶೇಖರ ನಿರೂಪಿಸಿದರು.