ಸಾರಾಂಶ
ಪ್ರತಿ ದಿನ 400 ರಿಂದ 500 ಮಂದಿ ವಿವಿಧ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ಪಟ್ಟಣದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಚೀಟಿಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಸಾಲುಗಟ್ಟಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಬಂದ ಹೊರ ರೋಗಿಗಳು ಚೀಟಿಗಾಗಿ ಸಾಲು ನಿಂತು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿ ದಿನ 400 ರಿಂದ 500 ಮಂದಿ ವಿವಿಧ ಗ್ರಾಮಗಳಿಂದ ರೋಗಿಗಳು ಚಿಕಿತ್ಸೆ ಪಡೆಯಲು ಪಟ್ಟಣದ ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಚಿಕಿತ್ಸೆ ಪಡೆಯಲು ಚೀಟಿಗಾಗಿ ಆಸ್ಪತ್ರೆಯ ಮುಂಭಾಗದಲ್ಲಿ ಸಾಲುಗಟ್ಟಿ ಗಂಟೆಗಟ್ಟಲೆ ನಿಲ್ಲುವಂತಾಗಿದೆ.
ಚಿಕಿತ್ಸೆಗಾಗಿ ಬಂದ ರೋಗಿಗಳ ಆಧಾರ್ ಕಾರ್ಡ್ ನಂ ಜೊತೆಗೆ ಮೊಬೈಲ್ ಸಂಖ್ಯೆ ಕೂಡ ಹೊರ ರೋಗಿಯ ಚಿಕಿತ್ಸಾ ಚೀಟಿಯಲ್ಲಿ ನಮೂದಾಗಬೇಕಿದೆ. ಆಧಾರ್ ಕಾರ್ಡ್ ಹಾಗೂ ಮೊಬೈಲ್ ಜೊತೆಗೆ ತರದಿದ್ದರೆ ಕೆಲವು ರೋಗಿಗಳ ಪರಿಸ್ಥಿತಿ ಹೇಳತೀರದಾಗಿದೆ. ಬಂದ ಹೋರ ರೋಗಿಯ ಮೊಬೈಲ್ ನಂಬರ್ ಕೇಳಿದಾಗಿ ಅದರ ಓಟಿಪಿ ಹೇಳಬೇಕು. ಇದು ಗ್ರಾಮೀಣ ಪ್ರದೇಶದ ಕೆಲ ವಯಸ್ಸಾದವರು, ಮಹಿಳೆಯರಿಗೆ ತಿಳಿಯುವುದಿಲ್ಲ. ಇದರಿಂದ ಕಾದು ಕಾದು ಸುಸ್ತಾಗಬೇಕಿದೆ. ಚಿಕಿತ್ಸೆಗೆ ಬಂದವರಿಗೆ ತ್ವರಿತಾಗಿ ಚೀಟಿ ಇಲ್ಲದೆ ಚಿಕಿತ್ಸೆ ನೀಡುವಂತಿಲ್ಲ.ಚಿಕಿತ್ಸಾ ಚೀಟಿಗಾಗಿ ಸಾಲಿನಲ್ಲಿ ರೋಗಿಗಳು ನರಳುವ ಪರಿಸ್ಥಿತಿ ಇದೆ. ಇದಕ್ಕೆ ಬೇರೊಂದು ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆಸ್ಪತ್ರೆ ಆಡಳಿತ ಮಂಡಳಿ ಮಾಡಬೇಕಾಗಿದೆ. ರೋಗಿಗಳು ಚಿಕಿತ್ಸೆಗಾಗಿ ಬೆಳಗ್ಗೆ 8 ಗಂಟೆಗೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ತಕ್ಷಣದಲ್ಲಿ ಚಿಕಿತ್ಸೆ ಇಲ್ಲದೆ ಪರದಾಡುವಂತಾಗುತ್ತಿದೆ.
ಕೂಡಲೇ ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಇಲ್ಲದಿದ್ದರೆ ಆಸ್ಪತ್ರೆ ಮುಂಭಾಗದಲ್ಲಿ ಧರಣಿ ಕುಳಿತು ಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಚಂದಗಾಲು ಶಂಕರ್ ಆಸ್ಪತ್ರೆ ಆಡಳಿತ ಸಮಿತಿಗೆ ಎಚ್ಚರಿಸಿದ್ದಾರೆ.