ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾ ಕಾರ್ಮಿಕ ಅಧಿಕಾರಿ ತೇಜೋವತಿ ಅವರು ಖಾಸಗಿ ಕಂಪನಿಯ ಮಾಲೀಕರೊಂದಿಗೆ ಸೇರಿ ಎಐಟಿಯುಸಿ ಜಿಲ್ಲಾ ಮುಖಂಡರ ಮೇಲೆ ಇಲ್ಲಸಲ್ಲದ ದೂರು ನೀಡಿ, ಅವರ ತೇಜೋವಧೆಗೆ ಹುನ್ನಾರ ನಡೆಸಿರುವುದನ್ನು ಖಂಡಿಸಿ ಇಂದು ಎಐಟಿಯುಸಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.ನಗರದ ಟೌನ್‌ಹಾಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ನೂರಾರು ಸಂಖ್ಯೆಯಲ್ಲಿದ್ದ ಎಐಟಿಯುಸಿಯ ವಿವಿಧ ವಿಭಾಗಗಳ ಕಾರ್ಯಕರ್ತರು, ಕಾರ್ಮಿಕ ವಿರೋಧಿ ನೀತಿ, ಮಾಲಿಕರ ಪರ ದಲ್ಲಾಳಿಯಾಗಿ ಕೆಲಸ ಮಾಡುತ್ತಿರುವ ಜಿಲ್ಲಾ ಕಾರ್ಮಿಕ ಅಧಿಕಾರಿ ಅವರನ್ನು ಸೇವೆಯಿಂದ ಅಮಾನತು ಮಾಡಿ,ಸೂಕ್ತ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆದ ಪ್ರತಿಭಟನಾ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಎಐಟಿಯುಸಿ ರಾಜ್ಯ ಉಪಾಧ್ಯಕ್ಷರಾದ ಅಂಜಾದ್, ಕಾರ್ಮಿಕ ಕಾಯ್ದೆ ಉಲ್ಲಂಘನೆ ಮಾಡಿ, ಮಾಲೀಕರ ಪರವಾಗಿ ನಿಂತು, ಕನಿಷ್ಠ ಕೂಲಿ ನೀತಿ ಜಾರಿಗೆ ತರದ ಜಿಲ್ಲಾ ಕಾರ್ಮಿಕ ಅಧಿಕಾರಿಯನ್ನು ಪ್ರಶ್ನಿಸಿದ ಅವರು, ಎಐಟಿಯುಸಿಯ ಮುಖಂಡರಾದ ಗಿರೀಶ್ ಅವರ ತೇಜೋವಧೆಗೆ ಯತ್ನಿಸಿರುವ ಕಾರ್ಮಿಕ ಅಧಿಕಾರಿ ಬಹಿರಂಗವಾಗಿ ಸಂಘಟನೆಯ ಮುಖಂಡರ ಕ್ಷಮೆಯಾಚಿಸಬೇಕು. ಹಾಗೆಯೇ ಸರಕಾರ ಕೂಡಲೇ ಅವರನ್ನು ಸೇವೆಯಿಂದ ಅಮಾನತು ಮಾಡಿ, ತನಿಖೆ ನಡೆಸಬೇಕೆಂದರು.ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸತ್ಯಾನಂದ ಮಾತನಾಡಿ, ತುಮಕೂರು ಜಿಲ್ಲಾ ಕಾರ್ಮಿಕ ಅಧಿಕಾರಿ ಅವರು ಮಾಡುತ್ತಿರುವ ಕಾರ್ಮಿಕ ವಿರೋಧಿ ನೀತಿಗಳ ವಿರುದ್ದ ಈಗಾಗಲೇ ಕಾರ್ಮಿಕ ಇಲಾಖೆಯ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಅವರು ಮಾಲೀಕರ ಪರವಾದ ನಿಲುವುಗಳನ್ನು ಕೈಬಿಟ್ಟು, ಕಾರ್ಮಿಕ ನಿಯಮಗಳನ್ನು ಜಾರಿಗೆ ತರದಿದ್ದರೆ ಮುಂದಿನ ದಿನಗಳಲ್ಲಿ ಕಾರ್ಮಿಕ ಮಂತ್ರಿಗೆ ದೂರು ಸಲ್ಲಿಸಲಾಗುವುದು, ಜೊತೆಗೆ ಇಡೀ ರಾಜ್ಯದಲ್ಲಿ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ರಾಜ್ಯ ಬಿಸಿಯೂಟ ಕಾರ್ಯಕರ್ತೆಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಮರಿಯಮನ್ನವರ್, ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎ.ವಿಜಯಭಾಸ್ಕರ್ ಮಾತನಾಡಿದರು.ಪ್ರತಿಭಟನೆಯಲ್ಲಿ ಆಶಾ ಕಾರ್ಯಕರ್ತೆಯರ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯಮ್ಮ, ಕಾರ್ಮಿಕ ಮುಖಂಡರಾದ ಗಿರೀಶ್, ಕಂಬೇಗೌಡ, ಶಶಿಧರ್, ಅಶ್ವಥನಾರಾಯಣ್, ಚಂದ್ರಶೇಖರ್.ಜಿ, ದೇವರಾಜು ಶಿರಾ, ಗೋವಿಂದ ರಾಜು,ಗಂಗಣ್ಣ, ರಾಮಕೃಷ್ಣ, ಬಾಬು, ಗೋವಿಂದರಾಜು, ಪಾಪಣ್ಣಿ, ಗೋಪಾಲ್,ವೆಂಕಟೇಶ್, ಕಲಾವತಿ, ರಾಧಮ್ಮ, ಪುಷ್ಪಾವತಿ,ಉಮಾ, ವನಜಾಕ್ಷಿ, ಮೀನಾಕ್ಷಿ, ಸಿಂಧೂರ್ ಪೋರ್ಸ್ ಗೋಪಾಲ್, ನವೀನ್, ನಾರಾಯಣ್, ಪಿಟ್‌ವೆಲ್ ರಮೇಶ್, ಜಾಫರ್ ಮತ್ತಿತರರು ಪಾಲ್ಗೊಂಡಿದ್ದರು.