ಹೊಸಪೇಟೆ: ಸನಾತನ ಧರ್ಮವನ್ನು ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ. ನಾಶಪಡಿಸುತ್ತೇವೆ ಎಂದು ಹೇಳಿಕೊಂಡವರೇ ನಾಶವಾಗಲಿದ್ದಾರೆ ಎಂದು ಚಿಂತಾಮಣಿ ಮಠದ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮೀಜಿ ಹೇಳಿದರು.
ನಗರದಲ್ಲಿ ಹಿಂದೂ ಸನಾತನ ಸಂರಕ್ಷಣಾ ಸಮಿತಿಯಿಂದ ಶುಕ್ರವಾರ ಸಂಜೆ ಸನಾತನ ಧರ್ಮ ನಾಶಪಡಿಸುವುದಾಗಿ ತಮಿಳುನಾಡಿನ ವಿಧಾನಸಭೆಯಲ್ಲೇ ಹೇಳಿಕೆ ನೀಡಿದ ಡಿಎಂಕೆ ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ನಗರದ ವಡಕರಾಯ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಸನಾತನ ಧರ್ಮಕ್ಕೆ ಹುಟ್ಟೇ ಇಲ್ಲ. ಹೀಗಾಗಿ ಅದರ ನಾಶ ಸಹ ಸಾಧ್ಯವಿಲ್ಲ. ಇಂದು ವಿದೇಶದಲ್ಲಿ ಸಹ ಸನಾತನ ಧರ್ಮವನ್ನು ಅನುಸರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೂಗಳು ಒಗ್ಗಟ್ಟಿನಿಂದ ಇದ್ದರೆ ಇಂತಹ ಕಿಡಿಗೇಡಿಗಳ ಹೇಳಿಕೆಯಿಂದ ವಿಚಲಿತರಾಗುವ ಪ್ರಮೇಯ ಬರುವುದಿಲ್ಲ. ಸನಾತನ ಧರ್ಮಕ್ಕೆ ಅಪಚಾರ ಎಸಗಿದಾಗ ನಾವೆಲ್ಲ ಒಗ್ಗಟ್ಟು ಪ್ರದರ್ಶಿಸಿ ಮತ್ತೆ ಇಂತಹ ದುಸ್ಸಾಹಸಕ್ಕೆ ಇಳಿಯದಂತೆ ಎಚ್ಚರಿಕೆ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು.
ಹಂಪಿ ಮಾತಂಗ ಪೀಠದ ಪೂರ್ಣಾನಂದ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು.ಬೃಹತ್ ಮೆರವಣಿಗೆ:
ವಡಕರಾಯ ದೇವಸ್ಥಾನದಿಂದ ಆರಂಭವಾದ ಪಂಜಿನ ಮೆರವಣಿಗೆ ಮೇನ್ ಬಜಾರ್, ದೊಡ್ಡ ಮಸೀದಿ, ಗಾಂಧಿ ಚೌಕ, ಬಸ್‌ನಿಲ್ದಾಣ ಮೂಲಕ ಡಾ.ಪುನೀತ್ ರಾಜ್‌ಕುಮಾರ್ ವೃತ್ತ ತಲುಪಿತು. ಎಲ್ಲ ಸಮುದಾಯಗಳ ಸಾವಿರಾರು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಡಾ.ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ನಡೆದ ಸಾರ್ಜಜನಿಕ ಸಭೆಯಲ್ಲಿ ಶಿವಮೊಗ್ಗದ ಪ್ರೇರಕ ಭಾಷಣಕಾರ ಹಾಗೂ ವೈದ್ಯ ಡಾ.ರಾಹುಲ್ ದೇವರಾಜ್ ಸನಾತನ ಧರ್ಮದ ಧರ್ಮವನ್ನು ನಾಶಪಡಿಸಲು ಸಾಧ್ಯವೇ ಇಲ್ಲ ಎಂದು ಖಂಡತುಂಡವಾಗಿ ಹೇಳಿದರು.
ಹಿಂದೂಗಳು ಒಗ್ಗಟ್ಟು ಪ್ರದರ್ಶಿಸುವುದು ಕಡಿಮೆ, ಅವರಲ್ಲಿ ಒಗ್ಗಟ್ಟು ಇದ್ದರೆ ನೂರಾರು ಸ್ಟಾಲಿನ್‌ಗಳು ಬಂದರೂ ಸನಾತನ ಧರ್ಮಕ್ಕೆ ಒಂದಿಷ್ಟು ಕೊಂಕು ಉಂಟುಮಾಡುವುದು ಸಹ ಸಾಧ್ಯವಿಲ್ಲ ಎಂದರು.ಎರಡು ಮನವಿ:
ರಾಷ್ಟ್ರಪತಿ ಹಾಗೂ ಜಿಲ್ಲಾಡಳಿತ ಉಲ್ಲೇಖಿಸಿ ಎರಡು ಮನವಿಗಳನ್ನು ಉಪವಿಭಾಗಾಧಿಕಾರಿ ಪಿ.ವಿವೇಕಾನಂದ ಅವರ ಮೂಲಕ ಕಳುಹಿಸಿಕೊಡಲಾಯಿತು.ರಾಷ್ಟ್ರಪತಿ ಅವರಿಗೆ ಕಳುಹಿಸಿದ ಮನವಿಯಲ್ಲಿ ಉದಯನಿಧಿ ಸ್ಟಾಲಿನ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ, ಉಗ್ರ ಶಿಕ್ಷೆ ವಿಧಿಸಬೇಕು. ಸುಪ್ರೀಂ ಕೋರ್ಟ್ ಸಹ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲಾಢಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸನಾತನ ಹಿಂದೂ ಧರ್ಮ ನಾಶವಾಗಬೇಕೆಂದು ಚರ್ಚೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.ಪ್ರತಿಭಟನೆಯಲ್ಲಿ ಹಿಂದೂ ಸನಾತನ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷ ಅಶೋಕ್ ಜೀರೆ, ಸಂಚಾಲಕ ಎನ್.ಎಸ್. ರೇವಣಸಿದ್ದಪ್ಪ, ಸಹ ಸಂಚಾಲಕ ಅಪ್ಪರಾವ್ ಸಾನಬಾಳ್, ಮುಖಂಡರಾದ ಸಿದ್ಧಾರ್ಥ ಸಿಂಗ್, ಸಂದೀಪ್ ಸಿಂಗ್, ರಾಯಸಂ ಶ್ರೀನಿವಾಸ್, ಶಾರದಾ ಕುಲಕರ್ಣಿ, ಸುಜಾತಾ ರೇವಣಸಿದ್ದಪ್ಪ ಸೇರಿದಂತೆ ಎಲ್ಲಾ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು.