ಗದಗ: ತಮ್ಮ ವರ್ಗಾವಣೆ ಆದೇಶ ಹೊರಬಿದ್ದಿದ್ದರೂ ಕಳೆದ ಎಂಟು ತಿಂಗಳಿಂದ ಕರ್ತವ್ಯದಿಂದ ಬಿಡುಗಡೆ ಮಾಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಲಾಖೆಯ ಕಿರಿಯ ಅಧಿಕಾರಿ ಉಮೇಶ ಮಾಡಳ್ಳಿ ಅವರು ಕಚೇರಿ ಎದುರೇ ಮಂಗಳವಾರ ಧರಣಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

​ಸದ್ಯ ವಿಜಯನಗರ ಜಿಲ್ಲೆಗೆ ವರ್ಗಾವಣೆಯಾಗಿರುವ ಉಮೇಶ ಮಾಡಳ್ಳಿ ಅವರಿಗೆ ಸುಮಾರು ಎಂಟು ತಿಂಗಳ ಹಿಂದೆಯೇ ಸರ್ಕಾರದಿಂದ ವರ್ಗಾವಣೆ ಆದೇಶ ಸಿಕ್ಕಿದೆ. ಆದರೆ, ಆದೇಶ ಹೊರಬಿದ್ದ ನಂತರವೂ ಇಲಾಖೆಯ ಹಿರಿಯ ಅಧಿಕಾರಿಗಳು ಅವರನ್ನು ಕರ್ತವ್ಯದಿಂದ ಮುಕ್ತಗೊಳಿಸದೇ ಅದೇ ಸ್ಥಳದಲ್ಲಿ ಮುಂದುವರಿಸಿದ್ದಾರೆ. ಈ ಕುರಿತು ಹಲವು ಬಾರಿ ಇಲಾಖೆಯ ಹಿರಿಯ ಅಧಿಕಾರಿ ಕೆ. ನಾಗಭೂಷಣ್ ಅವರಿಗೆ ನೇರವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲವಂತೆ.

ಅಧಿಕಾರಿಗಳು ವಿವಿಧ ಕಾರಣಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ. ವರ್ಗಾವಣೆ ಜಾರಿಯಾಗದ ಕಾರಣ ಹೊಸ ಸ್ಥಳದಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗದೆ ತೀವ್ರ ಮಾನಸಿಕ ಒತ್ತಡ ಹಾಗೂ ವೃತ್ತಿ ಜೀವನದಲ್ಲಿ ಆಡಳಿತಾತ್ಮಕ ಅನಿಶ್ಚಿತತೆ ಎದುರಿಸುತ್ತಿರುವುದಾಗಿ ಅವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

​ಇತ್ತ ಇಲಾಖೆಯ ಮೂಲಗಳ ಪ್ರಕಾರ, ಕಚೇರಿಯಲ್ಲಿ ತೀವ್ರ ಸಿಬ್ಬಂದಿ ಕೊರತೆ ಇರುವುದರಿಂದಲೇ ಬದಲಿ ಸಿಬ್ಬಂದಿ ನಿಯೋಜನೆ ಆಗುವವರೆಗೆ ಉಮೇಶ ಅವರನ್ನು ರಿಲೀವ್ ಮಾಡಲಾಗಿಲ್ಲ ಎನ್ನಲಾಗಿದೆ. ಆದರೆ, ಸಿಬ್ಬಂದಿ ಕೊರತೆಯ ನೆಪ ನೀಡಿ ಅಧಿಕಾರಿಯೊಬ್ಬರನ್ನು ತಿಂಗಳುಗಟ್ಟಲೆ ತಡೆಹಿಡಿಯುವುದು ಎಷ್ಟರ ಮಟ್ಟಿಗೆ ಸಮಂಜಸ ಎಂಬ ಪ್ರಶ್ನೆ ಕೇಳಿಬರುತ್ತಿದೆ.


ಮಳೆಗೆ ಕಿತ್ತುಹೋದ ಬದು

ನರಗುಂದ: ಭಾನುವಾರ ಮತ್ತು ಸೋಮವಾರ ಸುರಿದ ಅಬ್ಬರ ಮಳೆಗೆ ಪಟ್ಟಣ ಮತ್ತು ವಿವಿಧ ಗ್ರಾಮಗಳಲ್ಲಿ ರೈತರ ಜಮೀನಿನ ಬದುವು ಕಿತ್ತು ಹೋಗಿವೆ.ರಭಸದ ಮಳೆಗೆ ತೆಗ್ಗು ಪ್ರದೇಶಗಳಲ್ಲಿ ವಾಸ ಮಾಡುವ ಮನೆಗಳಿಗೆ ಸೋಮವಾರ ಮಳೆ ನೀರು ನುಗ್ಗಿದ್ದರಿಂದ ಜನರು ನೀರನ್ನು ಮನೆಯಿಂದ ಹೊರಹಾಕಲು ಹರಸಾಹಸಪಟ್ಟರು. ಅದೇ ರೀತಿ ಕೆಲವು ಬಡಾವಣೆಗಳಿಗೆ ಹೋಗುವ ರಸ್ತೆಗಳು ಕೆಸರುಮಯವಾಗಿದ್ದರಿಂದ ಮಕ್ಕಳು ಮತ್ತು ವಯೋವೃದ್ಧರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡಬೇಕಾಯಿತು.